ಮಂಗಳವಾರ, ಜೂನ್ 22, 2021
22 °C
ಕೊರೊನಾ ಕಾಲದಲ್ಲಿ ಸ್ಥಳೀಯರಿಗೆ ಅವಕಾಶ ನೀಡುವಂತೆ ಉದ್ಯಮಿಗಳ ಬೇಡಿಕೆ

ಆಟಿಕೆ ಕಿಟ್‌ ಪೂರೈಕೆ: ಟೆಂಡರ್‌ ಷರತ್ತು ಬದಲಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುದ್ರಣ ಮತ್ತು ಆಟಿಕೆ ಕಿಟ್‌ಗಳ ಸರಬರಾಜು ಟೆಂಡರ್‌ ಐದು ವರ್ಷಗಳಿಂದ ಹೊರರಾಜ್ಯದವರ ಪಾಲಾಗುತ್ತಿದ್ದು, ಈ ವರ್ಷವಾದರೂ ಷರತ್ತು ಸಡಿಲಿಸಿ ಕೊರೊನಾ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದು ಮುದ್ರಕರು ಮನವಿ ಮಾಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮುದ್ರಣ ಹಾಗೂ ಆಟಿಕೆ ಕಿಟ್‌ಗಳ ಪೂರೈಕೆ ಮಾಡಲು ಟೆಂಡರ್ ಕರೆದಿದೆ. ಈ ಕ್ಷೇತ್ರದಲ್ಲಿ ಅನುಭವ ಹೊಂದಿರುವವರು ಮಾತ್ರ ಅರ್ಜಿ ಹಾಕುವಂತೆ ಷರತ್ತು ವಿಧಿಸಲಾಗಿದೆ.  ಇಂತಹ ಷರತ್ತಿನಿಂದಾಗಿ ಐದು ವರ್ಷಗಳಿಂದ ಹೊರ ರಾಜ್ಯದವರಿಗೇ ಈ ಟೆಂಡರ್‌ ಸಿಗುತ್ತಿದ್ದು, ಇಲ್ಲಿಯವರೆಗೆ ಇಂತಹ ವಸ್ತುಗಳನ್ನು ಪೂರೈಸುವ ಅವಕಾಶ ಸಿಗದೇ ಇರುವುದರಿಂದ ನಾವು ಅನುಭವ ಹೇಗೆ ತೋರಿಸಬೇಕು?’ ಎಂದು ಪಠ್ಯಪುಸ್ತಕ ಮುದ್ರಕರ ಒಕ್ಕೂಟ ಪ್ರಶ್ನಿಸಿದೆ. 

‘ಈ ಟೆಂಡರ್‌ ಮೊತ್ತ ₹33 ಕೋಟಿಯಿಂದ ₹40 ಕೋಟಿ. ಇದೇ ವಸ್ತುಗಳನ್ನು ಇಷ್ಟೇ ಮೊತ್ತಕ್ಕೆ ‘ಸಿಂಗಲ್‌ ಆರ್ಡರ್‌’ ಮಾಡಿರಬೇಕು ಎಂಬ ಷರತ್ತು ಕೂಡ ಇದೆ. ಅಲ್ಲದೆ, ಟೆಂಡರ್‌ನ ಒಟ್ಟು ಮೊತ್ತದ ಅರ್ಧದಷ್ಟು ಅಂದರೆ, ಸುಮಾರು ₹16.48 ಕೋಟಿ ಮೊತ್ತವನ್ನು ಪಾವತಿಸುವ ಷರತ್ತು ಇದೆ’ ಎಂದು ಒಕ್ಕೂಟ ಹೇಳಿದೆ. 

‘ತಾಂತ್ರಿಕ ಟೆಂಡರ್‌ ಮೊದಲು ತೆರೆದರೆ ರಾಜ್ಯದ ಯಾವ ಮುದ್ರಕರು ಈ ಷರತ್ತುಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಹಣಕಾಸು ಟೆಂಡರ್‌ನಲ್ಲಿ ಬೇರೆ ರಾಜ್ಯದವರಿಗಿಂತ ನಾವು ₹7 ಕೋಟಿಯಿಂದ ₹8ಕೋಟಿಯವರೆಗೆ ಕಡಿಮೆ ಬಿಡ್ ಮಾಡಿರುತ್ತೇವೆ. ಆದರೆ, ನಾವು ತಾಂತ್ರಿಕ ಷರತ್ತುಗಳನ್ನು ಪೂರೈಸದ ಕಾರಣ ಹೆಚ್ಚು ಮೊತ್ತದ ಬಿಡ್‌ ಮಾಡಿದ್ದರೂ ಹೊರ ರಾಜ್ಯದವರಿಗೇ ಅವಕಾಶ ಸಿಗುತ್ತಿದೆ’ ಎಂದು ಮುದ್ರಕರೊಬ್ಬರು ಹೇಳಿದರು. 

‘ರಾಜ್ಯದ ಸಣ್ಣ ಕೈಗಾರಿಕೆಗಳು ಬೇರೆ ರಾಜ್ಯದವರಿಗಿಂತ ಶೇ 15ರಷ್ಟು ಹೆಚ್ಚು ದರ ನಮೂದಿಸಿದ್ದರೂ ನಮ್ಮ ರಾಜ್ಯದವರಿಗೇ ಟೆಂಡರ್ ನೀಡಬೇಕು ಎಂದು ರಾಜ್ಯಸರ್ಕಾರವೇ ಸುತ್ತೋಲೆ ಹೊರಡಿಸಿದೆ. ಆದರೆ, ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಅವಕಾಶ ನಿರಾಕರಿಸಲಾಗುತ್ತಿದೆ. ಬೇರೆ ರಾಜ್ಯದ  ಪೂರೈಕೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇಂತಹ ಷರತ್ತುಗಳನ್ನು ವಿಧಿಸಲಾಗುತ್ತಿದೆ’ ಎಂದು ಅವರು ದೂರಿದರು. 

‘ನಮ್ಮ ರಾಜ್ಯದವರಿಗೇ ಟೆಂಡರ್‌ ಸಿಕ್ಕಿದರೆ, ರಾಜ್ಯ ಸರ್ಕಾರಕ್ಕೆ ₹8 ಕೋಟಿಯವರೆಗೆ ಉಳಿತಾಯವಾಗುತ್ತದೆ. ಜಿಎಸ್‌ಟಿ ಆದಾಯ ಕೂಡ ಬರುತ್ತದೆ. ಕೊರೊನಾ ಕಾಲದಲ್ಲಿ  ರಾಜ್ಯದ ಉದ್ದಿಮೆಗಳಿಗೆ ಸಹಕರಿಸಿ, ಉದ್ಯೋಗ ಸೃಷ್ಟಿಸಬೇಕಾದ ಈ ಸಂದರ್ಭದಲ್ಲಿ ಸರ್ಕಾರ ಟೆಂಡರ್‌ ನಿಯಮಗಳನ್ನು ಪರಿಷ್ಕರಿಸುವುದು ಸಮಯೋಚಿತ’ ಎಂದು ಅವರು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.