ಕೋಲಾರ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಡೆ ಕುತೂಹಲ ಮೂಡಿಸಿದ್ದು, ಕೋಲಾರ ಭೇಟಿಗೂ ಮುನ್ನ ಸೋಮವಾರ ಬೆಂಗಳೂರಿನಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಕೋಲಾರದಲ್ಲಿ ಮಧ್ಯಾಹ್ನ ಕೋಲಾರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಲಿದೆ. ಕೆ.ಆರ್.ರಮೇಶ್ ಕುಮಾರ್ ಬಣದ ಪಾರಮ್ಯದಿಂದ ಮುನಿಸಿಕೊಂಡಿರುವ ಮುನಿಯಪ್ಪ ಬಣ ಈ ಸಭೆಗೆ ಗೈರಾಗಲಿದೆ ಎನ್ನಲಾಗಿತ್ತು.
ಅಷ್ಟರಲ್ಲಿ ಹೊಸ ದಾಳ ಎಸೆದಿರುವ ಸಿದ್ದರಾಮಯ್ಯ ಮುನಿಸು ತಣಿಸಲು ಸೀದಾ ಮುನಿಯಪ್ಪ ಮನೆಗೆ ಹೋಗಿದ್ದಾರೆ. ಅಲ್ಲದೇ, ಅವರ ಬೆಂಬಲಿಗರನ್ನು ಭೇಟಿಯಾಗಿ ಸಭೆಗೆ ಬರುವಂತೆ ಹೇಳಿದ್ದಾರೆ. ಜಿಲ್ಲಾ ಕಾಂಗ್ರೆಸ್ ನ ಬಹುತೇಕ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಮುನಿಯಪ್ಪ ನಿವಾಸದಲ್ಲಿ ಸೇರಿದ್ದರು.
ಹೀಗಾಗಿ, ಸಭೆಯಲ್ಲಿ ಮುನಿಯಪ್ಪ ಹಾಗೂ ಬೆಂಬಲಿಗರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಇದರೊಂದಿಗೆ ಒಂದೇ ವೇದಿಕೆಯಲ್ಲಿ ರಮೇಶ್ ಕುಮಾರ್ ಹಾಗೂ ಮುನಿಯಪ್ಪ ಕಾಣಿಸಿಕೊಳ್ಳುವ ಸಂಭವವಿದೆ.
ಉಭಯ ಬಣಗಳಲ್ಲಿನ ಭಿನ್ನಾಭಿಪ್ರಾಯ ಶಮನಗೊಳಿಸದೆ ಸಭೆಗೆ ಹಾಜರಾಗುವುದಿಲ್ಲ ಎಂಬುದು ಮುನಿಯಪ್ಪ ಅವರ ಪ್ರಮುಖ ಷರತ್ತಾಗಿತ್ತು.
ಈಗ ಮುನಿಯಪ್ಪ ಬಣದ ಬೆಂಬಲ ಪಡೆದಿರುವ ಸಿದ್ದರಾಮಯ್ಯ ಇಂದೇ ಕ್ಷೇತ್ರ ಘೋಷಣೆ ಮಾಡುವ ಸಾಧ್ಯತೆ ಇದೆ.
ಸಭೆಗೂ ಮುನ್ನ ಕೋಲಾರದ ಕಾಂಗ್ರೆಸ್ ಭವನದಲ್ಲಿ ಉಭಯ ಬಣಗಳನ್ನು ಮುಖಾಮುಖಿಯಾಗಿಸಿ ಮಾತನಾತನಾಡಲಿದ್ದಾರೆ ಎಂಬುದು ತಿಳಿದುಬಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.