ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದೇ ಪದೇ ಹಿಂದೂ ಧರ್ಮದ ಅವಹೇಳನ: ಅಶೋಕ

Last Updated 23 ಆಗಸ್ಟ್ 2022, 16:21 IST
ಅಕ್ಷರ ಗಾತ್ರ

ಬೆಂಗಳೂರು: ‘ದೇವಸ್ಥಾನಗಳಿಗೆ ಹೋಗುವಾಗ ಕೆಲವು ನೇಮ– ನಿಷ್ಠೆಗಳು ಮತ್ತು ಶ್ರದ್ಧೆ ಇರುತ್ತವೆ. ಅದನ್ನು ಎಲ್ಲ ಆಸ್ತಿಕ ಹಿಂದೂಗಳು ಪಾಲಿಸುತ್ತಾರೆ. ಅದರ ಬಗ್ಗೆ ಅರಿವೇ ಇಲ್ಲದ ಸಿದ್ದರಾಮಯ್ಯ ಅವರು ಹಿಂದೂ ಧರ್ಮ ಮತ್ತು ಧಾರ್ಮಿಕ ಶ್ರದ್ಧೆಯನ್ನು ಅವಹೇಳನ ಮಾಡುತ್ತಲೇ ಬಂದಿದ್ದಾರೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ಟೀಕಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಸ್ಲಿಮರು ರಮ್ಜಾನ್‌ನಲ್ಲಿ ಉಪವಾಸ ಮಾಡುತ್ತಾರೆ, ಕ್ರೈಸ್ತರು ಅವರ ಹಬ್ಬಗಳಲ್ಲಿ ಮತ್ತು ಚರ್ಚ್‌ಗಳಲ್ಲಿ ಕೆಲವು ನಿಯಮಗಳನ್ನು ಪಾಲಿಸುತ್ತಾರೆ. ಸಿದ್ದರಾಮಯ್ಯ ಆ ಧರ್ಮಗಳ ಅನುಯಾಯಿಗಳ ನಿಯಮಗಳು ಮತ್ತು ಶ್ರದ್ಧೆಯನ್ನು ಪ್ರಶ್ನಿಸುತ್ತಾರೆಯೇ. ಉಪವಾಸ ಮಾಡಬೇಡಿ ಎಂದು ಹೇಳುತ್ತಾರೆಯೇ’ ಎಂದೂ ಪ್ರಶ್ನಿಸಿದರು.

‘ಸಿದ್ದರಾಮಯ್ಯ ಪದೇ ಪದೇ ಹಿಂದೂಗಳ ಧಾರ್ಮಿಕ ಶ್ರದ್ಧೆಯನ್ನು ಅವಹೇಳನ ಮಾಡುತ್ತಾರೆ. ಮಾಂಸ ತಿಂದು ದೇವಸ್ಥಾನಕ್ಕೆ ಹೋದರೆ ಏನು ತಪ್ಪು ಎಂದು ಹಿಂದೂಗಳಲ್ಲಿ ಗೊಂದಲ ಹುಟ್ಟಿಸುತ್ತಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಆಹಾರ ಪದ್ಧತಿ ಇದೆ. ಅದನ್ನು ಯಾರೂ ವಿರೋಧಿಸುವುದಿಲ್ಲ. ಅದೇ ರೀತಿ ದೇವಸ್ಥಾನಗಳಿಗೂ ಕೆಲವು ನೇಮ– ನಿಷ್ಠೆಗಳು ಇರುತ್ತವೆ. ಅದನ್ನು ಗೌರವಿಸುವುದನ್ನು ಕಲಿತುಕೊಳ್ಳಬೇಕು. ಅಡುಗೆ ಮನೆಯಲ್ಲಿ ಮತ್ತು ಬಚ್ಚಲು ಮನೆಯಲ್ಲಿ ಏನು ಮಾಡಬೇಕೋ ಅದನ್ನೇ ಮಾಡಬೇಕು. ಅದಕ್ಕೆ ಯಾರೂ ನಿಯಮ ಮಾಡಿರುವುದಿಲ್ಲ. ಇದು ಸಾಮಾನ್ಯಜ್ಞಾನ’ ಎಂದು ಹೇಳಿದರು.

‘ಕೊಡಗಿನಲ್ಲಿ ಅಲ್ಲಿನ ಸ್ಥಳೀಯರ ಭಾವನೆಗಳನ್ನು ಕಡೆಗಣಿಸಿ ಟಿಪ್ಪು ಜಯಂತಿ ಮಾಡಿದರು. ಅಲ್ಲಿ ಹಿಂಸಾಚಾರ ನಡೆದು ಸಾವು ಕೂಡ ಆಯಿತು. ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್‌ ಪೋಟೊ ಯಾಕೆ ಹಾಕುತ್ತೀರಿ ಎಂದು ಪ್ರಶ್ನಿಸುತ್ತಾರೆ. ಅವರಿಗೆ ಮುಸ್ಲಿಂ ವೋಟು ಬ್ಯಾಂಕ್‌ ಒಂದೇ ಕಾಣುವುದು’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT