ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ: ನಾಡಗೌಡ

Last Updated 12 ಏಪ್ರಿಲ್ 2021, 21:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪ್ರಯಾಣಿಕರ ಹಿತ ರಕ್ಷಣೆಗೆ ಬದ್ಧರಾಗಲು ಹಾಗೂ ಸಾರ್ವಜನಿಕ ಸಾರಿಗೆ ಸಂಸ್ಥೆ ಉಳಿಸಲು ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಟನೆಯ ಗೌರವಾಧ್ಯಕ್ಷ ಡಾ.ಎಂ.ಪಿ. ನಾಡಗೌಡ ವಿನಂತಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘70 ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಸಾರಿಗೆ ಸೌಲಭ್ಯ ನೀಡುತ್ತ, ಸಾರ್ವಜನಿಕರ ಜೀವನಾಡಿ ಎನ್ನುವ ಹೆಗ್ಗಳಿಕೆಗೆ ಸಾರಿಗೆ ಸಂಸ್ಥೆ ಪಾತ್ರವಾಗಿದೆ. ಸಂಸ್ಥೆಯ ನಾಲ್ಕು ನಿಗಮಗಳು ಕೋವಿಡ್ ಲಾಕ್‌ಡೌನ್‌ನಿಂದ ತೀವ್ರ ನಷ್ಟದಲ್ಲಿತ್ತು. ಚೇತರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿ ಕೋವಿಡ್‌ ಎರಡನೇ ಅಲೆಯ ಭೀತಿ ಎದುರಾಗಿದೆ. ಈ ನಡುವೆಯೇ ಸಾರಿಗೆ ನೌಕರರ ಕೂಟ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಸಂಸ್ಥೆಯ ಅಳಿವು, ಉಳಿವಿನ ಬಗ್ಗೆ ಪ್ರಶ್ನೆ ಮೂಡಿಸಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಬೇಡಿಕೆ ಈಡೇರಿಸಿಕೊಳ್ಳಲು ಮುಷ್ಕರವೊಂದೇ ದಾರಿಯಲ್ಲ. ಪ್ರಯಾಣಿಕರೇ ದೇವರು ಎನ್ನುವ ಧ್ಯೇಯ ಹೊಂದಿರುವ ಸಂಸ್ಥೆಗೆ, ಪ್ರಯಾಣಿಕರ ಹಿತಾಸಕ್ತಿಯೇ ಮೊದಲ ಆದ್ಯತೆಯಾಗಬೇಕು. ನಂತರ ನೌಕರರ ಹಿತಾಸಕ್ತಿ ಆಗಿರಬೇಕು. ಆರು ದಿನಗಳಿಂದ ಪ್ರಯಾಣಿಕರು ಅನುಭವಿಸುತ್ತಿರುವ ತೊಂದರೆ ಗಮನಿಸಿದರೆ, ಸಂಸ್ಥೆ ಸಾರ್ವಜನಿಕರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಎಡವುತ್ತಿದೆ ಎಂದೆನಿಸುತ್ತಿದೆ’ ಎಂದು ಹೇಳಿದ್ದಾರೆ.

‘ವೇತನ ಪರಿಷ್ಕರಣೆಗೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರಕ್ಕೆ ಇದು ಸರಿಯಾದ ಸಮಯವಲ್ಲ. ಮುಖ್ಯಮಂತ್ರಿ, ಸಾರಿಗೆ ಸಚಿವರು ನೌಕರರ ಹಿತಾಸಕ್ತಿ ಕಾಪಾಡಲು ಸೂಕ್ತ ನಿರ್ಧಾರ ಕೈಗೊಂಡು ಮಾತುಕತೆ ಮೂಲಕ ಮುಷ್ಕರಕ್ಕೆ ಅಂತ್ಯ ಹಾಡಬೇಕು’ ಎಂದು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT