ಭಾನುವಾರ, ಜುಲೈ 3, 2022
27 °C
ಸುತ್ತಲೂ ಕಸದ ರಾಶಿ* ಪಕ್ಕ ಮದ್ಯದ ಅಂಗಡಿ* ಸಂಜೆಯಾದರೆ ಕುಡುಕರ ತಾಣ

ವಿಶ್ವ ರಂಗಭೂಮಿ ದಿನ | ರಂಗಭೂಮಿ ಪಿತಾಮಹ ಗುಬ್ಬಿ ವೀರಣ್ಣ ಸಮಾಧಿ ಅನಾಥ!

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಂಗಭೂಮಿ ಮೂಲಕ ಚಿತ್ರರಂಗಕ್ಕೆ ಹಲವು ಮೇರು ಕಲಾವಿದರನ್ನು ಪರಿಚಯಿಸಿದವರು ಗುಬ್ಬಿ ವೀರಣ್ಣ. ರಂಗಭೂಮಿಗೆ ಹಲವು ಪ್ರಥಮಗಳನ್ನು ನೀಡಿದ ಹೆಗ್ಗಳಿಕೆಯೂ ಅವರಿಗೆ ಸಲ್ಲುತ್ತದೆ. ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿರುವ ಕನ್ನಡ ರಂಗಭೂಮಿಯ ‘ಪಿತಾಮಹ’ ವೀರಣ್ಣ ಅವರ ಸಮಾಧಿ ಅನಾಥವಾಗಿದೆ.

ಗುಬ್ಬಿಯ ಬಿ.ಎಚ್‌. ಮುಖ್ಯರಸ್ತೆ ಪಕ್ಕದಲ್ಲಿಯೇ ಡಾ.ಜಿ.ಎಚ್‌. ವೀರಣ್ಣ (ಗುಬ್ಬಿ ವೀರಣ್ಣ) ಮತ್ತು ಅವರ ಪತ್ನಿಯರಾದ ಭದ್ರಮ್ಮ ಮತ್ತು ಬಿ.ಜಯಮ್ಮ ಅವರ ಸಮಾಧಿಗಳಿವೆ.

‘ಗುಬ್ಬಿ ವೀರಣ್ಣ ಅವರ ಸಮಾಧಿಗೆ ದಾರಿ’ ಎನ್ನುವ ಸಣ್ಣ ನಾಮಫಲಕ ಇದ್ದೂ ಇಲ್ಲದಂತಿದೆ. ಸಮಾಧಿ ಪಕ್ಕದಲ್ಲಿ ಮದ್ಯದಂಗಡಿ ಇದೆ. ಸಂಜೆಯಾದರೆ ಸಮಾಧಿ ಸ್ಥಳ ಮದ್ಯ ಸೇವನೆಗೆ ಅಡ್ಡೆಯಾಗುತ್ತದೆ. ಸುತ್ತಲೂ ಕಸದ ರಾಶಿ, ಮದ್ಯದ ಬಾಟಲಿಗಳಿಂದ ಜಾಗ ತಿಪ್ಪೆಗುಂಡಿಯಾಗಿದೆ. ಸಾರ್ವಜನಿಕರು ಇಲ್ಲಿಯೇ ಮಲ, ಮೂತ್ರ ವಿಸರ್ಜನೆ ಮಾಡುವುದರಿಂದ ಮೂಗು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲದಷ್ಟು ಗಬ್ಬೆದ್ದು ನಾರುತ್ತದೆ.

‘ಮೇರು ಕಲಾವಿದನ ಸಮಾಧಿ ಇರುವ ಜಾಗದ ಈ ದುಃಸ್ಥಿತಿ ಬಗ್ಗೆ ಸ್ಥಳೀಯ ಆಡಳಿತ ಕೂಡ ತಲೆಕೆಡಿಸಿಕೊಂಡಂತಿಲ್ಲ. ಇಲ್ಲಿನ ಜನ ವೀರಣ್ಣನವರನ್ನು ಸಂಪೂರ್ಣ ಮರೆತಿದ್ದಾರೆ. ತಾಲ್ಲೂಕಿನ ಯಾವುದೇ ಸಂಘ,ಸಂಸ್ಥೆಗಳು ಸಮಾಧಿ ಇರುವ ಜಾಗದ ಸ್ವಚ್ಛತೆಗೆ ಪ್ರಯತ್ನ ಮಾಡುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಶಾಂತರಾಜು.

‘ಡಾ.ಗುಬ್ಬಿ ವೀರಣ್ಣ ಟ್ರಸ್ಟ್‌ ವತಿಯಿಂದ ಸಚಿವರು, ಸಂಸದ, ಶಾಸಕ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಹಲವಾರು ಬಾರಿ ಪ್ರತಿಭಟನೆಗಳನ್ನೂ ಮಾಡಲಾಗಿದೆ. ಆದರೆ, ಯಾವುದೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಟ್ರಸ್ಟ್‌ ಪದಾಧಿಕಾರಿಗಳು.

‘ಮದ್ಯದ ಅಂಗಡಿ ಸ್ಥಳಾಂತರ ಮಾಡುವಂತೆ ಮನವಿ ಮಾಡಲಾಗಿದೆ. ಸರ್ಕಾರ ಮನಸ್ಸು ಮಾಡುತ್ತಿಲ್ಲ. ಸಮಾಧಿ ಇರುವ ಜಮೀನಿಗೆ ಸಂಬಂಧಿಸಿದಂತೆ ಕುಟುಂಬ ಸದಸ್ಯರ ನಡುವೆ ತಕರಾರಿದೆ. ವ್ಯಾಜ್ಯ ನ್ಯಾಯಾಲಯದಲ್ಲಿದೆ. ಈ ಕಾರಣಕ್ಕೆ ನಾವು ಏನನ್ನೂ ಮಾಡಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ’ ಎಂದು ಗುಬ್ಬಿ ವೀರಣ್ಣ ಟ್ರಸ್ಟ್‌ನ ಟ್ರಸ್ಟಿ ಗುಬ್ಬಿ ರಾಜೇಶ್‌ ಅವರು ಹೇಳಿದರು.

‘ಗುಬ್ಬಿ ವೀರಣ್ಣ ಮತ್ತು ಗುಬ್ಬಿ ಕಂಪನಿಯ ಹೆಸರು ಹೇಳಿಕೊಂಡು ನಾವು ಬದುಕು ಕಟ್ಟಿಕೊಂಡಿದ್ದೇವೆ. ಆದರೆ, ಅವರ ಸಮಾಧಿಯ ಇಂಥ ದುಃಸ್ಥಿತಿಯ ಬಗ್ಗೆ ಏನೂ ಮಾಡುತ್ತಿಲ್ಲ. ಕಲಾವಿದರು, ರಂಗಾಸಕ್ತರು ಎಲ್ಲರೂ ಒಗ್ಗೂಡಿ, ಕನಿಷ್ಠಪಕ್ಷ ಜಾಗವನ್ನು ಚೊಕ್ಕವಾಗಿ ಇಟ್ಟುಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇನ್ನಾದರೂ ಈ ಕೆಲಸ ಪ್ರಾರಂಭವಾಗಲಿ’ ಎನ್ನುವುದು ರಂಗಕರ್ಮಿ ಡಾ. ಲಕ್ಷ್ಮಣದಾಸ್‌ ಅವರ ಅಭಿಪ್ರಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು