ಕೊಡವ ಸಮುದಾಯವನ್ನು ಬುಡಕಟ್ಟು ಜಾತಿಗೆ ಸೇರಿಸುವ ಸಮೀಕ್ಷೆ ಪರಿಶೀಲಿಸಿ: ಸೂಚನೆ

ಬೆಂಗಳೂರು: ಕೊಡವ ಸಮುದಾಯವನ್ನು ಬುಡಕಟ್ಟು ಜಾತಿಗಳ ಪಟ್ಟಿಗೆ ಸೇರಿಸುವ ಉದ್ದೇಶದಿಂದ ಕರ್ನಾಟಕ ಬುಡಕಟ್ಟು ಸಂಶೋಧನಾ ಸಂಸ್ಥೆ ನಡೆಸಿರುವ ಸಮೀಕ್ಷೆ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿವೇವಾರಿ ಮಾಡಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಈಗಾಗಲೇ ನಡೆಸಿರುವ ಸಮೀಕ್ಷೆಯಲ್ಲಿ ಲೋಪ ಕಂಡು ಬಂದರೆ ಹೊಸ ಸಮೀಕ್ಷೆಗೆ ಆದೇಶಿಸಲು ಸರ್ಕಾರ ಮುಕ್ತವಾಗಿದೆ’ ಎಂದು ತಿಳಿಸಿತು.
2016ರ ಡಿಸೆಂಬರ್ 1ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ನಿಗದಿಪಡಿಸಿರುವ ನಿಯಮಗಳ ಪ್ರಕಾರ ಸಮೀಕ್ಷೆ ನಡೆಸಿಲ್ಲ ಎಂದು ಆರೋಪಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಅರ್ಜಿ ಸಲ್ಲಿಸಿತ್ತು. ‘ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಆಧರಿಸಿ ಸಮೀಕ್ಷೆ ನಡೆಸಬೇಕು. ಆದರೆ, ಸಮೀಕ್ಷೆಗೆ ಸಿದ್ಧಪಡಿಸಿದ್ದ ನಮೂನೆಯೇ ದೋಷಯುಕ್ತವಾಗಿತ್ತು. ಅದರ ಆಧಾರದಲ್ಲಿ ನಡೆಸಿರುವ ಸಮೀಕ್ಷೆಯಿಂದ ಯಾವ ಪ್ರಯೋಜನವೂ ಆಗದು’ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
2021ರ ಜೂನ್ 5ರಂದು ಸಮೀಕ್ಷಾ ವರದಿ ಸರ್ಕಾಕಕ್ಕೆ ಸಲ್ಲಿಕೆಯಾಗಿದೆ ಎಂಬುದನ್ನು ಗಮನಿಸಿದ ಪೀಠ, ‘ಕೊಡವ ಸಮುದಾಯವನ್ನು ಬುಡಕಟ್ಟು ಸಮುದಾಯಗಳ ಪಟ್ಟಿಗೆ ಸೇರಿಸಲು ಸಮೀಕ್ಷಾ ವರದಿಯ ಹೊರತಾಗಿಯೂ ಹಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಜೊತೆಗೆ ತನ್ನ ಆದೇಶದ ಪ್ರಕಾರ ಸಮೀಕ್ಷೆ ನಡೆದಿದೆಯೇ ಎಂಬುದನ್ನೂ ಸರ್ಕಾರ ಪರಿಶೀಲಿಸಬೇಕಾಗುತ್ತದೆ’ ಎಂದು ತಿಳಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.