ಬುಧವಾರ, ಮೇ 25, 2022
29 °C
ಸಮಾಜ ಕಲ್ಯಾಣ ಇಲಾಖೆಗೆ ಅಲೆದಾಟ

ಎಸ್‌ಎಸ್‌ಪಿ ತಂತ್ರಾಂಶದಿಂದ ಎಡವಟ್ಟು: ವಿದ್ಯಾರ್ಥಿ ವೇತನ ಸಿಗದೇ ಪರದಾಟ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ ಸಮಸ್ಯೆಯಿಂದಾಗಿ ವೈದ್ಯಕೀಯ, ಎಂಜಿನಿಯರಿಂಗ್‌, ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕಳೆದ ಸಾಲಿನ ವಿದ್ಯಾರ್ಥಿ ವೇತನವೇ ಬಿಡುಗಡೆಯಾಗಿಲ್ಲ. ಶುಲ್ಕ ಪಾವತಿ ಆಗದಿರು ವುದರಿಂದ ಆ ವಿದ್ಯಾರ್ಥಿಗಳ ಭವಿಷ್ಯವೇ ಅಡಕತ್ತರಿಯಲ್ಲಿ ಸಿಲುಕಿದೆ.

ವಿದ್ಯಾರ್ಥಿವೇತನ ವಿತರಣೆ ಮಾಡಲು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿ 8 ಇಲಾಖೆಗಳು ತನ್ನದೇ ಆದ ಆನ್‌ಲೈನ್ ಪೋರ್ಟಲ್ ರೂಪಿಸಿಕೊಂಡಿದ್ದವು. ಅದರಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಆಯಾ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಸರ್ಕಾರದಿಂದ ಸಂದಾಯವಾಗಬೇಕಿರುವ ಶುಲ್ಕದ ಪಾಲನ್ನು ವಿಶ್ವವಿದ್ಯಾಲಯ ಅಥವಾ ಕಾಲೇಜುಗಳಿಗೆ ಬಿಡುಗಡೆ ಮಾಡುತ್ತಿದ್ದರು.

ಎಲ್ಲಾ ಇಲಾಖೆಗಳ ಅರ್ಜಿಗಳನ್ನು ಒಂದೇ ಪೋರ್ಟ ಲ್‌ನಲ್ಲಿ ಸ್ವೀಕರಿಸಲು 2019–20ರಲ್ಲಿ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶವನ್ನು (ಎಸ್‌ಎಸ್‌ಪಿ) ಇ–ಆಡಳಿತ ಇಲಾಖೆ ಅಭಿವೃದ್ಧಿಪಡಿಸಿತು. ಎಲ್ಲಾ ಇಲಾಖೆಗಳಿಂದ ಅನುದಾನ ತರಿಸಿಕೊಂಡು ಎಸ್‌ಎಸ್‌ಪಿ ತಂತ್ರಾಂಶದ ಮೂಲಕ ವಿದ್ಯಾರ್ಥಿಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮಾಡುವುದು ಇ–ಆಡಳಿತ ಇಲಾಖೆಯ ಉದ್ದೇಶ. ಶುಲ್ಕದ ವಿವರಗಳನ್ನು ವಿಶ್ವವಿದ್ಯಾಲಯಗಳಿಂದ ತರಿಸಿಕೊಳ್ಳುತ್ತಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಹೆಸರಿನಲ್ಲಿ ‌ಇ–ಆಡಳಿತ ಇಲಾಖೆಯೇ ವಿದ್ಯಾರ್ಥಿ ವೇತನವನ್ನು ವಿಶ್ವವಿದ್ಯಾಲಯಗಳಿಗೆ ಬಿಡುಗಡೆ ಮಾಡುತ್ತಿದೆ.

‘ಅರ್ಜಿ ಸಲ್ಲಿಸುವಾಗ ತುಸು ಲೋಪ ವಾದರೂ ಆ ವಿದ್ಯಾರ್ಥಿಯ ಅರ್ಜಿ ಪೋರ್ಟಲ್‌ನಲ್ಲಿ ಕಾಣಿಸುವುದಿಲ್ಲ. ಅರ್ಜಿ ತಿರಸ್ಕಾರಗೊಂಡಿದೆ ಎಂಬ ವಿವರವೂ ಕಾಣಿಸದು. ಅರ್ಜಿ ಸಲ್ಲಿಸಿದವರು ವಿದ್ಯಾರ್ಥಿವೇತನಕ್ಕೆ ಕಾಯುತ್ತಿದ್ದರೆ, ಇತ್ತ ಇ–ಆಡಳಿತ ಇಲಾಖೆ ಅರ್ಜಿಯೇ ಬಂದಿಲ್ಲ ಎಂದು ಹೇಳುತ್ತಿದೆ’ ಎನ್ನುತ್ತಾರೆ ನೊಂದ ವಿದ್ಯಾರ್ಥಿಗಳು.

ಇದರ ಪರಿಣಾಮ 2020–21ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಮೂಲಕ ಅರ್ಜಿ ಸಲ್ಲಿಸಿರುವ 66 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವೇ ಬಿಡುಗಡೆಯಾಗಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,  ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ಅರ್ಜಿ ಸಲ್ಲಿಸಿರುವ ಸಾವಿರಾರು ವಿದ್ಯಾರ್ಥಿಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.

ಸರ್ಕಾರದಿಂದ ಶುಲ್ಕ ಪಾವತಿಯಾಗದ ಕಾರಣ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲು ವಿಶ್ವವಿದ್ಯಾಲಯಗಳು ಹಿಂದೇಟು ಹಾಕುತ್ತಿವೆ. ಸರ್ಕಾರ ಪಾವತಿಸಬೇಕಿದ್ದ ಬಾಕಿ ಶುಲ್ಕವನ್ನು ಪೋಷಕರೇ ಪಾವತಿಸಿದರೆ ಅಂಕ‍ಪಟ್ಟಿ ನೀಡಲಾಗುತ್ತಿದೆ. ಈ ಮೊತ್ತ ಪಾವತಿಸಲಾಗದ ವಿದ್ಯಾರ್ಥಿಗಳು ಅಂಕಪಟ್ಟಿಯನ್ನೇ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಶಿಕ್ಷಣ ಮುಂದುವರಿಸಲು ಸಾಧ್ಯವಾಗದೆ ತೊಂದರೆಗೆ ಸಿಲುಕಿದ್ದಾರೆ.

‘ವಿದ್ಯಾರ್ಥಿ ವೇತನ ಬಿಡುಗಡೆಗೆ ಕೋರಿ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗಳಿಗೆ ವಿದ್ಯಾರ್ಥಿಗಳು ಎಡತಾಕುತ್ತಿದ್ದಾರೆ. ಅಲ್ಲಿನ ಅಧಿಕಾರಿಗಳು ಇ–ಆಡಳಿತ ಇಲಾಖೆಯ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ. ಸ್ನಾತಕೋತ್ತರ ಪದವಿ ಮುಗಿಸಿ ವರ್ಷವೇ ಕಳೆದರೂ ಅಂಕಪಟ್ಟಿ ಪಡೆಯಲಾಗಿಲ್ಲ. ಭವಿಷ್ಯವೇ ಅತಂತ್ರವಾಗಿದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಲೋಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.‌

10 ದಿನಗಳಲ್ಲಿ ಪರಿಹಾರ: ಸಚಿವ
‘ಆಧಾರ್ ಗುರುತಿನ ಚೀಟಿ ಲಿಂಕ್‌ ಮಾಡದ ಮತ್ತು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಯ ವಿವರ ಸರಿ ಇಲ್ಲದ ಕಾರಣ ಸಮಸ್ಯೆ ಆಗಿತ್ತು. 8ರಿಂದ 10 ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗುವುದು’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು.

‘ಇತ್ತೀಚೆಗೆ ವಿದ್ಯಾರ್ಥಿ ವೇತನ ಆಂದೋಲನವನ್ನೂ ನಡೆಸಲಾಗಿದೆ. ಶೇ 48ರಷ್ಟಿದ್ದ ವಿದ್ಯಾರ್ಥಿ ವೇತನ ಪಾವತಿ ಪ್ರಮಾಣ ಶೇ 86ಕ್ಕೆ ಏರಿದೆ. ಸೋಮವಾರ ಮತ್ತೊಂದು ಸಭೆ ನಡೆಸಲಾಗುತ್ತಿದೆ’ ಎಂದರು.

ಡಾ.ಎಚ್.ಸಿ.ಮಹದೇವಪ್ಪ ಪತ್ರ
ವಿದ್ಯಾರ್ಥಿಗಳಿಗೆ ಆಗಿರುವ ತೋಂದರೆ ಸರಿಪಡಿಸುವಂತೆ ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಕೂಡ ಮುಖ್ಯಮಂತ್ರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದಾರೆ.

ವಿದ್ಯಾರ್ಥಿ ವೇತನದ ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿ ಹೊಣೆಯನ್ನು ಹಿಂದಿನಂತೆ ಆಯಾ ಇಲಾಖೆಗಳಿಗೇ ವಹಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು