ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಲ್ಲಿ ಸೆರೆಯಾದವ ಹಿಜ್ಬುಲ್ ಕಮಾಂಡರ್: ಕೂಲಿ ಕೆಲಸ, ಮಸೀದಿಯಲ್ಲಿ ವಾಸ

ಹಿಜ್ಬುಲ್‌ ಕಮಾಂಡರ್‌ ಬಂಧನಕ್ಕೆ ಜಂಟಿ ಕಾರ್ಯಾಚರಣೆ
Last Updated 8 ಜೂನ್ 2022, 2:33 IST
ಅಕ್ಷರ ಗಾತ್ರ

ಬೆಂಗಳೂರು: ಜಮ್ಮು–ಕಾಶ್ಮೀರದಿಂದ ಪರಾರಿಯಾಗಿ ಬೆಂಗಳೂರಿಗೆ ಬಂದಿದ್ದ ಹಿಜ್ಬುಲ್‌–ಮುಜಾಹಿದ್ದೀನ್‌ (ಎಚ್‌ಎಂ) ಉಗ್ರ ಸಂಘಟನೆಯ ಕಮಾಂಡರ್ ತಾಲಿಬ್ ಹುಸೇನ್ ಅಲಿಯಾಸ್ ತಾರಿಕ್ (36), ಮೆಜೆಸ್ಟಿಕ್‌ನ ರೈಲು ನಿಲ್ದಾಣದಲ್ಲಿ ಎರಡು ವರ್ಷ ಕೂಲಿ ಕೆಲಸ ಮಾಡಿಕೊಂಡಿದ್ದನೆಂಬ ಸಂಗತಿ ತನಿಖೆಯಿಂದ ಹೊರಬಿದ್ದಿದೆ.

ಜಮ್ಮುವಿನಲ್ಲಿ ಸೈನಿಕರು, ಪೊಲೀಸರು, ಹಿಂದೂಗಳ ಮೇಲೆ ಗುಂಡಿನ ದಾಳಿ ನಡೆಸಿ ಹಿಂಸಾಚಾರಕ್ಕೆ ಕಾರಣವಾಗಿದ್ದ ಪ್ರಕರಣದ ಆರೋಪಿ ತಾಲಿಬ್‌ನನ್ನು ನಗರದ ಓಕಳಿಪುರದಲ್ಲಿ ಜೂನ್ 3ರಂದು ಸೆರೆ ಹಿಡಿಯಲಾಗಿದೆ.

ಜಮ್ಮು–ಕಾಶ್ಮೀರ ಪೊಲೀಸರ ವಿಶೇಷ ತಂಡ ಹಾಗೂ ಭಾರತೀಯ ಸೇನೆಯ 17– ರಾಷ್ಟ್ರೀಯ ರೈಫಲ್ಸ್ ತಂಡದ ಸೈನಿಕರು, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಉಗ್ರ ತಾಲಿಬ್‌ನನ್ನು ಬಂಧಿಸಿ ಕರೆದೊಯ್ದಿದ್ದಾರೆ.

ಜಮ್ಮು–ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ್ದ ‘ಎ ದರ್ಜೆ’ ಉಗ್ರರ ಪಟ್ಟಿಯಲ್ಲಿ ತಾಲಿಬ್ ಹೆಸರಿತ್ತು. ಎರಡು ವರ್ಷ ಓಕಳಿಪುರದಲ್ಲಿ ನೆಲೆಸಿದ್ದ ಈತನ ಬಗ್ಗೆ ಬೆಂಗಳೂರು ಪೊಲೀಸರು ಹಾಗೂ ಗುಪ್ತದಳದ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

ಮಸೀದಿಯಲ್ಲಿ ಆಶ್ರಯ: ‘ಜಮ್ಮು– ಕಾಶ್ಮೀರದಲ್ಲಿ ಮುಸ್ಲಿಂ ಯುವಕರಿಗೆ ನಾನಾ ಆಮಿಷವೊಡ್ಡಿ ಸಂಘಟನೆಗೆ ಸೇರಿಸಿಕೊಳ್ಳುತ್ತಿದ್ದ ತಾಲಿಬ್, ಅವರ ಮೂಲಕ ಹಿಂಸಾಚಾರ ಮಾಡಿಸುತ್ತಿದ್ದ. ಈತನನ್ನು ಎನ್‌ಕೌಂಟರ್ ಮಾಡಲು ಜಮ್ಮು–ಕಾಶ್ಮೀರ ಪೊಲೀಸರು ಹಾಗೂ ಸೈನಿಕರು, ಹುಡುಕಾಡುತ್ತಿದ್ದರು. ಬಂಧನದ ಭೀತಿಯಿಂದಾಗಿ ತಾಲಿಬ್ 2020ರಲ್ಲಿ ಬೆಂಗಳೂರಿಗೆ ರೈಲಿನಲ್ಲಿ ಬಂದಿದ್ದ’ ಎಂದು ಮೂಲಗಳು ಹೇಳಿವೆ.

‘ಮೆಜೆಸ್ಟಿಕ್‌ನ ರೈಲು ನಿಲ್ದಾಣದಲ್ಲಿ ಇಳಿದಿದ್ದ ತಾಲಿಬ್, ಅಲ್ಲಿಯೇ ಕೆಲ ದಿನ ಉಳಿದಿದ್ದ. ಅನಾಥನೆಂದು ಹೇಳಿಕೊಂಡು ಸ್ಥಳೀಯರನ್ನು ಪರಿಚಯಿಸಿಕೊಂಡಿದ್ದ. ಗೂಡ್ಸ್ ವಾಹನಗಳ ಲೋಡಿಂಗ್, ಅನ್‌–ಲೋಡಿಂಗ್ ಕೆಲಸ ಮಾಡುತ್ತಿದ್ದ.’

‘ನಿಲ್ದಾಣಕ್ಕೆ ಹೊಂದಿಕೊಂಡಿರುವ ಓಕಳಿಪುರಕ್ಕೆ ಊಟ ಹಾಗೂ ತಿಂಡಿ ತಿನ್ನಲೆಂದು ಹೋಗಿಬರುತ್ತಿದ್ದ ತಾಲಿಬ್, ಸ್ಥಳೀಯ ಮಸೀದಿ ಮುಖ್ಯಸ್ಥ ಅನ್ವರ್ ಪರಿಚಯ ಮಾಡಿಕೊಂಡಿದ್ದ. ಅನಾಥನೆಂದು ಹೇಳಿ, ಮಸೀದಿಯಲ್ಲೇ ಕೆಲದಿನ ಆಶ್ರಯ ಪಡೆದುಕೊಂಡಿದ್ದ’ ಎಂದೂ ಮೂಲಗಳು ತಿಳಿಸಿವೆ.

ಹೆಸರು ಬದಲಿಸಿ, ಆಧಾರ್ ಮಾಡಿಸಿದ್ದ: ‘ತಾರಿಕ್ ಎಂದು ಹೆಸರು ಬದಲಾಯಿಸಿಕೊಂಡಿದ್ದ ಉಗ್ರ, ಅದೇ ಹೆಸರು ಹಾಗೂ ಓಕಳಿಪುರ ವಿಳಾಸ ಬಳಸಿ ಆಧಾರ್ ನೋಂದಣಿ ಮಾಡಿಸಿದ್ದ. ದಿನ ಕಳೆದಂತೆ ಸ್ಥಳೀಯರ ಜೊತೆ ಬೆರೆತು, ನಂಬಿಕೆ ಗಳಿಸಿದ್ದ. ಈತನ ಬಗ್ಗೆ ಯಾರಿಗೂ ಅನುಮಾನ ಸಹ ಬಂದಿರಲಿಲ್ಲ. ವರ್ಷದ ಹಿಂದೆಯಷ್ಟೇ ಜಮ್ಮುವಿಗೆ ಹೋಗಿದ್ದ ತಾಲಿಬ್, ಪತ್ನಿ ಹಾಗೂ ಮೂವರು ಮಕ್ಕಳನ್ನು ಬೆಂಗಳೂರಿಗೆ ಕರೆತಂದಿದ್ದ. ಓಕಳಿಪುರದ ಮಸೀದಿ ಪಕ್ಕದಲ್ಲಿದ್ದ ಮನೆಯಲ್ಲಿ ಕುಟುಂಬ ವಾಸವಿತ್ತು. ನಿತ್ಯವೂ ಆತ ನಿಲ್ದಾಣಕ್ಕೆ ಹೋಗಿ ಕೂಲಿ ಕೆಲಸ ಮಾಡಿ ಬರುತ್ತಿದ್ದ. ಪತ್ನಿಯು ಗೃಹಿಣಿ ಆಗಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

‘ಉಗ್ರನಿಗೆ ಆಶ್ರಯ ನೀಡಿದ್ದ ಅನ್ವರ್‌ ಎಂಬಾತನ ವಿಚಾರಣೆ ಮಾಡಲಾಗಿದೆ. ಅನಾಥನೆಂಬ ಕಾರಣಕ್ಕೆ ಆಶ್ರಯ ನೀಡಿದ್ದಾಗಿ ಅವರು ಹೇಳಿದ್ದಾರೆ. ಜೊತೆಗೆ, ಉಗ್ರನಿಗೆ ಆಧಾರ್ ಕಾರ್ಡ್‌ ಮಾಡಿಸಿಕೊಟ್ಟವರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದೂ ಹೇಳಿವೆ.

‘2016ರಲ್ಲಿ ಉಗ್ರ ಸಂಘಟನೆಗೆ ಸೇರ್ಪಡೆ’
‘ಜಮ್ಮುವಿನ ಕಿಷ್ತ್‌ವಾಡ್ ಜಿಲ್ಲೆಯ ನಿವಾಸಿಯಾದ ತಾಲಿಬ್, 2016ರಲ್ಲಿ ಹಿಜ್ಬುಲ್‌–ಮುಜಾಹಿದ್ದೀನ್‌ ಉಗ್ರ ಸಂಘಟನೆ ಸೇರಿದ್ದ. ಕಮಾಂಡೊ ಆಗಿ ತರಬೇತಿ ಪಡೆದಿದ್ದ. ಮುಸ್ಲಿಂ ಯುವಕರನ್ನು ಸೆಳೆದು ಸಂಘಟನೆಗೆ ಸೇರಿಸುವುದು ಹಾಗೂ ಹಿಂಸಾಚಾರ ಮಾಡಿಸುವುದು ಈತನ ಕೆಲಸವಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಜಮ್ಮು– ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿ ಪಾಕಿಸ್ತಾನಕ್ಕೆ ಸೇರಿಸಬೇಕೆನ್ನುವುದು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಉದ್ದೇಶ. ಇದರಡಿಯೇ ಉಗ್ರ ತಾಲಿಬ್ ಹಾಗೂ ಇತರರು ಕೆಲಸ ಮಾಡುತ್ತಿದ್ದಾರೆ’ ಎಂದು ತಿಳಿಸಿವೆ.

‘ತಾಲಿಬ್‌ ದಿನಚರಿ ಬಗ್ಗೆ ತನಿಖೆ’
‘ಎರಡು ವರ್ಷ ಬೆಂಗಳೂರಿನಲ್ಲಿ ತಾಲಿಬ್, ಸ್ಥಳೀಯವಾಗಿ ಹಲವರನ್ನು ಭೇಟಿಯಾಗುತ್ತಿದ್ದ. ಆತನ ದಿನಚರಿ ತಿಳಿಯಲು ತನಿಖೆ ನಡೆದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೂಲಿ ಕೆಲಸ ಮಾಡುತ್ತಲೇ, ಜಮ್ಮು–ಕಾಶ್ಮೀರದಲ್ಲಿದ್ದ ಸಂಘಟನೆ ಸದಸ್ಯರಿಗೆ ಸೂಚನೆ ನೀಡುತ್ತಿದ್ದ. ಈತನ ಆಣತಿಯಂತೆ ದಾಳಿ ನಡೆಯುತ್ತಿತ್ತು. ಜಮ್ಮು–ಕಾಶ್ಮೀರದ ಪೊಲೀಸರೂ ಸಹ ತಾಲಿಬ್ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ’ ಎಂದೂ ತಿಳಿಸಿವೆ.

ಶಸ್ತ್ರಸಜ್ಜಿತ ಸೈನಿಕರ ಕಂಡು ಆತಂಕ
ಉಗ್ರನ ಬಂಧನಕ್ಕಾಗಿ ಓಕಳಿಪುರದಲ್ಲಿ ಜೂನ್ 3ರಂದು ಪೊಲೀಸರು ಹಾಗೂ ಸೈನಿಕರು ನಡೆಸಿದ್ದ ಕಾರ್ಯಾಚರಣೆ, ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.

‘20 ಕ್ಕೂ ಹೆಚ್ಚುಸೈನಿಕರು ಶಸ್ತ್ರಸಜ್ಜಿತರಾಗಿ ಮಸೀದಿ ಬಳಿ ಬಂದಿದ್ದರು. 20ಕ್ಕೂ ಹೆಚ್ಚು ಪೊಲೀಸರಿದ್ದರು. ದೊಡ್ಡ ಅನಾಹುತವಾಗಿರುವ ಆತಂಕ ಇತ್ತು. ಸೈನಿಕರು, ತಾಲಿಬ್ ಮನೆ ಸುತ್ತುವರಿದಿದ್ದರು. ಅಧಿಕಾರಿಗಳು ಬಾಗಿಲು ಬಡಿದಿದ್ದರು. ಉಗ್ರ ಬಾಗಿಲು ತೆರೆಯುತ್ತಿದ್ದಂತೆ ಹಿಡಿದುಕೊಂಡು ಸ್ಥಳದಿಂದ ಹೊರಟುಹೋದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

‘ಈತ ಉಗ್ರ ಎಂದು ಗೊತ್ತಿರಲಿಲ್ಲ. ತಾರಿಕ್ ಹೆಸರಿನಿಂದ ಪರಿಚಿತನಾಗಿದ್ದ. ಆತನ ಹಿನ್ನೆಲೆ ಕೇಳಿ ಭಯವಾಗುತ್ತಿದೆ. ಸದ್ಯ ಮನೆ, ಮಸೀದಿ ಬಳಿ ಪೊಲೀಸರ ಭದ್ರತೆ ಇದೆ’ ಎಂದೂ ತಿಳಿಸಿದರು.

*
ನಗರದಲ್ಲಿ ಭಯೋತ್ಪಾದಕನೊಬ್ಬನನ್ನು ಬಂಧಿಸಿರುವ ಕಾಶ್ಮೀರ ಪೊಲೀಸರಿಗೆ ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT