ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಿತ ಕಾಲದಲ್ಲೇ ತೆರಿಗೆ ಏರಿಕೆ ಬರೆ: ಸರ್ಕಾರಕ್ಕೆ ಸಾಲ, ಜನರಿಗೆ ತೆರಿಗೆ ಶೂಲ

₹20 ಸಾವಿರ ಕೋಟಿ ಸಾಲ ಎತ್ತಲು ತಂದ ‘ಸುಧಾರಣೆ’ಯ ಪರಿಣಾಮ
Last Updated 31 ಆಗಸ್ಟ್ 2021, 21:15 IST
ಅಕ್ಷರ ಗಾತ್ರ

ಬೆಂಗಳೂರು: ಬರಿದಾದ ಬೊಕ್ಕಸ ತುಂಬಿಸಿಕೊಳ್ಳಲು ತೆರಿಗೆಯ ‘ಉಕ್ಕಿನ ಬಲೆ’ ಬೀಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡ ಮತ್ತು ಮಧ್ಯಮ ವರ್ಗದವರ ಬೆನ್ನಿಗೆ ಕರ ಭಾರ ಹೇರುತ್ತಿವೆ. ಕೋವಿಡ್‌ನ ದುರಿತ ಕಾಲದಲ್ಲಿ ಸರ್ಕಾರ ಹಾಕಿದ ಹೊರೆ ತಾಳದೇ ಶ್ರೀಸಾಮಾನ್ಯರು ನಿತ್ಯವೂ ಕಣ್ಣೀರಿಡುವ ಸ್ಥಿತಿ ನಿರ್ಮಾಣವಾಗಿದೆ.

ಕೇಂದ್ರ ಸರ್ಕಾರವು ತೆರಿಗೆ ಪಾಲಿನ ಹಂಚಿಕೆ, ಸಹಾಯಾನುದಾನ ಹಾಗೂ ಜಿಎಸ್‌ಟಿ ಜಾರಿಗೊಳಿಸಿದ ಮೇಲೆ ಕೊಡಬೇಕಾದ ನಷ್ಟ ಪರಿಹಾರ ರೂಪದಲ್ಲಿ ಸಂಪನ್ಮೂಲವನ್ನು ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡಲೇಬೇಕು. ಆದರೆ, ಈ ಪಾಲಿನಲ್ಲಿ ಎಲ್ಲವನ್ನೂ ಕೇಂದ್ರ ಕಡಿಮೆ ಮಾಡಿತು. ಹೀಗಾಗಿ, ರಾಜ್ಯ ಸರ್ಕಾರ ಸಾಲದ ಮೊರೆ ಹೋಗಬೇಕಾಯಿತು. ಆದರೆ, ಅದಕ್ಕೆ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ ಕಾಯ್ದೆ–2003 ಅಡ್ಡಿಯಾಗಿತ್ತು. ಏಕೆಂದರೆ, ಈ ಕಾಯ್ದೆ ಅನುಸಾರ ಆಯಾ ವರ್ಷದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಎಸ್‌ಡಿಪಿ) ಶೇ 3 ರಷ್ಟು ಸಾಲ ತೆಗೆಯಲು ಹಾಗೂ ಒಟ್ಟಾರೆ ಸಾಲವು ಜಿಎಸ್‌ಡಿಪಿ ಶೇ 25 ರ ಮಿತಿಯನ್ನು ಮೀರಲು ಅವಕಾಶ ಇರಲಿಲ್ಲ. ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಸಾಲವನ್ನೇ ನೆಚ್ಚಿಕೊಳ್ಳಬೇಕಾದ್ದರಿಂದಾಗಿ ₹33 ಸಾವಿರ ಕೋಟಿವರೆಗೆ ಹೆಚ್ಚುವರಿ ಸಾಲ ಪಡೆಯಲು ‘ವಿತ್ತೀಯ ಹೊಣೆಗಾರಿಕೆ ಕಾಯ್ದೆಗೆ’ 2020ರಲ್ಲಿ ರಾಜ್ಯ ಸರ್ಕಾರ ತಿದ್ದುಪಡಿ ತಂದಿತು. ಇದರನ್ವಯ ರಾಜ್ಯದ ಜಿಎಸ್‌ಡಿಪಿ ಶೇ 3ರಷ್ಟಿದ್ದ ಸಾಲ ಪಡೆಯುವ ಮಿತಿಯನ್ನು ಶೇ 5ಕ್ಕೆ ಹೆಚ್ಚಿಸಲಾಯಿತು. ಆ ಮಿತಿಯನ್ನು ಶೇ 4ರಲ್ಲೇ ಉಳಿಸಿಕೊಂಡ ರಾಜ್ಯ ಸರ್ಕಾರ ಅದರ ಬಲದಲ್ಲೇ ₹20 ಸಾವಿರ ಕೋಟಿ ಹೆಚ್ಚುವರಿ ಸಾಲ ಪಡೆಯುತ್ತಿದೆ.

ಹೀಗೆ, ಹೆಚ್ಚುವರಿ ಸಾಲ ಕೊಡಿಸುವ ಮುನ್ನ ಕೇಂದ್ರ ಸರ್ಕಾರ ‘ಸುಧಾರಣೆ’ಗಳ ಹೆಸರಿನಲ್ಲಿ ನಾಲ್ಕು ಷರತ್ತುಗಳನ್ನು ವಿಧಿಸಿತು.ಸರ್ಕಾರ ವಿಧಿಸಿರುವ ಷರತ್ತುಗಳೆಂದರೆ (ಪಾಲಿಸಿ ಕಂಡಿಷನ್ಸ್‌) ವಿದ್ಯುತ್‌ ಸರಬರಾಜು ಖಾಸಗೀಕರಣ, ನಗರ ಸ್ಥಳೀಯ ಸಂಸ್ಥೆಗಳ ಆದಾಯ ಪ್ರಮಾಣ ಹೆಚ್ಚಿಸುವುದು, ಆಹಾರ ಕಲ್ಯಾಣ ಯೋಜನೆಗಳನ್ನು ರಾಷ್ಟ್ರೀಯ ಗ್ರೀಡ್‌ಗೆ ಜೋಡಿಸುವ ‘ಒನ್‌ ನೇಷನ್‌ ಒನ್‌ ಕಾರ್ಡ್‌’ ಇವುಗಳನ್ನು ರಾಜ್ಯ ಸರ್ಕಾರಗಳು ಜಾರಿಗೆ ತರಬೇಕು. ಇದರಿಂದಾಗಿ ನೀರು, ವಿದ್ಯುತ್‌, ನಿವೇಶನ, ಕಟ್ಟಡಗಳ ಮೇಲಿನ ತೆರಿಗೆ ಸದ್ದಿಲ್ಲದೇ ಹೆಚ್ಚಿಸಲಾಗಿದೆ. ಅಲ್ಲದೆ, ಸ್ಥಳೀಯ ಸಂಸ್ಥೆಗಳ ಬಜೆಟ್‌ ಗಾತ್ರವನ್ನೂ ಪರಿಷ್ಕರಿಸಲಾಗಿದೆ. ಅಲ್ಲದೆ, ಆದಾಯ ಸಂಗ್ರಹಕ್ಕಾಗಿ ಸಂಚಾರಿ ಪೊಲೀಸರು ಮತ್ತು ಸಾರಿಗೆ ಇಲಾಖೆ ಸಿಬ್ಬಂದಿ ವಾಹನ ಸವಾರರನ್ನು ಕಂಡ ಕಂಡಲ್ಲಿ ಅಡ್ಡಗಟ್ಟಿ ಪೀಡಿಸುತ್ತಿರುವುದೂ ಹೆಚ್ಚಳವಾಗಿದೆ.

ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳಲ್ಲದೇ, ಶಾಲಾ ಶುಲ್ಕ, ಆಸ್ಪತ್ರೆ ಮತ್ತು ಔಷಧದ ಖರ್ಚು, ಸಾಲಗಳ ಮೇಲಿನ ತಿಂಗಳ ಇಎಂಐ, ಕೈಸಾಲ ಹೀಗೆ ಎಲ್ಲದ್ದಕ್ಕೂ ಹಣ ಪಾವತಿಸಿ ‘ಬರಿಗೈ ದಾಸ’ನಾಗಿರುವ ‘ಆಮ್‌ ಆದ್ಮಿ’ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಬೆಂಗಳೂರು ಸೇರಿ ವಿವಿಧ ನಗರಗಳು ಮತ್ತು ಪಟ್ಟಣಗಳಲ್ಲಿ ಆಸ್ತಿ ತೆರಿಗೆಯನ್ನು ಹೆಚ್ಚಿಸಲಾಗಿದೆ. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕೆಲವೆಡೆ ತೆರಿಗೆ ಏರಿಕೆ ಜಾರಿಯಾಗಿದ್ದರೆ, ಇನ್ನೂ ಕೆಲವು ಕಡೆ ಪರಿಷ್ಕರಣೆ ಅನುಷ್ಠಾನ ಹಂತದಲ್ಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧೀನದ ನಿವೇಶನದಾರರಿಗೆ, ಅರ್ಜಿ ಶುಲ್ಕದಿಂದ ಖಾತಾ ಶುಲ್ಕದವರೆಗೆ ಹತ್ತು ಹಲವು ಶುಲ್ಕಗಳನ್ನು ಬಿಡಿಎ ಹೆಚ್ಚಳ ಮಾಡಿದೆ. ವಿವಿಧ ಅಳತೆಗಳ ನಿವೇಶನಗಳ ಖಾತಾ ಶುಲ್ಕ 2020ಕ್ಕಿಂತ ಹಿಂದಿನ ದರಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಅರ್ಜಿ ಶುಲ್ಕ ಹಾಗೂ ನೋಂದಣಿ ಶುಲ್ಕಗಳನ್ನು ಎರಡೂವರೆ ಪಟ್ಟು ಹೆಚ್ಚಿಸಲಾಗಿದೆ.ನಿವೇಶನ ಮಂಜೂರಾಗಿ ಐದು ವರ್ಷ ಕಳೆದ ಬಳಿಕವೂ ವಸತಿ ನಿರ್ಮಿಸದವರ ಖಾಲಿ ನಿವೇಶನಗಳಿಗೆ ವಿಧಿಸುವ ದಂಡನಾ ಶುಲ್ಕವನ್ನೂ ಶೇ 50ರಷ್ಟು ಹೆಚ್ಚಳ ಮಾಡಲಾಗಿದೆ.

ರಾಜ್ಯದ ವಿವಿಧ ನಗರಗಳಲ್ಲಿ ನೀರಿನ ಶುಲ್ಕದ ಪ್ರಮಾಣ 2019 ಕ್ಕೆ ಹೋಲಿಸಿದರೆ ಈ ವರ್ಷ ₹20 ರಿಂದ ₹120 ರಷ್ಟು ಹೆಚ್ಚು ಮೊತ್ತವನ್ನು ಪಾವತಿಸಬೇಕಾಗಿದೆ. ಜಲಜೀವನ್ ಮಿಷನ್ ಪೂರ್ಣ ಅನುಷ್ಠಾನಗೊಂಡರೆ, ಈಗ ನೀಡುತ್ತಿರುವ ನೀರಿನ ಕರ ದುಪ್ಪಟ್ಟಾಗಲಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಒಂದು ಲೀಟರ್‌ಗೆ ಈಗ ಸರಾಸರಿ ₹105 ಇದ್ದು, ಇದರಲ್ಲಿ ₹65 ರಿಂದ ₹67 ರಷ್ಟು ತೆರಿಗೆ ರೂಪದಲ್ಲಿದೆ. ಜನ ಸಾಮಾನ್ಯರು ಸಂಚಾರಕ್ಕಾಗಿ ದ್ವಿಚಕ್ರ ವಾಹನಗಳನ್ನೇ ಅವಲಂಬಿಸಿದ್ದಾರೆ. ಇಂಧನ ಬೆಲೆ ಏರಿಕೆಯಿಂದ ಬಸ್ಸು ಅಥವಾ ಟ್ಯಾಕ್ಸಿಗಳ ಪ್ರಯಾಣ ದರವೂ ಏರಿಕೆಯಾಗಿದೆ. ರೈಲು ದರವೂ ಇದಕ್ಕೆ ಹೊರತಾಗಿಲ್ಲ. ಟಿಕೆಟ್‌ ದರವನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಆಯ್ದ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂ ಟಿಕೆಟ್‌ ದರವನ್ನು ₹10 ರಿಂದ ₹ 50 ಕ್ಕೆ ನಿಗದಿ ಮಾಡಲಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಬೆಲೆ ಏರಿಕೆ ಶೇ 100 ರಿಂದ ಶೇ 200 ರಷ್ಟು ಆಗಿದೆ. ಇನ್ನೊಂದು ಕಡೆ ಹಣದುಬ್ಬರದಿಂದ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಖಾದ್ಯತೈಲ ಬೆಲೆ ಪ್ರತಿ ಲೀಟರ್‌ಗೆ ₹80 ರಿಂದ ₹90 ಇದ್ದದ್ದು, ₹190 ರಿಂದ ₹230 ರವರೆಗೆ ತಲುಪಿದೆ. ಅಡುಗೆ ಅನಿಲದ ಸಿಲಿಂಡರ್‌ ದರ ಈಗ ಸುಮಾರು ₹859 ತಲುಪಿದೆ. ಮದ್ಯದ ಮೇಲಿನ ತೆರಿಗೆ ಶೇ 80 ರಿಂದ ಶೇ 130 ರಷ್ಟು ಏರಿಕೆಯಾಗಿದೆ. ಇವೆಲ್ಲವೂ ಜನ ಸಾಮಾನ್ಯರಿಗೆಗಾಯದ ಮೇಲೆ ಬರೆ ಹಾಕಿದಂತಾಗಿದೆ.

ಒಬ್ಬ ವ್ಯಕ್ತಿ ಪಾವತಿಸುವ ಪರೋಕ್ಷ ತೆರಿಗೆ ₹1 ಲಕ್ಷ !: ಆದಾಯ ತೆರಿಗೆ ಪಾವತಿಸುವವರಿಗೆ ವರ್ಷಕ್ಕೆ ಇಷ್ಟೇ ಮೊತ್ತ ಕಟ್ಟುತ್ತೇವೆ ಎಂಬ ಲೆಕ್ಕ ಸಿಗುತ್ತದೆ. ಆದರೆ, ಖರೀದಿ–ಸೇವೆ ಆಧಾರದ ಮೇಲೆ ವಸೂಲು ಮಾಡುವ ತೆರಿಗೆಯ ಮೊತ್ತ ಎಷ್ಟು ಎಂಬುದು ಗೊತ್ತೇ ಆಗುವುದಿಲ್ಲ. ಅದರ ಅಂದಾಜು ಇಲ್ಲಿದೆ.

ಗಾರೆ ಕಾರ್ಮಿಕರೊಬ್ಬರ ಉದಾಹರಣೆಯನ್ನೇ ತೆಗೆದುಕೊಂಡರೆ, ಒಬ್ಬರ ದಿನಗೂಲಿ ಸುಮಾರು ₹ 500ರಿಂದ ₹700ರವರೆಗೆ ಇರುತ್ತದೆ. ಆತ ಪ್ರತಿದಿನ ದ್ವಿಚಕ್ರ ವಾಹನದಲ್ಲಿ 15 ರಿಂದ 25 ಕಿ.ಮಿ ದೂರದ ಪ್ರದೇಶಕ್ಕೆ ಕೆಲಸಕ್ಕಾಗಿ ಹೋಗಬೇಕಾಗುತ್ತದೆ. ಅದಕ್ಕೆ ದಿನವೂ 1 ಲೀಟರ್‌ (₹100 ಇದ್ದರೆ) ಪೆಟ್ರೋಲ್‌ ಬಳಸಿದರೆ, ಆತ ತೆರಬೇಕಾದ ತೆರಿಗೆ ಮೊತ್ತ ₹65 ರಿಂದ ₹67. ಆತ ಮದ್ಯಪಾನ ಮಾಡುವವನಾಗಿದ್ದರೆ, ಪ್ರತಿ ದಿನ ಅದಕ್ಕಾಗಿ₹200 ಖರ್ಚು ಮಾಡುತ್ತಾರೆ ಎಂದು ಕೊಂಡರೆ ಅದರ ತೆರಿಗೆ ಮೊತ್ತ ಶೇ 50ರಿಂದ ಶೇ 80 ರಷ್ಟಾಗುತ್ತದೆ. ಇದರ ಜತೆಗೆ ಖಾದ್ಯ ತೈಲ, ದಿನಸಿ, ಪೇಸ್ಟ್‌, ಸೋಪು ಸೇರಿದಂತೆ ಬಹುತೇಕ ದಿನ ಬಳಕೆ ಶೇ 18ರವರೆಗೆ ತೆರಿಗೆ ಇದೆ. ಅನಾರೋಗ್ಯ– ವಯೋಸಹಜ ಕಾಯಿಲೆಯ ಔಷಧ ಖರ್ಚು ಇದ್ದರೆ ಅದಕ್ಕೆ ಶೇ 12 ರಿಂದ ಶೇ 28 ರಷ್ಟು ತೆರಿಗೆ ಇದೆ. ಈ ರೀತಿಯ ಪರೋಕ್ಷ ತೆರಿಗೆ ಪಾವತಿಸುವ ಮೊತ್ತ ಲೆಕ್ಕ ಹಾಕಿದರೆ ವರ್ಷಕ್ಕೆ ಸುಮಾರು ₹ 1 ಲಕ್ಷದವರೆಗೆ ಆಗುತ್ತದೆ.

ಸರ್ಕಾರದ ಸಾಲ: 2021 ರ ಆರ್ಥಿಕ ವರ್ಷದ ಅಂತ್ಯದಲ್ಲಿ (ಮಾರ್ಚ್‌) ರಾಜ್ಯ ಸರ್ಕಾರದ ಒಟ್ಟು ಸಾಲ ₹3,68,692 ಕೋಟಿ. 2022 ರ ಮಾರ್ಚ್‌ಗೆ ಈ ಸಾಲದ ಪ್ರಮಾಣ ₹4,57,899 ಕೋಟಿಗೆ ಏರಬಹುದು ಎಂದು ಅಂದಾಜಿಸಲಾಗಿದೆ. ಅಂದರೆ ಜಿಎಸ್‌ಡಿಪಿಯ ಶೇ.26.9 ರಷ್ಟು ಆಗಲಿದೆ. ತಮಿಳುನಾಡಿನಲ್ಲಿ ಈ ಸಾಲದ ಪ್ರಮಾಣ ಶೇ 26.7 ಮತ್ತು ಕೇರಳದಲ್ಲಿ ಶೇ 37.2 ರಷ್ಟು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT