ರಾಮನಗರ: ಇದೇ ಮೊದಲ ಬಾರಿಗೆ ಬೆಂಗಳೂರು–ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಆರಂಭಗೊಂಡಿದ್ದು, ಮೊದಲ ದಿನವಾದ ಮಂಗಳವಾರ ಪ್ರಯಾಣಿಕರು ಗೊಣಗುತ್ತಲೇ ಶುಲ್ಕ ತೆತ್ತರು.
ಇದೇ 12ರಂದು ಪ್ರಧಾನಿ ಮೋದಿ ಹೆದ್ದಾರಿಯನ್ನು ಉದ್ಘಾಟಿಸಿದ್ದರು. ಅದರ ಬೆನ್ನಲ್ಲೇ ಟೋಲ್ ಸಂಗ್ರಹ ಆರಂಭ ಆಗಿದ್ದು, ಪ್ರಯಾಣಿಕರನ್ನು ಒಂದಿಷ್ಟು ಗೊಂದಲಕ್ಕೆ ದೂಡಿತ್ತು. ಟೋಲ್ ಸಿಬ್ಬಂದಿ ಜೊತೆ ವಾಹನ ಚಾಲಕರ ವಾಗ್ವಾದದ ದೃಶ್ಯ ಸಾಮಾನ್ಯ ವಾಗಿತ್ತು. ಟೋಲ್ ಸಂಗ್ರಹದ ಬಗ್ಗೆ ಮುಂಚೆಯೇ ಮಾಹಿತಿ ನೀಡಿಲ್ಲ, ಶುಲ್ಕ ದುಬಾರಿಯಾಗಿದೆ ಎಂದೆಲ್ಲ ದೂರಿದರು.
ಬೆಳಿಗ್ಗೆ 8ಕ್ಕೆ ಸರಿಯಾಗಿ ಹೆದ್ದಾರಿಯ ಕಣಮಿಣಕಿ ಹಾಗೂ ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಸಿಬ್ಬಂದಿ ಟೋಲ್ ಗೇಟುಗಳಿಗೆ ಪೂಜೆ ಸಲ್ಲಿಸಿ, ಸಂಗ್ರಹ ಆರಂಭಿಸಿದರು. ಆದರೆ ಆರಂಭದಲ್ಲಿ ತಾಂತ್ರಿಕ ತೊಂದರೆಗಳಿಂದಾಗಿ ವಿಳಂಬ ವಾಯಿತು. ನಂತರದಲ್ಲಿಯೂ ಆಗಾಗ್ಗೆ ಸಮಸ್ಯೆ ಕಾಣಿಸಿಕೊಳ್ಳುತ್ತಲೇ ಇತ್ತು.
ಬಹುತೇಕ ವಾಹನಗಳು ಫಾಸ್ಟ್ಯಾಗ್ ಹೊಂದಿದ್ದು, ಈ ಖಾತೆಗಳಲ್ಲಿ ಹಣ ಇದ್ದರೂ ಸರಿಯಾಗಿ ಸ್ಕ್ಯಾನ್ ಆಗುತ್ತಿರಲಿಲ್ಲ. ಆಗ ಸಿಬ್ಬಂದಿ ಹೊರಗೆ ವಾಹನ ಸಂಖ್ಯೆ ನೋಡಿ ಎಂಟ್ರಿ ಮಾಡಬೇಕಿತ್ತು. ಇದರಿಂದ ಟೋಲ್ ಗೇಟುಗಳ ಮುಂದೆ ವಾಹನಗಳ ಸಾಲು ಬೆಳೆಯುತ್ತ ಇತ್ತು.
ಡಬಲ್ ಶುಲ್ಕ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ಯಾಗ್ ಬಳಕೆ ಕಡ್ಡಾಯಗೊಳಿಸಲಾಗಿದ್ದು, ಈ ಸ್ಟಿಕ್ಕರ್ ಇಲ್ಲದ ವಾಹನಗಳಿಗೆ ಟೋಲ್‌ಗಳಲ್ಲಿ ದುಪ್ಪಟ್ಟು ಶುಲ್ಕ ವಿಧಿಸಲಾಯಿತು. ಇದು ಇನ್ನಷ್ಟು ಸಂಘರ್ಷಕ್ಕೆ ಕಾರಣವಾಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹ ಟೋಲ್ ಮೂಲಕ ಬೆಂಗಳೂರಿನಿಂದ ರಾಮನಗರಕ್ಕೆ ಪ್ರಯಾಣಿಸಿದ್ದು, ತಮ್ಮ ಕಾರಿಗೆ ಫಾಸ್ಟ್ಯಾಗ್ ಹೊಂದಿರದ ಕಾರಣ ಕಣಮಿಣಕಿ ಪ್ಲಾಜಾದಲ್ಲಿ ₹135ಕ್ಕೆ ಬದಲಾಗಿ ₹270 ಶುಲ್ಕ ತೆರಬೇಕಾಯಿತು.
ಕಾರ್‌ಗಳಿಗೆ ಹಾನಿ: ಟೋಲ್‌ನ ಸ್ವಯಂ ಚಾಲಿತ ಬೀಮರ್‌ಗಳು (ತಡೆಗೋಲು) ಕೆಲವೊಮ್ಮೆ ತೆರೆದುಕೊಳ್ಳಲಿಲ್ಲ. ಇನ್ನೂ ಕೆಲವೊಮ್ಮೆ ಏಕಾಏಕಿ ಕಾರ್‌ಗಳ ಮೇಲೆ ಬಿದ್ದ ಕಾರಣ ಅನೇಕ ಕಾರುಗಳ ಮುಂಭಾಗ ಹಾಗೂ ಗಾಜುಗಳಿಗೆ ಹಾನಿಯಾಯಿತು. ಇದಕ್ಕೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ನಷ್ಟ ಕಟ್ಟಿಕೊಡುವಂತೆ ಪಟ್ಟು ಹಿಡಿದ ಘಟನೆಗಳೂ ನಡೆದವು.
ಹೌಹಾರಿದ ಬಸ್ ಚಾಲಕರು: ಭಾರಿ ವಾಹನಗಳಿಗೆ ಹೆಚ್ಚಿನ ಮೊತ್ತದ ಟೋಲ್ ವಿಧಿಸಿದ್ದರಿಂದ ಚಾಲಕರು ಹೌಹಾರಿದರು.
ನಮ್ಮದೇ ರಸ್ತೆಗೆ ಟೋಲ್ ಏಕೆ: ನಟ ಪ್ರಕಾಶ್ ರಾಜ್ ಪ್ರಶ್ನೆ
ಬೆಂಗಳೂರು–ಮೈಸೂರು ದಶಪಥ ಹೆದ್ದಾರಿ ಟೋಲ್ ಸಂಗ್ರಹಕ್ಕೆ ನಟ ಪ್ರಕಾಶ್ ರಾಜ್ ವಿರೋಧ ವ್ಯಕ್ತಪಡಿಸಿದ್ದು, ನಮ್ಮ ತೆರಿಗೆ ಹಣದಿಂದಲೇ ನಿರ್ಮಾಣವಾದ ರಸ್ತೆಗೆ ಮತ್ತೆ ಟೋಲ್ ಏಕೆ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು ‘ರಸ್ತೆಗೆ ಹಾಕಿದ ದುಡ್ಡು ನಮ್ಮದು. ಆದರೆ ನಾಳೆ ಅದರಲ್ಲಿ ಓಡಾಡೋಕೆ ಟೋಲ್ ಕಟ್ಟಬೇಕಾದವರೂ ನಾವೇ’ ಎಂದು ಬೇಸರ ಹೊರಹಾಕಿದ್ದಾರೆ.
‘ಪ್ರಜೆಗಳ ದುಡ್ಡಲ್ಲಿ ಎಲ್ಲಮ್ಮನ ಜಾತ್ರೆ ನಡೆದಿದೆ. ದೆಹಲಿಯಿಂದಲೇ ಲೋಕಾರ್ಪಣೆ ಮಾಡಬಹುದಾದ ಕಾರ್ಯಕ್ರಮಕ್ಕೆ ಜನರನ್ನು ಕುರಿಗಳ ಹಾಗೆ ಹಣ, ಹೆಂಡ, ಬಿರಿಯಾನಿ ಕೊಟ್ಟು ಕರೆದುಕೊಂಡು ಬರಲಾಯಿತು. ಇದೇ ದುಡ್ಡನ್ನು ಈ ಹೆದ್ದಾರಿಯಿಂದ ದುಡಿಮೆ ಕಳೆದುಕೊಂಡ ಸಾವಿರಾರು ಬಡವರಿಗೆ ಹಂಚಬಹುದಿತ್ತು ಅಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
ಟೋಲ್ ಗೇಟ್ ಮುರಿದರು
ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್ ಆರಂಭಿಸದಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಟೋಲ್ ಪ್ಲಾಜಾಗಳ ಮುಂಭಾಗ ಪ್ರತಿಭಟನೆ ನಡೆಸಿದರು. ಕಣಮಿಣಕಿ ಪ್ಲಾಜಾ ಬಳಿ ಪ್ರತಿಭಟನೆ ವೇಳೆ ಜೆಡಿಎಸ್ ಮುಖಂಡ ನರಸಿಂಹ ಮೂರ್ತಿ ಟೋಲ್ ಗೇಟ್ ಮುರಿದರು. ಕೂಡಲೇ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಶೇಷಗಿರಿಹಳ್ಳಿ ಪ್ಲಾಜಾ ಬಳಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಮೂರು ಬಸ್‌ಗಳಲ್ಲಿ ಕರೆದೊಯ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.
‘ಬೈಕ್, ಆಟೊಗಿಲ್ಲ ಟೋಲ್’
ಆರು ಪಥಗಳ ಎಕ್ಸ್‌ಪ್ರೆಸ್ ವೇನಲ್ಲಿ ಬೈಕ್–ಪ್ರಯಾಣಿಕರ ಆಟೊ ಸಂಚಾರಕ್ಕೆ ನಿಷೇಧ ಹೇರುವುದಾಗಿ ಹೆದ್ದಾರಿ ಪ್ರಾಧಿಕಾರ ಹೇಳಿದೆ. ಸದ್ಯ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಎಕ್ಸ್‌ಪ್ರೆಸ್‌ವೇ ನಲ್ಲೇ ಈ ವಾಹನಗಳು ಸಂಚರಿಸುತ್ತಿವೆ. ಮಂಗಳವಾರ ಟೋಲ್‌ಗಳಲ್ಲಿ ಇವುಗಳಿಗೆ ಯಾವುದೇ ಶುಲ್ಕ ವಿಧಿಸಲಿಲ್ಲ.
ಪ್ರವೇಶ–ನಿರ್ಗಮನಕ್ಕೆ ತೊಂದರೆ ಇಲ್ಲ
ಟೋಲ್ ಆರಂಭದ ಬಳಿಕ ಈಗ ಹೆದ್ದಾರಿಯ ಎಕ್ಸ್‌ಪ್ರೆಸ್ ವೇನಲ್ಲಿ ಅಲ್ಲಲ್ಲಿ ನೀಡಿರುವ ಪ್ರವೇಶ–ನಿರ್ಗಮನ ದ್ವಾರಗಳನ್ನು ಮುಚ್ಚಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಸದ್ಯ ಈ ಹಿಂದೆ ಇದ್ದಂತೆಯೇ ಎಲ್ಲವನ್ನು ಉಳಿಸಿಕೊಳ್ಳಲಾಗಿದೆ. ಕೆಲವು ಕಡೆ ಸರ್ವೀಸ್ ರಸ್ತೆಯೇ ಇಲ್ಲದಿರುವ ಕಾರಣ ಟೋಲ್ ಕಟ್ಟದವರೂ ಎಕ್ಸ್‌ಪ್ರೆಸ್ ವೇನಲ್ಲೇ ಓಡಾಡುವ ಅವಕಾಶ ಇದೆ.
**
ಬೆಂಗಳೂರಿನಿಂದ ರಾಮನಗರಕ್ಕೆ ಪ್ರಯಾಣಿಸಿದ್ದು, ನನ್ನ ಕಾರಿಗೆ ಫಾಸ್ಟ್ಯಾಗ್ ತೊಂದರೆ ಹೇಳಿ ಬರೋಬ್ಬರಿ ₹270 ಟೋಲ್ ಕಟ್ಟಿಸಿಕೊಂಡಿದ್ದಾರೆ. ಹೆದ್ದಾರಿ ಪ್ರಾಧಿಕಾರವು ದರೋಡೆ ಮಾಡುತ್ತಿದೆ.
–ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
**
ಟೋಲ್‌ಗಳಲ್ಲಿನ ಬಹುತೇಕ ಸಿಬ್ಬಂದಿಗೆ ಅನುಭವ ಇಲ್ಲ. ಇಲ್ಲಿ ವಿಧಿಸುತ್ತಿರುವ ಶುಲ್ಕವೂ ಹೆಚ್ಚಾಗಿದೆ. ಫಾಸ್ಟ್ಯಾಗ್‌ನ ತೊಂದರೆ ಹೇಳಿ ಕಾಯಿಸಲಾಗುತ್ತಿದೆ. ಪ್ರಯಾಣಿಕರ ತೊಂದರೆ ಸರಿಪಡಿಸಿ.
–ಶಂಕರ್ ಪ್ರಯಾಣಿಕ, ಬೆಂಗಳೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.