ಬುಧವಾರ, ಮೇ 25, 2022
24 °C
ರಾಜ್ಯ ಸರ್ಕಾರದ ಸಹಕಾರ ಕೇಳಿದ ಕೇಂದ್ರ

ಉಪನಗರ ರೈಲು ಯೋಜನೆ: ₹4,185 ಕೋಟಿಗೆ ರೈಲ್ವೆ ಆಸ್ತಿ ನಗದೀಕರಣ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉಪನಗರ ರೈಲು ಯೋಜನೆಯ ಅನುಷ್ಠಾನಕ್ಕೆ ನಗರದಲ್ಲಿರುವ ರೈಲ್ವೆ ಆಸ್ತಿಯಿಂದ ₹4,186 ಕೋಟಿಯಷ್ಟು ನಗದೀಕರಣಕ್ಕೆ(ಸಂಪನ್ಮೂಲ ಸಂಗ್ರಹಕ್ಕೆ) ಮುಂದಾಗಿರುವ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ(ಕೆ–ರೈಡ್), ಮೊದಲ ಹಂತದಲ್ಲಿ 56.38 ಎಕರೆ ಆಸ್ತಿ ನಗದೀಕರಣಕ್ಕೆ ಅಣಿಯಾಗಿದೆ.

ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿ ಅದರಿಂದ ಬರುವ ವರಮಾನವನ್ನು ಉಪನಗರ ರೈಲು ಯೋಜನೆಗೆ ಬಳಕೆ ಮಾಡಿಕೊಳ್ಳಲು ಆಲೋಚಿಸಿದೆ. ರಾಜ್ಯ ಸರ್ಕಾರ, ರೈಲ್ವೆ ಸಚಿವಾಲಯ ಜಂಟಿಯಾಗಿ ರಚಿಸಿರುವ ಕೆ–ರೈಡ್‌ ನಗರದಲ್ಲಿ ಉಪನಗರ ರೈಲ್ವೆ ಯೋಜನೆ ಅನುಷ್ಠಾನ ಮಾಡುತ್ತಿದೆ.

ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಪತ್ರ ಬರೆದಿರುವ ರೈಲ್ವೆ ಭೂಮಿ
ಅಭಿವೃದ್ಧಿ ಪ್ರಾಧಿಕಾರದ (ಆರ್‌ಎಲ್‌ಡಿಎ) ಉಪಾಧ್ಯಕ್ಷ ವೇದ ಪ್ರಕಾಶ್ ದುಬೇಜ ಅವರು, ಅಗತ್ಯ ಸಹಕಾರ ಕೋರಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ವಿಶೇಷ ಆಯುಕ್ತ(ಯೋಜನೆ), ಕೆ–ರೈಡ್‌ ವ್ಯವಸ್ಥಾಪಕ ನಿರ್ದೇಶಕ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೂ ಪತ್ರ ರವಾನಿಸಿದ್ದಾರೆ.

ಉಪನಗರ ರೈಲು ಯೋಜನೆಗೆ ಕೇಂದ್ರ ₹2,479 ಕೋಟಿ ಭರಿಸಲಿದೆ. ಆದರೆ, ಕೇಂದ್ರ ರೈಲ್ವೆ ಸಚಿವಾಲಯವು ಬಜೆಟ್‌ ಅನುದಾನದ ರೂಪದಲ್ಲಿ ನೀಡುವುದು ₹ 500 ಕೋಟಿ ಮಾತ್ರ. ಉಳಿದಮೊತ್ತವನ್ನು ರೈಲ್ವೆ ಜಾಗದ ನಗದೀಕರಣ
ದಿಂದ ಕೆ–ರೈಡ್ ಹೊಂದಿಸಬೇಕಿದೆ. ರೈಲ್ವೆ ಇಲಾಖೆಗೆ ಸೇರಿದಖಾಲಿ ಜಾಗದ ನಗದೀಕರಣದ ಮೂಲಕ ₹ 4,815 ಕೋಟಿ ರೂಪಾಯಿ ಸಂಗ್ರಹಿಸಬಹುದು ಎಂದು ಅಂದಾಜಿಸಲಾಗಿದೆ. ಉಪನಗರ ರೈಲು ಯೋಜನೆಯ ಕಾರಿಡಾರ್‌ಗಳ ಆಸುಪಾಸಿನಲ್ಲಿರುವ ರೈಲ್ವೆ ಜಾಗದಲ್ಲಿ ಬಹುಮಹಡಿ ಕಟ್ಟಡಗಳಿಗೆ ಅನುಮತಿ ನೀಡುವಾಗ 5ರವರೆಗೆ ಫ್ಲೋರ್‌ ಏರಿಯಾ ರೇಷಿಯೊ (ಎಫ್‌ಎಆರ್‌) ಬಳಕೆಗೆ ಅವಕಾಶ ಕಲ್ಪಿಸುವ ಮೂಲಕ ಇಲ್ಲಿ ಹೂಡಿಕೆಗೆ ಅನುಕೂಲ ಕಲ್ಪಿಸುವುದು ಈ ಯೋಜನೆಯ ಉದ್ದೇಶ.

ಈ ರೀತಿ ನಗದೀಕರಣಕ್ಕೆ ಸೂಕ್ತ ಎನಿಸಿರುವ 146 ಎಕರೆ ಜಾಗಗಳು 18 ಕಡೆ ಇವೆ ಎಂಬುದನ್ನು ಕೆ–ರೈಡ್ ಗುರುತಿಸಿದೆ. ಅದರಲ್ಲಿ 56.38 ಎಕರೆಯನ್ನು ಆರ್‌ಎಲ್‌ಡಿಎಗೆ ವಹಿಸಲು ರೈಲ್ವೆ ಮಂಡಳಿಯೂ ಒಪ್ಪಿಗೆ ಸೂಚಿಸಿದೆ. ಆಸ್ತಿ ನಗದೀಕರಣ ಪ್ರಕ್ರಿಯೆಗೆ ರೈಲ್ವೆ ಇಲಾಖೆಯ ಜತೆಗೆ ಬಿಬಿಎಂಪಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಹಾಗೂ ನಗರಾಭಿವೃದ್ಧಿ ಇಲಾಖೆಗಳ ಸಹಕಾರವೂ ಅಗತ್ಯ ಇದೆ.

‘ಮಧ್ಯಪ್ರವೇಶ ಇರಕೂಡದು’: ಉಪನಗರ ರೈಲು ಯೋಜನೆಗೆ ಮುಂದಿನ ದಿನಗಳಲ್ಲೂ ಅಗತ್ಯವಿಲ್ಲದ ರೈಲ್ವೆ ಭೂಮಿಯನ್ನು ನಗದೀಕರಣ ಮಾಡಿಕೊಳ್ಳಲು ಕೆ– ರೈಡ್ ಹೊರಟಿದೆ. ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡದೆ ಸಹಕಾರ ನೀಡಬೇಕಿದೆ ಎಂದು ರೈಲ್ವೆ ಹೋರಾಟಗಾರ ಸಂಜೀವ್ ದ್ಯಾಮಣ್ಣನವರ್ ಹೇಳಿದರು.

ಉಪನಗರ ರೈಲು ಯೋಜನೆಯ ಕಾಮಗಾರಿ ಇನ್ನೂ ಆರಂಭವೇ ಆಗಿಲ್ಲ. ಕಾಮಗಾರಿ ಆರಂಭವಾದರೆ ನಗದೀಕರಣ ಕೂಡ ವೇಗವಾಗಿ ಆಗಲಿದೆ ಎಂದರು.

45 ವರ್ಷಕ್ಕೆ ಗುತ್ತಿಗೆ ವಹಿಸುವ ಉದ್ದೇಶ: 56.38 ಎಕರೆ ಆಸ್ತಿಯನ್ನು ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರಕ್ಕೆ 45 ವರ್ಷಗಳ ಅವಧಿಗೆ ಗುತ್ತಿಗೆಗೆ ವಹಿಸಲು ಉದ್ದೇಶಿಸಲಾಗಿದೆ.

ಮೆಜೆಸ್ಟಿಕ್‌ ಬಳಿಯ ಎಸ್‌ಬಿಸಿ ಎಂ.ಜಿ ಕಾಲೊನಿಯಲ್ಲಿ 650 ವಸತಿ ಗೃಹಗಳ ನಿರ್ಮಾಣ, ಕಂಟೋನ್ಮೆಂಟ್‌ ಕಾಲೊನಿಯಲ್ಲಿ 116 ವಸತಿ ಗೃಹಗಳ ನಿರ್ಮಾಣದ ಉದ್ದೇಶವನ್ನು ಆರ್‌ಎಲ್‌ಡಿಎ ಹೊಂದಿದೆ. ಇದರಿಂದ ನಾಲ್ಕೈದು ವರ್ಷಗಳಲ್ಲೇ ₹1,200 ಕೋಟಿ ವರಮಾನ ಬರಲಿದೆ ಎಂದು ಅಂದಾಜಿಸಿದೆ.

ಗುರುತಿಸಿರುವ 146 ಎಕರೆ ಪ್ರದೇಶದಲ್ಲಿ ಎಫ್‌ಎಆರ್ ಹೆಚ್ಚಳ ಮಾಡುವುದರಿಂದ ₹1,800 ಕೋಟಿ ವರಮಾನವನ್ನು ಕೆ–ರೈಡ್ ನಿರೀಕ್ಷೆ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು