ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ಅವಕಾಶಕ್ಕೇ ಕತ್ತರಿ!

ಶುಲ್ಕ ಕಟ್ಟಿಸಿಕೊಂಡು ನೋಂದಾಯಿಸಿಕೊಳ್ಳದ ಖಾಸಗಿ ಶಾಲಾ ಆಡಳಿತ ಮಂಡಳಿಗಳು
Last Updated 17 ಜುಲೈ 2021, 20:25 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸರ್ಕಾರ ಸಮರ್ಥಿಸಿಕೊಂಡರೆ, ಬೋಧನಾ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ರಾಜ್ಯದಾದ್ಯಂತ ಸಾವಿರಾರು ವಿದ್ಯಾರ್ಥಿಗಳ ಪರೀಕ್ಷೆ ಬರೆಯುವ ಅವಕಾಶವನ್ನೇ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಕಸಿದುಕೊಂಡಿವೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಇದೇ 19 ಮತ್ತು 22 ರಂದು ನಡೆಯಲಿವೆ. ಒಂಬತ್ತನೇ ತರಗತಿಯಿಂದ 10ನೇ ತರಗತಿಗೆ ಬಡ್ತಿ ಪಡೆದ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ವಿದ್ಯಾರ್ಥಿಗಳನ್ನು ‘ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆ’ಯಲ್ಲಿ (ಎಸ್‌ಎಟಿಎಸ್‌) ನೋಂದಣಿ ಮಾಡಿಕೊಳ್ಳಲಾಗಿದೆ. ಹೀಗೆ ನೋಂದಣಿ ಆಗಿರುವ ವಿದ್ಯಾರ್ಥಿಗಳ ಪೈಕಿ, ಬೋಧನಾ ಶುಲ್ಕ ಕಟ್ಟದ ಅನೇಕರಿಗೆ ಕೆಲವು ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿ ಸ್ಥಗಿತಗೊಳಿಸಿದ್ದವು. ಇದೀಗ, ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ಶುಲ್ಕ ಕಟ್ಟಿಸಿಕೊಂಡಿಲ್ಲ ಎಂಬ ಸಂಗತಿ ಬಹಿರಂಗವಾಗಿದೆ.

ವಾರ್ಷಿಕ ಪರೀಕ್ಷೆಗೆ ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸುವಂತೆ ಪ್ರಕಟಣೆ ಹೊರಡಿಸಿದ್ದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಎಸ್‌ಎಟಿಎಸ್‌ನಲ್ಲಿ ನೋಂದಣಿ ಆಗಿರುವ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಆರು ಬಾರಿ ಅವಧಿ ವಿಸ್ತರಿಸಿ ಅವಕಾಶ ಕಲ್ಪಿಸಿದೆ. ಆದರೆ, ಆನ್‌ಲೈನ್‌ ತರಗತಿಯಿಂದ ಹೊರಗಿಟ್ಟ ವಿದ್ಯಾರ್ಥಿಗಳಿಗೆ, ಭಾವಚಿತ್ರ ಕೊಟ್ಟು ಶುಲ್ಕ ಕಟ್ಟಿ ಪರೀಕ್ಷೆಗೆಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿಯನ್ನೇ ನೀಡದೆ ದೂರ ಇಟ್ಟಿವೆ. ಈ ಕಾರಣಕ್ಕೆ ಅನೇಕ ವಿದ್ಯಾರ್ಥಿಗಳು ಪರೀಕ್ಷೆಯಿಂದ ಹೊರಗುಳಿಯಬೇಕಾಗಿ ಬಂದಿದೆ.

‘ತಮ್ಮ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ನೋಂದಾಯಿಸುವ ಹೊಣೆ ಆಯಾ ಶಾಲೆಗಳದ್ದು. ಬೋಧನಾ ಶುಲ್ಕ ಕಟ್ಟಿಲ್ಲವೆಂದು ಹಾಲ್‌ಟಿಕೆಟ್‌ ನೀಡಲು ಖಾಸಗಿ ಶಾಲೆಗಳು ಹಿಂದೇಟು ಹಾಕಿರುವ ಸಂದರ್ಭದಲ್ಲಿ, ಅನೇಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಹಣ ಕಟ್ಟಿಸಿಕೊಳ್ಳದ ವಿಷಯ ಗೊತ್ತಾಗುತ್ತಿದೆ. ಶಾಲೆಗಳು ಮಾಡಿದ ತಪ್ಪಿಗೆ ವಿದ್ಯಾರ್ಥಿಗಳನ್ನು ಬಲಿಪಶು ಮಾಡಲಾಗುತ್ತಿದೆ’ ಎನ್ನುವುದು ಶಿಕ್ಷಣ ಕ್ಷೇತ್ರದ ತಜ್ಞರ ಆರೋಪ.

‘ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಶಾಲೆಗಳ 3.51 ಲಕ್ಷ ಮತ್ತು ಖಾಸಗಿ ಶಾಲೆಗಳ 5.25 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ 26 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, 10ನೇ ತರಗತಿಗೆ ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ (ಎಸ್‌ಎಟಿಎಸ್‌ ಮಾಹಿತಿ) ನಮ್ಮ ಬಳಿ ಇಲ್ಲ. ಎಷ್ಟು ಮಂದಿ ಹೊರಗುಳಿದಿದ್ದಾರೆ ಎಂಬ ಮಾಹಿತಿಯೂ ಇಲ್ಲ. ಎಷ್ಟು ಮಂದಿ ಪರೀಕ್ಷೆಗೆ ಕಟ್ಟಿದ್ದಾರೆ ಎಂದಷ್ಟೆ ನಾವು ಹೇಳಬಹುದು’ ಎಂದು ಪರೀಕ್ಷಾ ಮಂಡಳಿಯ ನಿರ್ದೇಶಕಿ ಸುಮಂಗಲಾ ವಿ. (ಪರೀಕ್ಷೆಗಳು) ಹೇಳಿದರು.

‘ಒಂಬತ್ತನೇ ತರಗತಿಯಿಂದ 10ನೇ ತರಗತಿಗೆ ಪಾಸಾದ ಮಕ್ಕಳನ್ನು ಖಾಸಗಿ ಶಾಲೆಗಳು 10ನೇ ತರಗತಿಗೆ ನೋಂದಣಿ ಮಾಡಿಕೊಂ
ಡಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ’ ಎಂದು ಶಿಕ್ಷಣ ತಜ್ಞ ವಿ.‍ಪಿ. ನಿರಂಜನಾರಾಧ್ಯ ದೂರಿದರು.

ಆರು ಬಾರಿ ಅವಧಿ ವಿಸ್ತರಣೆ

‘ಈ ಹಿಂದಿನ ಸಂದರ್ಭಗಳಲ್ಲಿ, ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮೊದಲ ಪ್ರಕಟಣೆ ಹೊರಡಿಸಿದ ಬಳಿಕ ಎರಡು ಬಾರಿ ದಿನಾಂಕ ವಿಸ್ತರಿಸಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್‌ ಕಾರಣಕ್ಕೆ ದಾಖಲೆಯ ಸಂಖ್ಯೆಯಲ್ಲಿ ಅವಧಿ ವಿಸ್ತರಿಸಿ ಅವಕಾಶ ಮಾಡಿಕೊಡಲಾಗಿದೆ. ಆದರೂ ನಾನಾ ಕಾರಣಗಳಿಗೆ ಎಲ್ಲ ವಿದ್ಯಾರ್ಥಿಗಳು ಶುಲ್ಕ ಕಟ್ಟಿ, ನೋಂದಣಿ ಮಾಡಿಕೊಂಡಿಲ್ಲ. ಅಂಥ ಮಕ್ಕಳು ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗಿದ್ದಾರೆ’ ಎಂದು ಪರೀಕ್ಷಾ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಪರೀಕ್ಷೆಯ ಶುಲ್ಕ ಕಟ್ಟಲು ಸಾಧ್ಯವಾಗದ ಮಕ್ಕಳ ಶುಲ್ಕವನ್ನು ಸರ್ಕಾರಿ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು, ಅಧ್ಯಾಪಕರು ಕಟ್ಟಿದ ನಿದರ್ಶನಗಳಿವೆ. ಈ ವಿಷಯದಲ್ಲಿ ಮಕ್ಕಳ ಪೋಷಕರಿಗೂ ಜವಾಬ್ದಾರಿ ಇದೆ. ಹಿಂದೆ ಶಾಲೆಗಳಿಗೆ ಹಾಜರಾತಿ ಕಡ್ಡಾಯ ಆಗಿತ್ತು. ನಿರ್ದಿಷ್ಟ ಪ್ರಮಾಣದ ಹಾಜರಾತಿ ಇಲ್ಲದವರಿಗೆ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನೇ ನೀಡುತ್ತಿರಲಿಲ್ಲ’ ಎಂದೂ ಅವರು ಹೇಳಿದರು.

***

19 ಮತ್ತು 22 ರಂದು ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾದವರಿಗೆ ಆಗಸ್ಟ್‌ನಲ್ಲಿ ಮತ್ತೆ ಪರೀಕ್ಷೆ ನಡೆಸಿ ಅವಕಾಶ ನೀಡಲಾಗುವುದು. ವಿದ್ಯಾರ್ಥಿಗಳು ಆತಂಕಪಡಬೇಕಿಲ್ಲ

-ಎಸ್‌. ಸುರೇಶ್‌ಕುಮಾರ್‌, ಸಚಿವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

ಪರೀಕ್ಷೆ ಬರೆಯುವ ಮಕ್ಕಳ ಹಕ್ಕು ಕಸಿದುಕೊಂಡ ಖಾಸಗಿ ಶಾಲೆಗಳ ವಿಚಾರದಲ್ಲಿ ಸರ್ಕಾರ ಬಿಗಿ ನಿಲುವು ತಳೆಯಬೇಕು. ಈ ವಿಷಯದಲ್ಲಿ ಬಿಇಒಗಳಿಗೆ ಹೆಚ್ಚಿನ ಹೊಣೆಗಾರಿಕೆ ನೀಡಬೇಕು.

-ನಾಗಸಿಂಹ ಜಿ. ರಾವ್‌, ರಾಜ್ಯ ಸಂಚಾಲಕ, ಶಿಕ್ಷಣ ಹಕ್ಕು ಕಾರ್ಯಪಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT