ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಸಲ್ಲಿಸಿಯೂ ಮರುಪಾವತಿಯಾಗದ ಪ್ರಕರಣಗಳಲ್ಲಿ ಕ್ರಮ: ಸುರೇಶ್‌ ಕುಮಾರ್‌

ಆರ್‌ಟಿಇ ಶುಲ್ಕ ಮರು ಪಾವತಿ: ಆರೋಪ ಪ್ರಚಾರ ತಂತ್ರ
Last Updated 27 ಡಿಸೆಂಬರ್ 2020, 19:33 IST
ಅಕ್ಷರ ಗಾತ್ರ

ಬೆಂಗಳೂರು: ‘ಆರ್‌ಟಿಇ ಶುಲ್ಕ ಮರುಪಾವತಿಗೆ ನಿರೀಕ್ಷಿತ ದಾಖಲೆಗಳನ್ನು ತಂತ್ರಾಂಶದ ಮೂಲಕ ಸಲ್ಲಿಸಿದ ನಂತರವೂ ಹಣ ಪಾವತಿ ವಿಳಂಬ ಪ್ರಕರಣಗಳನ್ನು ಗಮನಕ್ಕೆ ತಂದರೆ ಅಂಥ ಶಾಲೆಗಳಿಗೆ ನ್ಯಾಯ ಒದಗಿಸಲು ಸಿದ್ಧ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಭರವಸೆ ನೀಡಿದ್ದಾರೆ.

‘ಆರ್‌ಟಿಇ ಶುಲ್ಕ ಮರುಪಾವತಿಯಾಗಿದೆ ಎಂಬ ಶಿಕ್ಷಣ ಸಚಿವರ ಹೇಳಿಕೆ ಸುಳ್ಳು’ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, ‘ಈ ಲೋಪಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಖಚಿತ. ಆದರೆ, ದಾಖಲೆಗಳನ್ನು ಸಲ್ಲಿಸದೆಯೂ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸುವವರಿಗೆ ನನ್ನಲ್ಲಿ ಉತ್ತರವಿಲ್ಲ’ ಎಂದಿದ್ದಾರೆ.

‘2016-17ನೇ ಸಾಲಿನಲ್ಲಿ 12, 2017-18ರಲ್ಲಿ 29, 2018-19ನೇ ಸಾಲಿನಲ್ಲಿ 71, 2019-20ನೇ ಸಾಲಿನಲ್ಲಿ 1,039 ಶಾಲೆಗಳು ವಿವಿಧ ನಿರೀಕ್ಷಿತ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ, ಈ ಶಾಲೆಗಳಿಗೆ ಇನ್ನೂ ಆರ್‌ಟಿಇ ಶುಲ್ಕ ಮರುಪಾವತಿ ಆಗಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

‘ಆರ್‌ಟಿಇ ಶುಲ್ಕ ಮರುಪಾವತಿ ಸರ್ಕಾರವು ಯಾವುದೇ ವಿದ್ಯಾರ್ಥಿಯ ಕಲಿಕೆಗೆ ತೊಡಕಾಗಬಾರದೆನ್ನುವ ಉದ್ದೇಶದಿಂದ ಸೀಮಿತ ಸಂಪನ್ಮೂಲಗಳ ನಡುವೆಯೂ ನಿರ್ವಹಿಸುತ್ತಿರುವ ಪ್ರಧಾನ ಜವಾಬ್ದಾರಿ. ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಪೋಷಿಸಬೇಕೆನ್ನುವ ಮುಖ್ಯ ಜವಾಬ್ದಾರಿಯನ್ನು ಹೊಂದಿಯೂ ಯಾವುದೇ ಮಗು ಕಲಿಕೆಯಿಂದ ವಂಚಿತ ಆಗಬಾರದೆನ್ನುವ ಸದಾಶಯ ಈ ಶುಲ್ಕ ಮರುಪಾವತಿಯ ಹಿಂದಿದೆ’ ಎಂದಿದ್ದಾರೆ.

‘ಖಾಸಗಿ ಶಾಲಾ ಆಡಳಿತ ಮಂಡಳಿಗಳು ತಮ್ಮಲ್ಲಿ ಕೆಲಸ ಮಾಡುವ ಶಿಕ್ಷಕರು, ಶಿಕ್ಷಕೇತರರಿಗೆ ಯಾವುದೇ ಪ್ರತಿಕೂಲ ಸಂದರ್ಭದಲ್ಲಿಯೂ ಉದ್ಯೋಗ ಭದ್ರತೆ ನೀಡಬೇಕಾಗಿದೆ. ಅದು ಅವುಗಳ ಪ್ರಾಥಮಿಕ ಜವಾಬ್ದಾರಿಯೂ ಹೌದು. ಆದರೂ ಖಾಸಗಿ ಶಾಲೆಗಳು ವಿದ್ಯಾದಾನ ಮಾಡುವ ಶ್ರೇಷ್ಠ ಸಂಸ್ಥೆಗಳೆಂದೇ ಭಾವಿಸಿ ಸರ್ಕಾರ ಹಲವು ಸುಧಾರಣೆಗಳಿಗೆ ಮುಂದಾಗಿದೆ. ನಿಯಮಗಳ ವ್ಯಾಪ್ತಿಯಲ್ಲಿ ಪಡೆಯಬೇಕಾದ ಎಲ್ಲ ಸವಲತ್ತುಗಳನ್ನು ಸರ್ಕಾರವು ಗಮನಿಸಿಯೇ ಹಲವು ರಿಯಾಯಿತಿಗಳಿಗೆ ಮುಂದಾಗಿದೆ’ ಎಂದೂ ಹೇಳಿದ್ದಾರೆ.

‘ಆಧಾರರಹಿತವಾದ ಆಪಾದನೆ ಮಾಡುವುದು ಅನವಶ್ಯಕ ಪ್ರಚಾರ ಗಿಟ್ಟಿಸುವ ತಂತ್ರವಷ್ಟೇ ಹೊರತು, ಬೇರೇನೂ ಆಗಲು ಸಾಧ್ಯವಿಲ್ಲ. ಆರೋಪಗಳನ್ನು ಮಾಡಿದವರು ಕೂಡಾ ಖಾಸಗಿ ಶಾಲೆಗಳ ಸಾಮಾಜಿಕ ಜವಾಬ್ದಾರಿ, ಸರ್ಕಾರದ ನಿಯಂತ್ರಣದ ಇತಿಮಿತಿಗಳ ಬಗ್ಗೆಯೂ ಚರ್ಚಿಸಲಿ. ನಮಗೆ ಬೇಕಿರುವುದು ಸಹನಶೀಲವಾದ ಸಮಾಜ. ನಮ್ಮ ಮಕ್ಕಳ ಭವ್ಯ‌ ಭವಿಷ್ಯ. ಅದರಾಚೆಗೆ ಎಲ್ಲವೂ ಅರ್ಥಹೀನ’ ಎಂದೂ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT