ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗೆ 12 ವಾರ ಗಡುವು

ಮೂರು ತಿಂಗಳೊಳಗೆ ಮೀಸಲು ನಿಗದಿ ಪ್ರಕ್ರಿಯೆ ಮುಗಿಸಿ: ಹೈಕೋರ್ಟ್‌
Last Updated 26 ಸೆಪ್ಟೆಂಬರ್ 2022, 20:34 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯದ 31 ಜಿಲ್ಲಾ ಪಂಚಾಯಿತಿ ಹಾಗೂ 239 ತಾಲ್ಲೂಕು ಪಂಚಾಯಿತಿಗಳ ಚುನಾವಣೆಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ ರೀತಿಯ ಮೀಸಲಾತಿಯನ್ನು 12 ವಾರದೊಳಗೆ ಮರು ನಿಗದಿಪಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

ಕರ್ನಾಟಕ ಪಂಚಾಯತ್ ರಾಜ್ಹಾಗೂ ಗ್ರಾಮ ಸ್ವರಾಜ್ (ತಿದ್ದುಪಡಿ) ಕಾಯ್ದೆ- 2021ರ ಜಾರಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದ್ದ ಗೆಜೆಟ್ ಅಧಿಸೂಚನೆ ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ಹಾಗೂ ನ್ಯಾಯಮೂರ್ತಿ ಎಸ್.ವಿಶ್ವಜಿತ್‌ ಶೆಟ್ಟಿ ನೇತೃತ್ವದ ವಿಭಾಗೀಯ ನ್ಯಾಯಪೀಠವು, ಸರ್ಕಾರ ಕೇಳಿದ್ದ ಆರು ತಿಂಗಳ ಸಮಯಾವಕಾಶದ ಬದಲಿಗೆ 12 ವಾರಗಳ ಗಡುವು ನೀಡಿ ವಿಚಾರಣೆ ಮುಂದೂಡಿದೆ.

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್‌ವಿಂಗಡಣೆ (ಗಡಿ ನಿರ್ಣಯ) ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ಹಿಂಪಡೆದಿದ್ದ ಸರ್ಕಾರ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ಕಾಯ್ದೆಗೆ ತಿದ್ದುಪಡಿ ತಂದಿದೆ. ಅದನ್ನು ರಾಜ್ಯ ಚುನಾವಣಾ ಆಯೋಗ ಈಗಾಗಲೇ ಬಲವಾಗಿ ಆಕ್ಷೇಪಿಸಿದೆ.

‘ರಾಜ್ಯದ ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳ ಅವಧಿ ಈಗಾಗಲೇ ಪೂರ್ಣಗೊಂಡು→ವರುಷವೇ ಕಳೆದಿದೆ. ಇವುಗಳಿಗೆ ಚುನಾವಣೆ ನಡೆಸಲು ಆಯೋಗವು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಶೀಘ್ರ ಚುನಾವಣೆ ನಡೆಸದೇ ಹೋದಲ್ಲಿ ಆಯೋಗ ಇಷ್ಟು ದಿನ ನಡೆಸಿರುವ ಎಲ್ಲ ಸಿದ್ಧತೆಗಳೂ ವ್ಯರ್ಥವಾಗಲಿವೆ‘ ಎಂಬ ಅಂಶವನ್ನು ನ್ಯಾಯಪೀಠಕ್ಕೆ ಆಯೋಗವು ತಿಳಿಸಿದೆ.

ಜನಸಂಖ್ಯೆ ಅನುಪಾತದ ಆಧಾರದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಸ್ಥಾನ
ಮತ್ತು ಅಭ್ಯರ್ಥಿಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪಂಚಾಯತ್ ರಾಜ್ ಹಾಗೂ ಗ್ರಾಮ ಸ್ವರಾಜ್ (ತಿದ್ದುಪಡಿ) ಕಾಯ್ದೆ-2021ರ ಜಾರಿಗೆ ರಾಜ್ಯ ಸರ್ಕಾರ 2021ರ ಸೆಪ್ಟೆಂಬರ್ 18ರಂದು ಗೆಜೆಟ್ ಅಧಿಸೂಚನೆ ಹೊರಡಿಸಿತ್ತು.

ಮೂರು ತಿಂಗಳ ಸಮಯ

ಹೈಕೋರ್ಟ್‌ ಆದೇಶದ ಅನುಸಾರ ಕ್ಷೇತ್ರ ಪುನರ್‌ ವಿಂಗಡಣೆ ಆಯೋಗವು ಮೂರು ತಿಂಗಳಲ್ಲಿ ತನ್ನ ವರದಿ ಸಲ್ಲಿಸುವ ನಿರೀಕ್ಷೆಯಿದೆ. ಬಹುಶಃ ಈ ಪ್ರಕ್ರಿಯೆ ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದ್ದು, 2023ರ ಜನವರಿಯಲ್ಲಿ ವರದಿ ಸರ್ಕಾರದ ಕೈಸೇರಲಿದೆ. ಸರ್ಕಾರ ತದನಂತರ ಮುಂದಿನ ಕ್ರಮ ಕೈಗೊಂಡು ಚುನಾವಣೆ ನಡೆಸುವ ಸಿದ್ಧತೆ ಮಾಡಿಕೊಳ್ಳಬೇಕು.

ಪ್ರಭುಲಿಂಗ ಕೆ.ನಾವದಗಿ,ಅಡ್ವೊಕೇಟ್‌ ಜನರಲ್‌, ಹೈಕೋರ್ಟ್‌

===

ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಕಾರ್ಯ ಆರಂಭಿಸಿಲ್ಲ. ಈ ಸಂಬಂಧ ರಚಿಸಲಾಗಿರುವ ಆಯೋಗವು ತನ್ನ ವರದಿ ನೀಡಿದ ಬಳಿಕವಷ್ಟೇ ಆ ಕಾರ್ಯ ಆರಂಭಿಸಲಾಗುವುದು.

ಎಲ್‌.ಕೆ.ಅತೀಕ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪಂಚಾಯತ್ ರಾಜ್‌ ಇಲಾಖೆ

===

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಶೀಘ್ರವೇ ಚುನಾವಣೆ ನಡೆಸಬೇಕು ಎಂಬುದು ರಾಜ್ಯ ಚುನಾವಣಾ ಆಯೋಗದ ಆಶಯ. ಇವುಗಳನ್ನು ದೀರ್ಘಕಾಲದವರೆಗೆ ಜನಪ್ರತಿನಿಧಿಗಳಿಲ್ಲದೆ ಖಾಲಿ ಇಡುವುದು ಪ್ರಜಾಪ್ರಭುತ್ವದ ಸರಿಯಲ್ಲ.

ಕೆ.ಎನ್‌.ಫಣೀಂದ್ರ, ಆಯೋಗದ ಪರ ಹಿರಿಯ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT