ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಯೋಜನೆ ಕುರಿತು ಅಭಿಪ್ರಾಯ ನೀಡಬೇಡಿ: ಸುಪ್ರೀಂ ಕೋರ್ಟ್‌ ಸೂಚನೆ

ಮೇಕೆದಾಟು ಯೋಜನೆ ಡಿಪಿಆರ್‌– ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚನೆ
Last Updated 20 ಜುಲೈ 2022, 19:42 IST
ಅಕ್ಷರ ಗಾತ್ರ

ನವದೆಹಲಿ: ‘ಮೇಕೆದಾಟು ಬಳಿ ಸಮ ತೋಲನ ಜಲಾಶಯ ನಿರ್ಮಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಸಲ್ಲಿಸಿರುವವಿಸ್ತೃತ ಯೋಜನಾ ವರದಿಯ (ಡಿಪಿಆರ್‌) ಕುರಿತು ಕಾವೇರಿ ನೀರು ನಿರ್ವಹಣಾ ಪ್ರಾಧಿ ಕಾರ (ಸಿಡಬ್ಲ್ಯುಎಂಎ) ಚರ್ಚೆ ನಡೆಸಬಹುದು. ಆದರೆ, ಕರ್ನಾಟಕ ಸರ್ಕಾರದ ಪ್ರಸ್ತಾವನೆಯ ಆಧಾರದಲ್ಲಿ ಅಧಿಕೃತವಾಗಿ ಯಾವುದೇ ಅಭಿಪ್ರಾಯಕ್ಕೆ ಬರುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿದೆ.

ಯೋಜನೆಯ ಡಿಪಿಆರ್‌ಗೆ ಪ್ರಾಧಿಕಾರದಿಂದ ಅಭಿಪ್ರಾಯ ಪಡೆಯಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಜಲ ಆಯೋಗ ಸೂಚಿಸಿತ್ತು.

ಡಿಪಿಆರ್ ಬಗ್ಗೆ ಚರ್ಚಿಸಲು ಪ್ರಾಧಿಕಾರದ ಅಂತಿಮ ಸಭೆ ಶುಕ್ರವಾರಕ್ಕೆ (ಜುಲೈ 22) ನಿಗದಿಯಾಗಿತ್ತು. ಯೋಜನೆಯ ಪರವಾಗಿ ಪ್ರಾಧಿಕಾರವು ಅಭಿಪ್ರಾಯ ನೀಡಲಿದೆ ಎಂಬ ವಿಶ್ವಾಸದಲ್ಲಿ ಕರ್ನಾಟಕ ಸರ್ಕಾರ ಇತ್ತು. ಸುಪ್ರೀಂ ಕೋರ್ಟ್‌ ನಿರ್ದೇಶನದಿಂದ ಕರ್ನಾಟಕ ಸರ್ಕಾರಕ್ಕೆ ತಾತ್ಕಾಲಿಕ ಹಿನ್ನಡೆ ಆಗಿದೆ.

ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್‌, ಅಭಯ್‌ ಎಸ್‌.ಓಕಾ ಹಾಗೂ ಜೆ.ಬಿ.ಪಾರ್ದಿವಾಲಾ ಅವರಿದ್ದ ನ್ಯಾಯಪೀಠ, ಕಾವೇರಿ ಪ್ರಾಧಿಕಾರ ಹಾಗೂ ಇತರರಿಗೆ ನೋಟಿಸ್‌ ಜಾರಿ ಗೊಳಿಸಿದೆ.

ತಮಿಳುನಾಡು ಸರ್ಕಾರದ ಪರವಾಗಿ ಹಿರಿಯ ವಕೀಲ ಮುಕುಲ್‌ ರೋಹಟಗಿ ವಾದ ಮಂಡಿಸಿ, ‘ಮೇಕೆ ದಾಟು ಯೋಜನೆಯು ತಮಿಳುನಾಡು ರೈತರ ಹಿತಾಸಕ್ತಿಗೆ ಹಾನಿಕಾರಕವಾಗಲಿದೆ’ ಎಂದು ವಾದಿಸಿದರು.

ಕರ್ನಾಟಕ ಸರ್ಕಾರದ ಪರವಾಗಿ ವಾದಿಸಿದ ವಕೀಲ ಶ್ಯಾಮ್ ದಿವಾನ್‌, ‘ಈ ಯೋಜನೆಯಿಂದ ಕಾವೇರಿ ನೀರಿನ ಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಕರ್ನಾಟಕಕ್ಕೆ ಹಂಚಿಕೆಯಾದ ನೀರನ್ನು ಮಾತ್ರ ಈ ಯೋಜನೆಗೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಸಮರ್ಥಿಸಿಕೊಂಡರು.

ಆಗ ನ್ಯಾಯಪೀಠವು, ‘ಮೇಕೆದಾಟು ಡಿಪಿಆರ್ ಬಗ್ಗೆ ಅಭಿಪ್ರಾಯ ನೀಡಲು ಪ್ರಾಧಿಕಾರಕ್ಕೆ ಅಧಿಕಾರ ಇದೆಯೇ ಎಂಬುದು ಈಗ ನಮ್ಮ ಮುಂದಿರುವ ಪ್ರಶ್ನೆ’ ಎಂದು ಹೇಳಿತು.

ಆಗ ಶ್ಯಾಮ್ ದಿವಾನ್‌, ‘ಈ ವಿಷಯದ ಕುರಿತು ಅಭಿಪ್ರಾಯ ನೀಡಲು ಪ್ರಾಧಿಕಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ಕೋರಿದರು.

ನ್ಯಾಯಪೀಠವು, ‘ವಿಸ್ತ್ರತ ಯೋಜನಾವರದಿ ಕುರಿತು ಪ್ರಾಧಿಕಾರ ಸಭೆ ಹಾಗೂ ಚರ್ಚೆಗಳನ್ನು ನಡೆಸಬಹುದು. ಆದರೆ, ಯಾವುದೇ ಅಂತಿಮ ಅಭಿಪ್ರಾಯಕ್ಕೆ ಬರುವಂತಿಲ್ಲ’ ಎಂದು ಸ್ಪಷ್ಟಪಡಿಸಿತು.

ಆಗ ರೋಹಟಗಿ, ‘ಕರ್ನಾಟಕ ಸರ್ಕಾರ ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಆದೇಶ ಉಲ್ಲಂಘಿಸಲು ಮುಂದಾಗಿದೆ. ಶುಕ್ರವಾರ ನಡೆಯಬೇಕಿರುವ ಪ್ರಾಧಿಕಾರದ ಅಂತಿಮ ಸಭೆಗೆ ತಡೆಯಾಜ್ಞೆ ನೀಡಬೇಕು’ ಎಂದರು.

ಕರ್ನಾಟಕದ ಪರ ವಕೀಲರು, ‘ಕಾವೇರಿ ನೀರು ಹಂಚಿಕೆ ಕುರಿತು ಈ ನ್ಯಾಯಾಲಯ ಈಗಾಗಲೇ ಅಂತಿಮ ತೀರ್ಪು ನೀಡಿದೆ. ಅದರಂತೆ ಹಂಚಿಕೆಯಾದ ನೀರನ್ನು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರ ಬದ್ಧವಾಗಿದೆ’ ಎಂದರು. ಆ ಬಳಿಕ ನ್ಯಾಯಪೀಠವು ಪ್ರಕರಣದ ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಿತು.

ಗೆಲುವು ದೊರೆಯುವ ವಿಶ್ವಾಸ‌: ಸಿ.ಎಂ ಬೊಮ್ಮಾಯಿ

ಮಂಡ್ಯ: ‘ಸುಪ್ರೀಂ ಕೋರ್ಟ್‌ನಲ್ಲಿರುವ ಮೇಕೆದಾಟು ಅರ್ಜಿಯ ಅಂತಿಮ ವಿಚಾರಣೆ ಮಂಗಳವಾರ (ಜುಲೈ 26) ನಡೆಯಲಿದೆ. ನಮ್ಮ ವಕೀಲರು ಸಮರ್ಥ ವಾದ ಮಂಡನೆ ಮಾಡಿದ್ದು, ನಮಗೆ ಗೆಲುವು ದೊರೆಯುವ ವಿಶ್ವಾಸವಿದೆ. ಕೇಂದ್ರ ಸರ್ಕಾರ ಡಿಪಿಆರ್‌ಗೆ ಅನುಮೋದನೆ ನೀಡಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ತಿಳಿಸಿದರು.

ಶ್ರೀರಂಗಪಟ್ಟಣ ತಾಲ್ಲೂಕು ಕೆಆರ್‌ಎಸ್‌ ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ‘ನದಿಯ ಕೆಳಮಟ್ಟದಲ್ಲಿ ಕಾಮಗಾರಿ ನಡೆಸಿದರೆ ಯಾರಿಗೂ ತೊಂದರೆ ಆಗುವುದಿಲ್ಲ. ಬೇಸಿಗೆಯಲ್ಲಿ ನೀರಿನ ಸದ್ಬಳಕೆಗೆ ಯೋಜನೆ ಸಹಾಯಕವಾಗುತ್ತದೆ. ಆದರೆ ತಮಿಳುನಾಡು ಸರ್ಕಾರ ಅನಾವಶ್ಯಕವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ’ ಎಂದರು.

‘ಕಬಿನಿ ಎಡದಂಡೆ ನಾಲೆ, ಕೆಆರ್‌ಎಸ್‌ ವ್ಯಾಪ್ತಿಯ ವಿಶ್ವೇಶ್ವರಯ್ಯ ನಾಲೆ ಹಾಗೂ ಹಾರಂಗಿ ಜಲಾಶಯದ ನಾಲೆಗಳ ಆಧುನೀಕರಣಕ್ಕೆ ಸರ್ಕಾರ ₹ 480 ಕೋಟಿ ಮೀಸಲಿಟ್ಟಿದೆ. ಕೆಆರ್‌ಎಸ್‌ ಜಲಾಶಯದ ಕ್ರೆಸ್ಟ್‌ ಗೇಟ್‌ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು ಈಗಾಗಲೇ 69 ಗೇಟ್‌ ಅಳವಡಿಕೆಯಾಗಿದೆ, ಇನ್ನೂ 62 ಗೇಟ್‌ಗಳ ಅಳವಡಿಕೆ ನಡೆಯಬೇಕಾಗಿದೆ’ ಎಂದರು.

‘ಒಂದು ಹನಿ ನೀರು ಪಡೆಯುವುದಕ್ಕೂ ನಾವು ಸುಪ್ರೀಂ ಕೋರ್ಟ್‌ ಬಾಗಿಲು ತಟ್ಟಬೇಕಾಗಿದೆ. ಹೀಗಾಗಿ ಜಲಾಶಯದ ಸುರಕ್ಷತೆ ಕಾಪಾಡಿಕೊಂಡು ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ’ ಎಂದರು.

‘ಜಲ ಆಯೋಗದ ಒಪ್ಪಿಗೆ ಅಗತ್ಯ’

‘ಮೇಕೆದಾಟು ಯೋಜನೆಯ ಡಿಪಿಆರ್‌ಗೆ ಕಾವೇರಿ ನೀರು ನಿರ್ವಹಣಾ ‍ಪ್ರಾಧಿಕಾರವು ಅಭಿಪ್ರಾಯವನ್ನಷ್ಟೇ ನೀಡಲಿದೆ. ಯೋಜನಾ ವರದಿಗೆ ಕೇಂದ್ರ ಜಲ ಆಯೋಗದಿಂದಲೇ ಒಪ್ಪಿಗೆ ಪಡೆಯಬೇಕಿದೆ’ ಎಂದು ಕರ್ನಾಟಕ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

‘ಡಿಪಿಆರ್‌ ಬಗ್ಗೆ ಪ್ರಾಧಿಕಾರ ದಲ್ಲಿ ಚರ್ಚೆ ಆಗಬೇಕು ಎಂದು ತಮಿಳುನಾಡು ಸರ್ಕಾರ 2019ರಲ್ಲಿ ವಾದಿಸಿತ್ತು. ವಿಷಯದ ಬಗ್ಗೆ ಚರ್ಚೆ ನಡೆಸಲು ಪ್ರಾಧಿಕಾರಕ್ಕೆ ಅಧಿಕಾರ ಇಲ್ಲ ಎಂದು ಈಗ ಹೇಳುತ್ತಿದೆ. ತಮಿಳುನಾಡಿನ ದ್ವಂದ್ವ ನಿಲುವನ್ನು ಸುಪ್ರೀಂ ಕೋರ್ಟ್‌ನ ಗಮನಕ್ಕೆ ತರಲಾಗಿದೆ’ ಎಂದೂ ಹೇಳಿದರು.

ಏನಿದು ಯೋಜನೆ

₹5,900 ಕೋಟಿ

ಯೋಜನೆಯ ಆರಂಭಿಕ ಅಂದಾಜು ವೆಚ್ಚ

₹9,000 ಕೋಟಿ

ಯೋಜನೆಯ ಪರಿಷ್ಕೃತ ಅಂದಾಜು ವೆಚ್ಚ

5,200 ಹೆಕ್ಟೇರ್‌

ಯೋಜನೆಗಾಗಿ ಭೂಮಿ ಮುಳುಗಡೆ

99 ಮೀಟರ್‌

ಮೇಕೆದಾಟು ಜಲಾಶಯದ ಎತ್ತರ

67.14 ಟಿಎಂಸಿ ಅಡಿ

ಜಲಾಶಯದಲ್ಲಿ ನೀರು ಶೇಖರಣೆ ಸಾಮರ್ಥ್ಯ

4.75 ಟಿಎಂಸಿ ಅಡಿ

ಯೋಜನೆಯಿಂದ ಕುಡಿಯುವ ನೀರಿಗಾಗಿ ಬಳಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT