ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿರುವ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಆದೇಶಿಸಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ವಿದ್ಯಾರ್ಥಿಗಳೇನು ಬಿಜೆಪಿಯ ಕಾಲಾಳುಗಳೇ?, ಪರೀಕ್ಷೆಯ ಆತಂಕದಲ್ಲಿರುವ ವಿದ್ಯಾರ್ಥಿಗಳನ್ನು ಖಾಲಿ ಕುರ್ಚಿ ತುಂಬಿಸಲು ಕರೆಸುವುದಕ್ಕೆ ನಾಚಿಕೆ ಎನಿಸುವುದಿಲ್ಲವೇ?’ ಎಂದು ಪ್ರಶ್ನಿಸಿದೆ.
ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಸಮವಸ್ತ್ರ ಹಾಗೂ ಕಪ್ಪು ಬಟ್ಟೆ ಧರಿಸಬಾರದು ಎಂದಿರುವುದೇಕೆ?, ವಿದ್ಯಾರ್ಥಿಗಳನ್ನು ಗುರುತು ಸಿಕ್ಕರೆ ಸರ್ಕಾರದ ಮರ್ಯಾದೆ ಹೋಗುತ್ತದೆ ಎಂಬ ದುರಾಲೋಚನೆಯೇ? ಎಂದು ಕಾಂಗ್ರೆಸ್ ಟೀಕಿಸಿದೆ.
ಪ್ರಧಾನಿ ಹೇಳುವುದು ‘ಪರೀಕ್ಷಾ ಪೇ ಚರ್ಚಾ’ ಮಾಡುವುದು ‘ಪರೀಕ್ಷಾ ಮೇ ಆಕ್ರಮಣ್’ ಪ್ರಧಾನಿಯ ರೋಡ್ ಶೋಗಾಗಿ ಪ್ರಥಮ ಪಿಯುಸಿಯ ಪರೀಕ್ಷೆಗಳನ್ನು ಮುಂದೂಡಿದ ಬಿಜೆಪಿ ಸರ್ಕಾರ, ವಿದ್ಯಾರ್ಥಿಗಳ ಬದುಕಿಗೆ ಕಲ್ಲು ಹಾಕಲು ಹೇಸುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಮೋದಿಯ ಪ್ರಚಾರದ ಹಪಹಪಿತನಕ್ಕೆ ವಿದ್ಯಾರ್ಥಿಗಳ ಭವಿಷ್ಯ ಕಿತ್ತುಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ದೂರಿದೆ.
ಶಿಕ್ಷಣವಿಲ್ಲದವರಿಗೆ ಶಿಕ್ಷಣದ ಮಹತ್ವ ಅರಿಯುವುದುದಾದರೂ ಹೇಗೆ, ವಿದ್ಯಾರ್ಥಿಗಳ ಭವಿಷ್ಯ ಬಲಿಕೊಟ್ಟು ಶೋಕಿ ನಡೆಸಲು ಹೊರಟಿರುವ ಬೊಮ್ಮಾಯಿ ಅವರೇ, ತಮಗೆ ಚುನಾವಣಾ ಪ್ರಚಾರ ಮುಖ್ಯವೇ? ವಿದ್ಯಾರ್ಥಿಗಳ ಭವಿಷ್ಯ ಮುಖ್ಯವೇ? ಎಂಬುದನ್ನು ಸ್ಪಷ್ಟಪಡಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
‘ಗಾಂಪರ ಗುಂಪಾದ ಬಿಜೆಪಿಗೆ ತಿಳಿದಿರುವುದು ಕಮಿಷನ್ ಲೂಟಿಯೇ ಹೊರತು ಶಿಕ್ಷಣದ ಮಹತ್ವವಲ್ಲ. ಶಿವಮೊಗ್ಗದ ಪ್ರಧಾನಿ ಕಾರ್ಯಕ್ರಮದ ಕುರ್ಚಿ ತುಂಬಿಸಲು ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಕರೆಸಲು ಆದೇಶಿಸಿದೆ. ಬೆಳಗಾವಿಯಲ್ಲಿ ಪಿಯುಸಿ ಪರೀಕ್ಷೆಯನ್ನೇ ಮುಂದೂಡಿದೆ. ಪ್ರಧಾನಿಯ ಶೋಕಿಗಾಗಿ ವಿದ್ಯಾರ್ಥಿಗಳ ಭವಿಷ್ಯ ಬಲಿ ಕೊಡುವುದು ನಾಚಿಕೆಗೇಡು’ ಎಂದು ಕಾಂಗ್ರೆಸ್ ಕಿಡಿಕಾರಿದೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ, ಹಲವು ಯೋಜನೆಗಳಿಗೆ ಚಾಲನೆ ನೀಡುವ ನೆಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದೇ 27ರಂದು (ಸೋಮವಾರ) ಮತ್ತೊಮ್ಮೆ ರಾಜ್ಯಕ್ಕೆ ಬರಲಿದ್ದು, ಶಿವಮೊಗ್ಗ ಮತ್ತು ಬೆಳಗಾವಿಯಲ್ಲಿ ಮಿಂಚಿನ ಸಂಚಾರ ನಡೆಸಲಿದ್ದಾರೆ. ‘ಪಿಎಂ–ಕಿಸಾನ್ ಸಮ್ಮಾನ್’ ಯೋಜನೆಯ 13ನೇ ಕಂತಿನ ಹಣವನ್ನು ಅವರು ಬೆಳಗಾವಿಯಲ್ಲಿ ಬಿಡುಗಡೆ ಮಾಡಲಿದ್ದಾರೆ.
ಈ ಎರಡೂ ಜಿಲ್ಲೆಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳು, ರೈಲ್ವೆ, ರಸ್ತೆ ಯೋಜನೆಗಳು, ‘ಜಲಜೀವನ್ ಮಿಷನ್’ನಡಿ ಗ್ರಾಮೀಣ ನೀರು ಸಂಪರ್ಕ ಯೋಜನೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ತಮ್ಮ ಒಂದು ದಿನದ ಈ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ಚಾಲನೆ ನೀಡಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.