ಶನಿವಾರ, ಅಕ್ಟೋಬರ್ 16, 2021
23 °C
ಹೆಸರು ಸೇರಿಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಬೆಂಬಲಿಗರು

ಹಾನಗಲ್, ಸಿಂದಗಿ ಉಪಚುನಾವಣೆ: ಉಸ್ತುವಾರಿ ಪಟ್ಟಿಗೆ ವಿಜಯೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಾನಗಲ್‌ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಉಸ್ತುವಾರಿಗಳ ಪಟ್ಟಿಯಲ್ಲಿ ಪಕ್ಷದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಸರು ಸೇರಿಸದ ಬಗ್ಗೆ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದರ ಬೆನ್ನಲ್ಲೇ ಹಾನಗಲ್ ಕ್ಷೇತ್ರದ ಉಸ್ತುವಾರಿ ಪಟ್ಟಿಗೆ ವಿಜಯೇಂದ್ರ ಹೆಸರನ್ನು ಸೋಮವಾರ ಸಂಜೆ ಸೇರಿಸಲಾಗಿದೆ.

ವಿಜಯೇಂದ್ರ ಹೆಸರನ್ನು ಉಸ್ತುವಾರಿ ಪಟ್ಟಿಗೆ ಸೇರಿಸದ ಕಾರಣ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ವಿಜಯೇಂದ್ರ ಅಭಿಮಾನಿಗಳು ಕಿಡಿ ಕಾರಿದ್ದರು. 

ಅಭಿಮಾನಿಗಳ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ್ದ ವಿಜಯೇಂದ್ರ, ‘ಉಸ್ತುವಾರಿ ಪಟ್ಟಿಯಲ್ಲಿ ನನ್ನ ಹೆಸರಿಲ್ಲ ಎನ್ನುವ ಕಾರಣಕ್ಕೆ ಕೆಲವು ಅಭಿಮಾನಿಗಳು, ಕಾರ್ಯಕರ್ತರು ಹಿರಿಯ ನಾಯಕರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ
ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು ಸರಿಯಲ್ಲ, ಇದನ್ನು ಖಂಡಿಸುತ್ತೇನೆ’ ಎಂದಿದ್ದರು.

‘ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವುದೂ ಸೇರಿದಂತೆ ಪಕ್ಷ ನೀಡುವ ಜವಾಬ್ದಾರಿ ನಿರ್ವಹಿಸಲು ಬದ್ಧನಾಗಿದ್ದೇನೆ. ಪಕ್ಷದ ಗೆಲುವೇ ನಮಗೆ ಮುಖ್ಯ. ಭಿನ್ನಾಭಿಪ್ರಾಯದ ಧ್ವನಿಗಳಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡುತ್ತದೆ. ಇದರಿಂದ ವಿರೋಧ ಪಕ್ಷಗಳಿಗೆ ಪರೋಕ್ಷ ನೆರವು ನೀಡಿದಂತಾಗುತ್ತದೆ’ ಎಂದು ಅವರು ಹೇಳಿದ್ದರು.

‘ಪಕ್ಷದ ತೀರ್ಮಾನದಂತೆ ನಮ್ಮ ಎಲ್ಲ ನಾಯಕರ ಮಾರ್ಗದರ್ಶನದಲ್ಲಿ, ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ನಾವು
ಕಾರ್ಯ ನಿರ್ವಹಿಸೋಣ. ಪಕ್ಷಕ್ಕೆ ಮುಜುಗರ ತರುವ ಯಾವುದೇ ವಿಷಯಕ್ಕೂ ನನ್ನ ಸಹಮತ ಇಲ್ಲ’ ಎಂದಿದ್ದರು.

ಆಕ್ರೋಶದ ನುಡಿಗಳು: ‘ಸ್ವಂತ ಕ್ಷೇತ್ರದಲ್ಲಿ ಗೆಲ್ಲಲು ಕಷ್ಟಪಡುವರೆಲ್ಲರೂ ಉಸ್ತುವಾರಿಗಳು. ಯಡಿಯೂರಪ್ಪ ಮತ್ತು ನಿಮಗೆ ಬೆಲೆ ಕೊಡದ ಪಕ್ಷ ನಮಗೆ ಬೇಡ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಕಾದಿದೆ...’ ಎಂದು ಮೋಹನ್‌ ಮೋನಿ ಎಂಬುವರು ಟ್ವೀಟ್‌ ಮಾಡಿದ್ದಾರೆ.

‘ವಿಜಯೇಂದ್ರ ಬೆಳವಣಿಗೆಯನ್ನುಸಹಿಸದ ಬಿ.ಎಲ್‌.ಸಂತೋಷ್‌ ಕುತಂತ್ರ ನಡೆಸಿ ಉಸ್ತುವಾರಿ ತಪ್ಪಿಸಿದ್ದಾರೆ. ಸಂತೋಷ್‌ ಹೇಳಿದಂತೆ ಕೇಳುವ ನಳಿನ್‌ಕುಮಾರ್ ಕಟೀಲ್ ಅವರು ವಿಜಯೇಂದ್ರ ಉಸ್ತುವಾರಿ ತಪ್ಪಲು ಪಿತೂರಿ ನಡೆಸಿದ್ದಾರೆ’ ಎಂದು ಟ್ವೀಟ್‌ ಮೂಲಕ ಇನ್ನು ಕೆಲವರು ಹರಿಹಾಯ್ದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು