ಶನಿವಾರ, ಜನವರಿ 28, 2023
18 °C

ಸುರತ್ಕಲ್‌ ಟೋಲ್‌ ಗೇಟ್ ರದ್ದು– ನಳಿನ್‌ ಕುಮಾರ್ ಕಟೀಲ್‌ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸುರತ್ಕಲ್‌ ಟೋಲ್‌ ಸಂಗ್ರಹ ಕೇಂದ್ರ ರದ್ದಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್‌ ಕುಮಾರ್ ಕಟೀಲ್‌ ಸೋಮವಾರ ಟ್ವೀಟ್‌ ಮಾಡಿದ್ದಾರೆ.

'ನಮ್ಮ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು’ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

‘ಟೋಲ್ ರದ್ದುಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಸುರತ್ಕಲ್‌ ಟೋಲ್‌ ಸಂಗ್ರಹ ಕೇಂದ್ರವನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿ ಸುರತ್ಕಲ್‌ ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಂಘಟನೆಗಳ ಸದಸ್ಯರು ಸಮಿತಿಯ ನೇತೃತ್ವದಲ್ಲಿ ಅ.18ರಂದು ಟೋಲ್‌ಗೇಟ್‌ಗೆ ಮುತ್ತಿಗೆ ಹಾಕಿದ್ದರು. ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದರು. ಆ ಬಳಿಕ ಸಮಿತಿ ನೇತೃತ್ವದಲ್ಲಿ 18 ದಿನಗಳಿಂದ ಆಹೋರಾತ್ರಿ ಧರಣಿ ನಡೆಯುತ್ತಿದೆ. ಅವಿಭಜಿತ ದಕ್ಷಿನ ಕನ್ನಡ ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಿಂದಲೂ ವಿವಿಧ ಸಂಘಟನೆಗಳ ಪ್ರಮುಖರು ಧರಣಿಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಸಂಸದ ನಳಿನ್‌ ಅವರ ಟ್ವೀಟ್‌ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಸುರತ್ಕಲ್‌ ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್‌ ಕಾಟಿಪಳ್ಳ, ‘ಟೊಲ್‌ಗೇಟ್‌ ರದ್ದಾದ ಬಗ್ಗೆ ನಮಗೆ ಅಧಿಕೃತವಾಗಿ ಮಾಹಿತಿ ತಲುಪಿಲ್ಲ. ಟೋಲ್‌ ಸಂಗ್ರಹ ಈಗಲೂ ಮುಂದುವರಿಯುತ್ತಿದೆ. ಇಲ್ಲಿ ಟೋಲ್‌ ಸಂಗ್ರಹ ಸ್ಥಗಿತವಾದ ಬಳಿಕವೇ ನಾವು ಧರಣಿ ಅಂತ್ಯಗೊಳಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

‘ಸುರತ್ಕಲ್‌ ಟೋಲ್‌ಗೇಟ್‌ ರದ್ದಾಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಅವರು ಹೇಳಿದ ಹಾಗೆಯೇ ಟೋಲ್‌ ಗೇಟ್‌ ರದ್ದಾದರೆ ತುಂಬಾ ಸಂತೋಷ. ಅವರು ಟ್ವೀಟ್‌ನಲ್ಲಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಟೋಲ್‌ ಗೇಟ್‌ ರದ್ದಾದರೂ‌, ಅದರ ಶ್ರೇಯ ಸಲ್ಲಬೇಕಾಗಿರುವುದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಹಾಗೂ ತುಳುನಾಡಿನ ಹೋರಾಟಗಾರರಿಗೆ’ ಎಂದರು.

‘ಸತತ ಏಳು ವರ್ಷ ಇಲ್ಲಿನ ಜನರಿಂದ ಸುಲಿಗೆ ಮಾಡಲಾಗಿದೆ. ಈ ಬಗ್ಗೆ ನಳಿನ್‌ ಕುಮಾರ್‌ ಜಿಲ್ಲೆಯ ಜನರ ಕ್ಷಮೆ ಯಾಚಿಸಬೇಕಿತ್ತು. ಕನಿಷ್ಠ ಪಕ್ಷ ವಿಷಾದ ವ್ಯಕ್ತಪಡಿಸುವ ಸೌಜನ್ಯವನ್ನಾದರೂ ತೋರಿಸಬೇಕಿತ್ತು’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು