ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬರೀಷ್‌ ಸ್ಮಾರಕ ವಿಚಾರದಲ್ಲಿ ಕಣ್ಣೀರು ಹಾಕಿಸಿದ್ದ ಎಚ್‌ಡಿಕೆ: ಸುಮಲತಾ ಆರೋಪ

ತಾರಕಕ್ಕೇರಿದ ಕುಮಾರಸ್ವಾಮಿ– ಸುಮಲತಾ ಜಟಾಪಟಿ* ಕೆಟ್ಟ ಸಂಬಂಧ ಕಲ್ಪಿಸಿದ್ದ ಎಚ್‌ಡಿಕೆ : ರಾಕ್‌ಲೈನ್ ದೂರು
Last Updated 9 ಜುಲೈ 2021, 21:08 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಸಂಸದೆ ಸುಮಲತಾ ಅಂಬರೀಷ್‌ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಧ್ಯೆ ಜಟಾಪಟಿ ತಾರಕಕ್ಕೇರಿದೆ.

ತಮ್ಮ ವಿರುದ್ಧ ಕುಮಾರಸ್ವಾಮಿ ಅವರ ಆರೋಪಗಳಿಗೆ ಶುಕ್ರವಾರ ಸುಮಲತಾ ಖಾರವಾಗಿ ಪ್ರತಿಕ್ರಿಯಿಸಿದರು. ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಟ ದೊಡ್ಡಣ್ಣ, ಅಂಬರೀಷ್‌ ಪುತ್ರ ಅಭಿಷೇಕ್‌ ಕೂಡಾ ಟೀಕಾ ಪ್ರಹಾರ ನಡೆಸಿದ್ದಾರೆ.

ನಟರಿಗೆ ಅಪಮಾನ: ಅಂಬರೀಷ್ ಸ್ಮಾರಕ ಸ್ಥಾಪನೆ ವಿಚಾರದಲ್ಲಿ ನಟರಾದ ದೊಡ್ಡಣ್ಣ ಮತ್ತು ಶಿವರಾಂ, ಆಗ ಸಿ.ಎಂ ಆಗಿದ್ದ ಎಚ್‌.ಡಿ.ಕೆ ಬಳಿ ಹೋದಾಗ 2 ಗಂಟೆ ಕಾಯಿಸಿ,ಅಂಬರೀಷ್ ಏನು ಸಾಧನೆ ಮಾಡಿದ್ದಾನಂತ ಸ್ಮಾರಕ ಮಾಡಬೇಕು ಎಂದು ಪ್ರಶ್ನಿಸಿ, ಅವರ ಮುಖಕ್ಕೆ ಪತ್ರ ಎಸೆದು ಅಪಮಾನ ಮಾಡಿದರು ಎಂದು ಸುಮಲತಾ ಆರೋಪಿಸಿದರು.

‘ಅಂಬರೀಷ್ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲದವರು ಈಗ ಮಾತನಾಡುತ್ತಿದ್ದಾರೆ. ಅವರು ಅಕ್ರಮ ಮಾಡಿದ್ದರೆ, ಅಧಿಕಾರದಲ್ಲಿ ಇದ್ದಾಗ ಏಕೆ ಸುಮ್ಮನಿದ್ದಿರಿ’ ಎಂದು ಪ್ರಶ್ನಿಸಿದ ಅವರು, ‘ಅಂಬರೀಷ್‌ ಸ್ಮಾರಕಕ್ಕೆ ಅನುಮೋದನೆ ನೀಡಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಹೊರತು ಬೇರೆ ಯಾರೂ ಅಲ್ಲ’ ಎಂದರು.

‘ಕುಮಾರಸ್ವಾಮಿ ದೂರವಾಣಿ ಕದ್ದಾಲಿಕೆ ಮಾಡಿಸಿದ್ದು ನಿಜ. ಸಿಬಿಐ ಅಧಿಕಾರಿಗಳು ಎರಡು ಬಾರಿ ನನ್ನ ಬಳಿ ಬಂದು ಮಾಹಿತಿ ಪಡೆದು ಕೊಂಡು ಹೋಗಿದ್ದಾರೆ’ ಎಂದರು.

‘ಮಂಡ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಕುಮಾರಸ್ವಾಮಿ ಯಾಕೆ ಅಷ್ಟು ತಲೆ ಕೆಡಿಸಿಕೊಂಡಿದ್ದಾರೆ? ಸಂಬಂಧವಿಲ್ಲದ ವಿಚಾರವಾದರೆ ಯಾಕೆ ಆತಂಕಪಡಬೇಕು? ಸದ್ಯದಲ್ಲೇ ಮುಖ್ಯಮಂತ್ರಿ ಮತ್ತು ಗಣಿ ಸಚಿವರನ್ನು ಭೇಟಿ ಮಾಡಿ ಅಕ್ರಮ ಗಣಿಗಳ ಬಗ್ಗೆ ಮಾಹಿತಿ ನೀಡುತ್ತೇನೆ’ ಎಂದು ಸುಮಲತಾ ಹೇಳಿದರು.

ಕೆಟ್ಟ ಸಂಬಂಧ ಕಲ್ಪಿಸಿದ್ದ ಕುಮಾರಸ್ವಾಮಿ: ‘ಅಂಬರೀಷ್ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಕುಮಾರಸ್ವಾಮಿ ಹಿಂದೆ ಚುನಾವಣೆ ಸಂದರ್ಭ ನನ್ನ ಮತ್ತು ಸುಮಲತಾ ಮಧ್ಯೆ ಅಪಾರ್ಥ ಕಲ್ಪಿಸಿ, ಪ್ರಚಾರ ಮಾಡಲು ಪ್ರಯತ್ನ ನಡೆಸಿದ್ದರು’ ಎಂದು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಆರೋಪಿಸಿದ್ದಾರೆ.

‘ಚುನಾವಣೆ ಸಂದರ್ಭ ಹೊಟೇಲ್‌ನಲ್ಲಿ ಇಬ್ಬರು ನಡೆದುಕೊಂಡು ಹೋಗುವ ಸಿಸಿಟಿವಿ ಕ್ಯಾಮೆರಾದ ದೃಶ್ಯವನ್ನು ಪಡೆದು ಅದಕ್ಕೆ ಅಶ್ಲೀಲ ವಿಡಿಯೊ ಸೇರಿಸಿ ಅಪ ಪ್ರಚಾರಕ್ಕೆ ಪಿತೂರಿ ಮಾಡಿದ್ದರು. ಆದರೆ, ಅವರದೇ ಚಾನೆಲ್‌ನಲ್ಲಿದ್ದ ಅಂಬರೀಷ್‌ ಅಭಿಮಾನಿ
ಯೊಬ್ಬ ಈ ವಿಷಯವನ್ನು ನಮ್ಮ ಗಮನಕ್ಕೆ ತಂದರು. ಇಂತಹ ಕೆಟ್ಟ ಬುದ್ಧಿ ನಿಮಗೇಕೆ’ ಎಂದು ಪ್ರಶ್ನಿಸಿದರು.

ಸರ್ಕಾರ ಸತ್ತಿದೆಯೇ? ವಿಶ್ವನಾಥ್ ಕಿಡಿ (ಮೈಸೂರು ವರದಿ): ‘ಕನ್ನಂಬಾಡಿ ಬಗ್ಗೆ ಬೀದಿರಂಪ ನಡೆಯುತ್ತಿದ್ದರೂ ಮುಖ್ಯಮಂತ್ರಿ ಬಾಯಿ ಮುಚ್ಚಿಕೊಂಡಿದ್ದಾರೆ. ಜನರ ಆತಂಕ ನಿವಾರಿಸಬೇಕಾದ ರಾಜ್ಯ ಸರ್ಕಾರ ಬದುಕಿದೆಯೋ ಸತ್ತಿದೆಯೋ ತಿಳಿಯದಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್ ಶುಕ್ರವಾರ ಇಲ್ಲಿ ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‘ಟೆಂಡರ್‌ ಕರೆಯುವಲ್ಲಿ, ಕಿಕ್‌ಬ್ಯಾಕ್‌ ಪಡೆಯುವಲ್ಲಿರುವ ಆಸಕ್ತಿ ಕನ್ನಂಬಾಡಿ ಬಿರುಕಿನ ಬೀದಿ ರಂಪ ಸರಿಪಡಿಸುವುದರಲ್ಲಿ ಯಾಕಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಯೂ ಇಲ್ಲ. ಸಂಸದೆ ಸುಮಲತಾ–ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಡುವಿನ ಬೀದಿರಂಪದಿಂದ ಜನರಲ್ಲಿ ಆತಂಕ ಹೆಚ್ಚಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಯಡಿಯೂರಪ್ಪ ತಮ್ಮನ್ನು ತಾವು ಮಂಡ್ಯದ ಮಗ ಎಂದು ಹೇಳಿಕೊಳ್ಳುತ್ತಾರೆ. ಆದರೆ ಕನ್ನಂಬಾಡಿಯ ಬಿರುಕಿನ ವಿವಾದವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ತಜ್ಞರ ತಂಡವನ್ನೂ ಜಲಾಶಯಕ್ಕೆ ಕಳಿಸಿಲ್ಲ. ಈ ವಿಷಯದಲ್ಲಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ. ಕಮಿಷನ್‌ ತಿನ್ನುತ್ತಾ ಕುಳಿತಿದ್ದಾರೆ’ ಎಂದು ಅವರು ಆರೋಪಿಸಿದರು.

ಅಕ್ರಮ ಗಣಿಗಾರಿಕೆ ಇದ್ದರೆ ನಿಲ್ಲಿಸಿ
ಕೆಆರ್‌ಎಸ್‌ ಅಣೆಕಟ್ಟೆಯಿಂದ ಸುರಕ್ಷಿತ ಅಂತರದಲ್ಲಿ ಗಣಿಗಾರಿಕೆ ನಡೆಸಲಿ. ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಕಡಿವಾಣ ಹಾಕಬೇಕು ಎಂದು ಕಾಂಗ್ರೆಸ್‌ ಶಾಸಕ ಎಂ.ಬಿ.ಪಾಟೀಲ ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಲ್ಲು ಗಣಿಗಳಿಂದ ಅಣೆಕಟ್ಟೆಗೆ ತೊಂದರೆ ಆಗುತ್ತಿದ್ದರೆ ಅದನ್ನು ತಡೆಗಟ್ಟಬೇಕು ಎಂದರು.

‘ಅಂಬರೀಷ್‌ ನನ್ನ ಒಳ್ಳೆಯ ಗೆಳೆಯರಾಗಿದ್ದರು. ಸುಮಲತಾ ಅವರ ಬಗ್ಗೆ ಗೌರವವಿದೆ. ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ವಿಚಾರ ನನಗೆ ಮಾಹಿತಿ ಇಲ್ಲ’ ಎಂದು ಹೇಳಿದರು.

*
ಜುಲೈ 2ರಂದು ಅಣೆಕಟ್ಟೆ ಪುನಶ್ಚೇತನ ತಂತ್ರಜ್ಞರು ಹಾಗೂ ರಾಜ್ಯದ ಗೇಟ್‌ ಸಲಹಾ ಸಮಿತಿ ಸದಸ್ಯರು ಪರಿಶೀಲಿಸಿದ್ದು ಕೆಆರ್‌ಎಸ್‌ ನಲ್ಲಿ ಬಿರುಕುಕಂಡುಬಂದಿಲ್ಲ
–ಕೆ.ಜೈಪ್ರಕಾಶ್‌, ವ್ಯವಸ್ಥಾಪಕ ನಿರ್ದೇಶಕ, ಕಾವೇರಿ ನೀರಾವರಿ ನಿಗಮ

*
ಅಂಬರೀಷ್ ಸ್ಮಾರಕ ನಿರ್ಮಾಣದ ಬಗ್ಗೆ ಮನವಿ ಮಾಡಲು ಹೋದಾಗ 2 ಗಂಟೆ ಕಾಯಿಸಿದ್ದೂ ಅಲ್ಲದೇ, ಸ್ಮಾರಕ ಮಾಡಲು ಅವನೇನು ಮಾಡಿದ್ದಾನೆ ಎಂದು ಪತ್ರ ಮುಖಕ್ಕೆ ಎಸೆದಿದ್ದರು.
–ದೊಡ್ಡಣ್ಣ, ನಟ

*
ನಾವು ಒಪ್ಪಿಗೆ ಕೊಟ್ಟ ಕಾರಣಕ್ಕೆ ಮಂಡ್ಯಕ್ಕೆ ಅಂಬರೀಷ್ ಅವರ ಶವವನ್ನು ಒಯ್ದಿದ್ದು ಅಲ್ಲವೇ? ಸಾವಿನ ವಿಚಾರದಲ್ಲಿ ರಾಜಕೀಯ ಮಾಡಬೇಡಿ
–ಅಭಿಷೇಕ್ ಅಂಬರೀಷ್, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT