ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾಗಮಕ್ಕಾದರೂ ಅನುಮತಿ ಕೊಡಿ; ಸಂದಿಗ್ಧದಲ್ಲಿ ವಿಶೇಷ ಶಾಲೆಗಳು

Last Updated 1 ಜನವರಿ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಾದ್ಯಂತ ಸಾಮಾನ್ಯ ಶಾಲೆಗಳಲ್ಲಿ ತರಗತಿಗಳು ಶುಕ್ರವಾರದಿಂದ ಪುನರಾರಂಭಗೊಂಡಿದ್ದು. ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಆದರೆ, ವಿಶೇಷ ಶಾಲೆಗಳಲ್ಲಿ ಆ ಸಂಭ್ರಮ ಕಾಣಲಿಲ್ಲ.

‘ವಿಶೇಷ ಶಾಲೆಗಳಿಗೆ ಅನುಮತಿ ನೀಡುವುದು ಸಾರ್ವಜನಿಕ ಶಿಕ್ಷಣ ಇಲಾಖೆ. ಆದರೆ, ಅನುದಾನ ಮತ್ತಿತರ ಸೌಲಭ್ಯ ನೀಡಬೇಕಾಗಿರುವುದು ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ. 6ನೇ ತರಗತಿಯಿಂದ ಮಕ್ಕಳಿಗೆ ವಿದ್ಯಾಗಮ ನಡೆಸಲು ಸರ್ಕಾರ ಆದೇಶಿಸಿದೆ. ಆದರೆ, ಅಂಗವಿಕಲ ಸಬಲೀಕರಣ ಇಲಾಖೆಯಿಂದ ಯಾವುದೇ ಸೂಚನೆ ನಮಗೆ ಬಂದಿಲ್ಲ’ ಎಂದು ವಿಶೇಷ ಮಕ್ಕಳಿಗೆ ಶಿಕ್ಷಣ ಒದಗಿಸುವ ಎಸ್‌ಜಿಎಸ್‌ ವಾಗ್ದೇವಿ ಸಂಸ್ಥೆಯ ನಿರ್ದೇಶಕಿ ಡಾ. ಶಾಂತಾ ರಾಧಾಕೃಷ್ಣ ಹೇಳಿದರು.

‘ಸಾರ್ವಜನಿಕ ಶಿಕ್ಷಣ ಇಲಾಖೆಯು ಸಾಮಾನ್ಯ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೋವಿಡ್‌ ಮಾರ್ಗಸೂಚಿಗಳನ್ನು ರೂಪಿಸಿದೆ. ಆದರೆ, ತುಟಿ ಚಲನೆಯನ್ನು ನೋಡಿ ಪ್ರತಿಕ್ರಿಯಿಸುವ, ಸ್ಪಂದಿಸುವ ಮಕ್ಕಳಿಗೆ ಮಾಸ್ಕ್‌ ಧರಿಸುವುದರಿಂದ ತೊಂದರೆ ಆಗುತ್ತದೆ’ ಎಂದು ಒತ್ತಾಯಿಸಿದರು.

‘ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಯಾವ ಸೂಚನೆಗಳು ಬರುತ್ತವೆಯೋ ಅವುಗಳನ್ನು ಪಾಲಿಸುತ್ತಿದ್ದೇವೆ. ಅಂಗವಿಕಲರ ಸಬಲೀಕರಣ ಇಲಾಖೆಯಿಂದ ವಿದ್ಯಾಗಮ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ. ಮಾಸ್ಕ್‌ ಬದಲು, ‘ಫೇಸ್‌ ಶೀಲ್ಡ್‌’ ಹಾಕಿ ಮಾಡುತ್ತಿದ್ದೇವೆ. ಎಸ್ಸೆಸ್ಸೆಲ್ಸಿಯ 25 ವಿದ್ಯಾರ್ಥಿಗಳ ಪೈಕಿ ಕೇವಲ ಮೂವರು ಶುಕ್ರವಾರ ತರಗತಿಗೆ ಬಂದಿದ್ದರು’ ಎಂದು ಶ್ರವದೋಷವುಳ್ಳ ಮಕ್ಕಳ ಶಾಲೆಯೊಂದರ ಮುಖ್ಯಶಿಕ್ಷಕಿ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಅಂಗವಿಕಲರ ಸಬಲೀಕರಣ ಇಲಾಖೆಯ ನಿರ್ದೇಶಕ ಡಾ. ಮುನಿರಾಜು ಅವರನ್ನು ಸಂಪರ್ಕಿಸಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT