ತರಗತಿಗೆ ಖುದ್ದು ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಒತ್ತಡ: ಪೋಷಕರ ಆರೋಪ
ಬೆಂಗಳೂರು: ‘ಆಫ್‌ಲೈನ್ ತರಗತಿಗೆ ಹಾಜರಾಗಬೇಕೆಂದು ರಾಜ್ಯ ಸರ್ಕಾರ ಕಡ್ಡಾಯ ಮಾಡದಿದ್ದರೂ, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ನಗರದ ಕೆಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಪೋಷಕರನ್ನು ಬಲವಂತ ಮಾಡುತ್ತಿವೆ’ ಎಂಬ ಆರೋಪ ವ್ಯಕ್ತವಾಗಿದೆ.
ಕೆಲವು ಶಾಲೆಗಳ ಪೋಷಕರು ಈ ಬಗ್ಗೆ ಆರ್‌ಟಿಇ ವಿದ್ಯಾರ್ಥಿಗಳ ಮತ್ತು ಪೋಷಕರ ಸಂಘಟನೆಗೆ ಮಾಹಿತಿ ನೀಡಿವೆ.
ಈ ಬಗ್ಗೆ ಮಾತನಾಡಿದ ಸಂಘಟನೆಯ ಕಾರ್ಯದರ್ಶಿ ಬಿ.ಎ. ಯೋಗಾನಂದ, ‘ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರನ್ನು ಶಾಲಾ ಆಡಳಿತ ಮಂಡಳಿಗಳು ಒತ್ತಾಯಿಸುತ್ತಿವೆ’ ಎಂದರು.
‘ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡುವ ಮೊದಲೇ ಕೆಲವು ಶಾಲೆಗಳು ಆಫ್‌ಲೈನ್‌ನಲ್ಲಿ ತರಗತಿ ಆರಂಭಿಸಿವೆ’ ಎಂದೂ ಹೇಳಿದರು.
‘ಕೆಲವು ಶಾಲೆಗಳು ಮೂರು ತಿಂಗಳ ಹಿಂದೆಯೇ ಹಿರಿಯ ಪ್ರಾಥಮಿಕ ತರಗತಿಯ ಮಕ್ಕಳಿಗೂ ಆಫ್‌ಲೈನ್ ಪಾಠ ಆರಂಭಿಸಿರುವ ಮಾಹಿತಿ ನಮ್ಮಲ್ಲಿದೆ. ಅಂಥ ಶಾಲೆಗಳ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎಂದೂ ಅವರು ಆಗ್ರಹಿಸಿದರು.
’ಖಾಸಗಿ ಶಾಲೆಗಳು ಶುಲ್ಕ ವಸೂಲು ಮಾಡುವ ಉದ್ದೇಶದಿಂದ ಮಕ್ಕಳನ್ನು ಶಾಲೆಗೆ ಬರುವಂತೆ ಬಲವಂತ ಮಾಡುತ್ತಿವೆ’ ಎಂದು ಪೋಷಕರೊಬ್ಬರು ದೂರಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.