ಭಾನುವಾರ, ಜೂನ್ 26, 2022
26 °C
ಅಭಿವೃದ್ಧಿ ಪರಿಷತ್‌ ಸಭೆಯಲ್ಲಿ ಅನುಮೋದನೆ

ಪರಿಶಿಷ್ಟರ ಕಲ್ಯಾಣ: ₹28 ಸಾವಿರ ಕೋಟಿ ಅನುದಾನಕ್ಕೆ ಅನುಮೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳಿಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯಡಿ ಈ ಸಾಲಿನಲ್ಲಿ ₹ 28234.36 ಕೋಟಿ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದಲ್ಲಿ ಶುಕ್ರವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರಾಜ್ಯ ಅಭಿವೃದ್ಧಿ ಪರಿಷತ್ತಿನ ಸಭೆಯ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದರು.

ಕಳೆದ ವರ್ಷದ ಅನುದಾನದಲ್ಲಿ ಎಷ್ಟು ಬಳಕೆಯಾಗಿದೆ ಮತ್ತು ಎಷ್ಟು ಬಾಕಿ ಇದೆ ಎನ್ನುವುದನ್ನು ಸಭೆಯಲ್ಲಿ ಪರಿಶೀಲಿಸಲಾಯಿತು. ಕೆಲವು ಯೋಜನೆಗಳಲ್ಲಿ ಮಾತ್ರ ಬದಲಾವಣೆ ಮಾಡಿ ಉಳಿದವುಗಳಿಗೆ ಅನುಮೋದನೆ ನೀಡಲಾಗಿದೆ. ಬಜೆಟ್‌ನಲ್ಲಿ ಇದಕ್ಕೆ ಅವಕಾಶಕಲ್ಪಿಸಲಾಗಿತ್ತು, ಪರಿಷತ್ತಿನ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಪಡೆಯಲಾಯಿತು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಗೆ ₹ 500 ಕೋಟಿ ಹೆಚ್ಚಿಗೆ ನೀಡಲಾಗಿದೆ. ಕೃಷಿ ಇಲಾಖೆಗೆ ₹ 851 ಕೋಟಿ ಇದ್ದ ಅನುದಾನವನ್ನು ₹1,061 ಕೋಟಿಗೆ ಏರಿಸಲಾಗಿದೆ. ತೋಟಗಾರಿಕೆ ಇಲಾಖೆಗೆ ₹142 ಕೋಟಿ ಇದ್ದ ಅನುದಾನವನ್ನು ₹187 ಕೋಟಿಗೆ ಹೆಚ್ಚಿಸಲಾಗಿದೆ. ಆರೋಗ್ಯ ಇಲಾಖೆಗೆ ಕಳೆದ ವರ್ಷ ₹ 899 ಕೋಟಿ ನೀಡಲಾಗಿತ್ತು. ಈ ವರ್ಷ ₹1,300 ಕೋಟಿಗೆ ಹೆಚ್ಚಿಸಲಾಗಿದೆ ಎಂದು ಬೊಮ್ಮಾಯಿ ವಿವರಿಸಿದರು.

ಸಹಕಾರ ಇಲಾಖೆಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯದ ಜನರಿಗೆ ಸಹಕಾರ ಸಂಘಗಳಲ್ಲಿ ಸದಸ್ಯತ್ವ ನೀಡಲು ₹203 ಕೋಟಿ ಒದಗಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಪಿಂಚಣಿ ಮೊತ್ತ ಹೆಚ್ಚಳ ಮಾಡಿದ್ದು, ಕಳೆದ ವರ್ಷ ₹2,900 ಕೋಟಿ ಇದ್ದ ಅನುದಾನವನ್ನು ಈ ವರ್ಷ ₹3,748 ಕೋಟಿ ಹೆಚ್ಚಿಸಲಾಗಿದೆ. ಕೌಶಲಾಭಿವೃದ್ಧಿಗೆ ₹180 ಕೋಟಿ ಮತ್ತು ಗಂಗಾ ಕಲ್ಯಾಣ ಯೋಜನೆಗೆ ₹9,000 ಕೋಟಿಗೆ ಅನುಮೋದನೆ ನೀಡಲಾಗಿದೆ ಎಂದರು. 

ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದ ಸ್ಥಳಗಳ ಅಭಿವೃದ್ಧಿಗೆ ಒಟ್ಟು ₹ 20 ಕೋಟಿ ಮೀಸಲಿಡಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

ಮಲೆನಾಡು ಅಭಿವೃದ್ಧಿ ಮಂಡಳಿ, ಬಯಲುಸೀಮೆ ಅಭಿವೃದ್ಧಿ ಮಂಡಳಿ ಮತ್ತು ಕರಾವಳಿ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಕ್ಷೇತ್ರಗಳ ಶಾಸಕರಿಗೆ ತಲಾ ₹ 1 ಕೋಟಿ ನೀಡಲಾಗುವುದು ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು