ಭಾನುವಾರ, ಜೂನ್ 26, 2022
23 °C
ದಾವಣಗೆರೆಯಲ್ಲಿ ಮೇ ಸಾಹಿತ್ಯ ಮೇಳ

ಮೋದಿಯನ್ನೂ ಜನ ಸೋಲಿಸಲಿದ್ದಾರೆ: ವಾಜಪೇಯಿ ಅವರ ಆಪ್ತರಾಗಿದ್ದ ಸುಧೀಂದ್ರ ಕುಲಕರ್ಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಇಂದಿರಾ ಗಾಂಧಿಯಂಥ ಮಹಾನ್‌ ನಾಯಕಿಯನ್ನು ಸೋಲಿಸಿದ ಭಾರತ ಇದು. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯನ್ನೂ ಜನ ಸೋಲಿಸಿಯೇ ಸೋಲಿಸುತ್ತಾರೆ’ ಎಂದು ಮಾಜಿ ಪ್ರಧಾನಿ, ದಿವಂಗತ ಅಟಲ್‌ಬಿಹಾರಿ ವಾಜಪೇಯಿ ಅವರ ಆಪ್ತರಾಗಿದ್ದ ಸುಧೀಂದ್ರ ಕುಲಕರ್ಣಿ ಹೇಳಿದರು.

ದಾವಣಗೆರೆಯಲ್ಲಿ ಶನಿವಾರ ನಡೆದ ಮೇ ಸಾಹಿತ್ಯ ಮೇಳದಲ್ಲಿ ‘ಬಹುತ್ವ ಭಾರತ’ದ ಬಗ್ಗೆ ಅವರು ಮಾತನಾಡಿದರು.

‘ನಾನು ಕಮ್ಯುನಿಸ್ಟ್‌ ಪಕ್ಷದಲ್ಲಿದ್ದೆ. ಬಳಿಕ ಬಿಜೆಪಿಗೆ ಹೋಗಿ ವಾಜಪೇಯಿ, ಆಡ್ವಾಣಿ ಅವರಿಗೆ ಆತ್ಮೀಯನಾಗಿದ್ದೆ. ವಾಜಪೇಯಿ ನನ್ನ ನೆಚ್ಚಿನ ನಾಯಕ. ಅವರೆಂದಿಗೂ ಕೋಮುವಾದಿ ಆಗಿರಲಿಲ್ಲ. ಅವರ ನಂತರ ಬಿಜೆಪಿಯ ಜತೆಗಿನ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದಾಗಿ ಹೊರಗೆ ಬಂದಿದ್ದೇನೆ. ಮೋದಿಯ ಈ ಆಡಳಿತ ಹೆಚ್ಚು ಸಮಯ ಉಳಿಯುವುದಿಲ್ಲ’ ಎಂದರು.

‘ಜಾತ್ಯತೀತ ಮತ್ತು ಸಮಾಜವಾದ ಎಂಬುದು ಸಂವಿಧಾನದಲ್ಲಷ್ಟೇ ಉಳಿದಿದೆ. ಜಾತ್ಯತೀತ ಎಂಬುದರ ಬಗ್ಗೆ ಕನಿಷ್ಠ ಚರ್ಚೆಗಳಾಗುತ್ತಿವೆ. ಆದರೆ ಸೋಶಿಯಲಿಸಂ ವಿಚಾರಕ್ಕೆ ತಿಲಾಂಜಲಿ ಇಟ್ಟಿದ್ದೇವೆ’ ಎಂದು ವಿಷಾದಿಸಿದರು.

‘ಜಾತೀಯತೆ, ಶೋಷಣೆ ಹೀಗೆ ಅನೇಕ ಸಮಸ್ಯೆಗಳಿವೆ. ಆದರೆ, ಹಿಂದೂ ಮತ್ತು ಮುಸ್ಲಿಮರ ನಡುವೆ ಏಕತೆ ಇಲ್ಲದಿರುವುದು ಬಹುದೊಡ್ಡ ಸಮಸ್ಯೆ’ ಎಂದು
ವಿಶ್ಲೇಷಿಸಿದರು.

‘ವೈಚಾರಿಕ ಭಿನ್ನತೆ ಇರುವ ಜನರಲ್ಲಿ ಸಂವಾದ ನಡೆಯಬೇಕೆ ಹೊರತು ವಿವಾದವಲ್ಲ. ಆಗ ಮಾತ್ರ ಸಹಕಾರದ ಸಂಬಂಧ ಹುಟ್ಟಿಕೊಳ್ಳುತ್ತದೆ. ವೈಚಾರಿಕವಾಗಿ ಮೇಲ್ಮಟ್ಟದ ವಿರೋಧಿಗಳ ನಡುವೆ ಸಂವಾದ ನಡೆಯಬೇಕು. ಗಾಂಧಿ–ಅಂಬೇಡ್ಕರ್‌, ಅಂಬೇಡ್ಕರ್‌–ಕಮ್ಯುನಿಸ್ಟ್‌, ಕಮ್ಯುನಿಸ್ಟ್‌–ಗಾಂಧಿ ನಡುವೆ ಅಷ್ಟೇ ಅಲ್ಲ, ವೈಚಾರಿಕವಾಗಿ ವಿರೋಧಿಗಳ ನಡುವೆಯೂ ನಡೆಯಬೇಕು. ದೀನ್‌ ದಯಾಳ್‌ ಉಪಾಧ್ಯಾಯರ ಸಿದ್ಧಾಂತಗಳ ನಡುವೆಯೂ ನಡೆಯಬೇಕು’ ಎಂದು ಸಲಹೆ ನೀಡಿದರು.

‘ಎಲ್ಲ ಮಹಾನ್‌ ವ್ಯಕ್ತಿಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಬೇಕಿದೆ. ಯಾರನ್ನೂ ನಾವು ದೇವರನ್ನಾಗಿ ಮಾಡುವುದು ಬೇಡ. ಇಲ್ಲದೇ ಹೋದರೆ ವೈಚಾರಿಕ ತಳಹದಿಯಲ್ಲಿಯೇ ಮಡಿವಂತಿಕೆ, ಅಸ್ಪೃಶ್ಯತೆ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು