ಶನಿವಾರ, ಸೆಪ್ಟೆಂಬರ್ 26, 2020
26 °C
ಆನ್‌ಲೈನ್ ತರಗತಿಗೆ ಬೇಕಾದ ಮೊಬೈಲ್‌ ಕೊರತೆಯ ಸಮಸ್ಯೆ ತೆರೆದಿಟ್ಟ ಜನ

‘ಮೊಬೈಲ್ ದಾನ’: ದಾನಿಗಳಿಗಿಂತ ಬೇಡಿಕೆಯೇ ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನ್‌ಲೈನ್‌ ತರಗತಿ–ಸಾಂದರ್ಭಿಕ ಚಿತ್ರ

ಶಿವಮೊಗ್ಗ/ ಬೆಂಗಳೂರು: ಬಡ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇರುವವರು ಆರಂಭಿಸಿರುವ ‘ಮೊಬೈಲ್ ದಾನ’ ಅಭಿಯಾನವು, ಆನ್‌ಲೈನ್ ಪಾಠ ಕೇಳಲು ಮಕ್ಕಳಲ್ಲಿ ಮೊಬೈಲ್ ಇಲ್ಲದೇ ಇರುವ ಬೃಹತ್ ಸಮಸ್ಯೆಯ ದರ್ಶನವನ್ನೂ ಮಾಡಿಸಿದೆ.

ಅಭಿಯಾನ ಕುರಿತು ‘ಪ್ರಜಾವಾಣಿ’ ಆ.8ರ ಸಂಚಿಕೆಯಲ್ಲಿ ಪ್ರಕಟವಾದ ವಿಶೇಷ ವರದಿ ಓದಿದ ನೂರಾರು ಪೋಷಕರು ಮತ್ತು ಮಕ್ಕಳು ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿರುವ ಕುರಿತು ಅಳಲು ತೋಡಿಕೊಂಡಿದ್ದಾರೆ. ಸಾಗರ ತಾಲ್ಲೂಕಿನ ಚಿಪ್ಪಳಿಯ ಕೃಷಿಕ ನಾಗೇಂದ್ರ ಅವರಿಗೆ ಬಂದ ನೂರಾರು ಕರೆಗಳಲ್ಲಿ ಶೇ 10ರಷ್ಟು ಮಂದಿ ತಮ್ಮ ಬಳಿ ಇರುವ ಮೊಬೈಲ್‌ ದಾನ ನೀಡುವ ಕುರಿತು ವಾಗ್ದಾನ ಮಾಡಿದ್ದಾರೆ.

ಶೇ 90ರಷ್ಟು ಜನರು ಮೊಬೈಲ್ ಅವಶ್ಯಕತೆ ಕುರಿತು ಬೇಡಿಕೆ ಸಲ್ಲಿಸಿದ್ದಾರೆ.

ಉಡುಪಿಯ ವಿದ್ಯಾರ್ಥಿನಿಯರ ತಂಡಕ್ಕೆ ಕರೆ ಮಾಡಿರುವ ಉತ್ತರ ಕರ್ನಾಟಕದ ನೂರಕ್ಕೂ ಹೆಚ್ಚು ಮಂದಿ, ಮಕ್ಕಳಿಗೆ ಮೊಬೈಲ್‌ ಕೊಡಿಸಲು ಸಾಧ್ಯವಾಗದೇ ಇರುವ ದಯನೀಯ ಪರಿಸ್ಥಿತಿಯನ್ನು ತೋಡಿಕೊಂಡಿದ್ದಲ್ಲದೇ, ಹೇಗಾದರೂ ಮೊಬೈಲ್‌ ಒದಗಿಸಿ ಪುಣ್ಯಕಟ್ಟಿಕೊಳ್ಳಿ ಎಂದು ಅಲವತ್ತುಕೊಂಡಿದ್ದಾರೆ.

ಅಭಿಯಾನ ನಡೆಸುತ್ತಿರುವವರಿಗೆ ಮೊಬೈಲ್‌ ಕೋರಿಕೆ ಸಲ್ಲಿಸಿದ ಬಹುತೇಕ ಪೋಷಕರು ಹಾಗೂ ವಿದ್ಯಾರ್ಥಿಗಳು ಉತ್ತರ ಕರ್ನಾಟಕದವರು. ರಾಯಚೂರು, ಕೊಪ್ಪಳ, ಕಲಬುರ್ಗಿ, ಯಾದಗಿರಿ, ಗದಗ, ಬಳ್ಳಾರಿ, ಹಾವೇರಿ ಮತ್ತಿತರ ಭಾಗಗಳಿಂದ ಕರೆ ಮಾಡಿದ್ದಾರೆ. ಕೆಲಸವಿಲ್ಲದೆ ಬದುಕು ದುಸ್ತರವಾಗಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆ ಮಾಡುತ್ತಿದ್ದ ಕೆಲಸ ಕಳೆದುಕೊಂಡು ಊರು ಸೇರಿದ್ದೇವೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.

ದಾನ ನೀಡಲು ಮುಂದಾದವರು ಬಹುತೇಕ ಹಳೇ ಮೈಸೂರು ಪ್ರಾಂತ್ಯದವರು. ಅವರಲ್ಲಿ ಹಲವರು ತಾವೇ ಬಂದು ಮಕ್ಕಳಿಗೆ ನೆರವು ನೀಡುವ ಭರವಸೆ ನೀಡಿದ್ದಾರೆ. ಕೆಲವರು ಕಳುಹಿಸಿಕೊಡುವ ವಾಗ್ದಾನ ಮಾಡಿದ್ದಾರೆ.

‘ಮೊಬೈಲ್ ದಾನಿಗಳಿಗಿಂತ ಬೇಡಿಕೆ ಇರುವ ಪಟ್ಟಿ ದೊಡ್ಡದಾಗುತ್ತಿದೆ. ಅದಕ್ಕಾಗಿ ಸಂಘ, ಸಂಸ್ಥೆಗಳು, ಜನಪ್ರತಿನಿಧಿಗಳು ಕೈಜೋಡಿಸಬೇಕು. ಆನ್‌ಲೈನ್ ಶಿಕ್ಷಣದ ಅಗತ್ಯವಿರುವ ಮಕ್ಕಳಿಗೆ ನೆರವಾಗಬೇಕು’ ಎಂದು ಅಭಿಯಾನದ ಸಂಚಾಲಕ ನಾಗೇಂದ್ರ ಸಾಗರ್ ಕೋರಿದ್ದಾರೆ.

‘ಪ್ರಜಾವಾಣಿ’ಯ ವರದಿಯನ್ನು ಸಾಮಾಜಿಕ ಜಾಲ ತಾಣದಲ್ಲಿ ಟ್ಯಾಗ್‌ ಮಾಡಿರುವ ಅನೇಕರು, ಮೊಬೈಲ್ ದಾನದ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಪೂರ್ವ ಸಿದ್ಧತೆ, ಮೊಬೈಲ್ ಹಾಗೂ ನೆಟ್‌ವರ್ಕ್‌ ಸೌಲಭ್ಯ ಇಲ್ಲದೇ ಆನ್‌ಲೈನ್ ತರಗತಿಗಳನ್ನು ಆರಂಭಿಸಲು ಆಸಕ್ತಿ ತೋರುತ್ತಿರುವ ಸರ್ಕಾರದ ಕಾರ್ಯವೈಖರಿ ಸರಿಯಿಲ್ಲ. ಗ್ರಾಮೀಣ, ಗುಡ್ಡಗಾಡು ಪ್ರದೇಶದ ಮಕ್ಕಳಿಗೆ, ಅದರಲ್ಲೂ ಮೊಬೈಲ್, ಲ್ಯಾಪ್‌ಟಾಪ್‌ ಕೊಡಿಸಲಾಗದ ಬಡ–ಮಧ್ಯಮವರ್ಗದ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಸರ್ಕಾರ ಇದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು