ಮಂಗಳವಾರ, ನವೆಂಬರ್ 29, 2022
29 °C
ಐಐಐಟಿ ಧಾರವಾಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅಭಿಮತ

ಮನುಕುಲದ ಉದ್ಧಾರವೇ ತಂತ್ರಜ್ಞಾನದ ಆಶಯ: ಸಿಎಂ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ‘ಮನುಕುಲದ ಅಭಿವೃದ್ಧಿಯೇ ತಂತ್ರಜ್ಞಾನದ ಮೂಲ ಆಶಯ. ಇದನ್ನು ಅರಿತು ಮುಂದುವರಿದಲ್ಲಿ ಮಾತ್ರ ಯಶಸ್ಸು ಸಾಧ್ಯ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಧಾರವಾಡ ಉದ್ಘಾಟನಾ ಸಮಾರಂಭದಲ್ಲಿ ಸೋಮವಾರ ಅವರು ಮಾತನಾಡಿದರು.

‘ಯಾವುದೇ ಶಿಕ್ಷಣವಾಗಿರಲಿ ಅದು ಲೋಕಕಲ್ಯಾಣಕ್ಕಾಗಿ ಬಳಕೆಯಾಗಬೇಕು. ಯುವ ಶಕ್ತಿಯು ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ಪ್ರಸ್ತುತ ದೇಶದಲ್ಲಿ ಶೇ 46ರಷ್ಟು ಯುವಸಂಪತ್ತು ಇದೆ. ಇದನ್ನು ದೇಶ ಕಟ್ಟಲು ಬಳಕೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಕ್ಷೇತ್ರಗಳಲ್ಲೂ ಯುವಕರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದರು.

'ಅನಾದಿ ಕಾಲದಿಂದಲೂ ಕನ್ನಡ ನಾಡಿನಲ್ಲಿ ಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ಇಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಆರಂಭಗೊಂಡು ಜ್ಞಾನ ದಾಸೋಹ ಕೈಗೊಂಡಿವೆ. ಈ ಎಲ್ಲಾ ಪ್ರಯತ್ನಗಳ ಫಲವೇ ದೇಶದಲ್ಲಿ ರಾಜ್ಯ ಅಗ್ರಪಂಕ್ತಿಯಲ್ಲಿ ಇರಲು ಪ್ರಮುಖ ಕಾರಣ. ಐಐಐಟಿ ಧಾರವಾಡಕ್ಕೆ ನೀಡಲಾದ ಜಮೀನಿನಲ್ಲಿ ಮೊದಲು ರೈತರು ಬೀಜ ಬಿತ್ತಿ ಬೆಳೆ ತೆಗೆಯುತ್ತಿದ್ದರು. ಸಂಸ್ಥೆಯ ಆರಂಭದಿಂದ ಇಲ್ಲಿ ಜ್ಞಾನದ ಬೀಜ ಬಿತ್ತಿ ಲೋಕಕಲ್ಯಾಣಕ್ಕೆ ಅಗತ್ಯವಿರುವ ತಂತ್ರಜ್ಞಾನ ಉತ್ಪಾದಿಸಿ ತೋರಿಸಬೇಕಿದೆ. ವಿದ್ಯಾರ್ಥಿಗಳು ಬದ್ಧತೆ ಹಾಗೂ ಕಠಿಣ ಪರಿಶ್ರಮದಿಂದ ಅದನ್ನು ನನಸಾಗಿಸಬೇಕಾಗಿದೆ’ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ನಂತರ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಿಸಲಾಗಿದೆ. ಐಐಐಟಿಗಳ ಸಂಖ್ಯೆ 9ರಿಂದ 20ಕ್ಕೆ ಹೆಚ್ಚಿಸಲಾಗಿದೆ. ಐಐಟಿಗಳು 16ರಿಂದ 23ಕ್ಕೆ, ಐಐಎಂಗಳು 13ರಿಂದ 20ಕ್ಕೆ ಏರಿಕೆಯಾಗಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಪ್ಟಿಕಲ್ ಫೈಬರ್ ಅಳವಡಿಕೆ ಕ್ರಾಂತಿಯನ್ನುಂಟು ಮಾಡಿದ್ದು, ಅದರಿಂದ ವಾರ್ಷಿಕ ₹2.5ಲಕ್ಷ ಕೋಟಿ ಉಳಿತಾಯವಾಗುತ್ತಿದೆ. ಸರ್ಕಾರದ ಯೋಜನೆಗಳನ್ನು ಇವುಗಳ ಮೂಲಕವೇ ಬಡವರಿಗೆ ನೀಡಲು ಸಾಧ್ಯವಾಗಿದೆ’ ಎಂದರು.

ರಾಜ್ಯಪಾಲ ಥಾವರಚಂದ್ ಗೆಹಲೋತ್, ‘ರಾಜ್ಯದ ಅಭಿವೃದ್ಧಿಯು ಇಲ್ಲಿನ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು ಹಾಕಿದ ಶ್ರಮದಿಂದ ಸಾಧ್ಯವಾಗಿದೆ. ಇದೀಗ ಹುಬ್ಬಳ್ಳಿ ಧಾರವಾಡ ಭಾಗದಲ್ಲೂ ಐಟಿ ಉದ್ಯಮ ಬೆಳೆಯುತ್ತಿರುವುದು ಸಂತಸದ ಸಂಗತಿ. ಅನಾದಿ ಕಾಲದಿಂದಲೂ ಭಾರತ ಜ್ಞಾನದಲ್ಲಿ ವಿಶ್ವಗುರುವಾಗಿದೆ. ಇಂದು ಯುವಜನತೆಯನ್ನು ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವೃದ್ಧಿಸಿಕೊಂಡು ದೇಶಕ್ಕೆ ಕೊಡುಗೆ ನೀಡಬೇಕು. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಪ್ರಬುದ್ಧ ಭಾರತ, ಶ್ರೇಷ್ಠ ಭಾರತ ಹಾಗೂ ಆತ್ಮನಿರ್ಭರ ಭಾರತ ನಿರ್ಮಿಸಲು ಕೈ ಜೋಡಿಸಬೇಕು’ ಎಂದರು.

ಸಂಸ್ಥೆಯ ಅಧ್ಯಕ್ಷೆ ಸುಧಾಮೂರ್ತಿ ಮಾತನಾಡಿ, ‘ತವರುಮನೆಯಾದ ಹುಬ್ಬಳ್ಳಿಯೇ ನನಗೆ ಸ್ವರ್ಗ ಸಮಾನ. ಈ ಸ್ಥಳದಲ್ಲಿ ಐಐಐಟಿ ಕಟ್ಟಲು 2015ರಿಂದ ಬಹಳಷ್ಟು ಜನ ನನಗೆ ನೆರವಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಈ ಸಂಸ್ಥೆಯನ್ನು ನಾನು ಅರ್ಪಿಸುತ್ತಿದ್ದೇನೆ’ ಎಂದರು.

ಉತ್ತರ ಕರ್ನಾಟಕ ಊಟ ಸವಿದ ಮುರ್ಮು

ಮಧ್ಯಾಹ್ನ 2 ಗಂಟೆ ಹೊತ್ತಿಗೆ ತಡಸಿನಕೊಪ್ಪದಲ್ಲಿರುವ ಐಐಐಟಿ ಧಾರವಾಡ ಕ್ಯಾಂಪಸ್‌ ಪ್ರವೇಶಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಉತ್ತರ ಕರ್ನಾಟಕದ ಊಟವನ್ನು ಬಡಿಸಲಾಯಿತು. ಇದರಲ್ಲಿ ಖಡಕ್‌ ರೊಟ್ಟಿ, ಬದನೆಕಾಯಿ ಎಣಗಾಯಿ, ಕೆಂಪು ಚಟ್ನಿ, ಕೊರೆದ ಹಿಟ್ಟಿನ ಪಲ್ಯ, ಗೋಧಿ ಹುಗ್ಗಿ ಸೇರಿದಂತೆ ಜವಾರಿ ಊಟವನ್ನು ರಾಷ್ಟ್ರಪತಿ ಅತ್ಯಂತ ಪ್ರೀತಿಯಿಂದ ಸವಿದರು.

ಗಣ್ಯರಿಗೆ ಕೌದಿ ಕೊಡುಗೆ

ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇಳಕಲ್ ರೇಷ್ಮೆ ಸೀರೆ, ಎರಡು ಕೌದಿ ಮತ್ತು ತಾವೇ ಬರೆದ ‘ಥ್ರೀ ತೌಸಂಡ್ ಸ್ಟಿಚಸ್‌’ ಕೃತಿಯನ್ನು ಸುಧಾಮೂರ್ತಿ ನೀಡಿದರು. ವೇದಿಕೆಯಲ್ಲಿದ್ದ ಇತರ ಗಣ್ಯರಿಗೆ ಎರಡು ಕೌದಿ ಮತ್ತು ಕೃತಿಯನ್ನು ಕಾಣಿಕೆಯಾಗಿ ನೀಡಿದರು.

ಎರಡೂವರೆ ತಾಸು ಕಾದ ಗಣ್ಯರು, ವಿದ್ಯಾರ್ಥಿಗಳು

ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ಐಐಐಟಿ ಧಾರವಾಡದ ಆವರಣ ಮತ್ತು ನವಲೂರು ಸೇತುವೆಯಿಂದ ತಡಸಿನಕೊಪ್ಪವರೆಗೂ ಭಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಉದ್ಘಾಟನಾ ಕಾರ್ಯಕ್ರಮ ಮಧ್ಯಾಹ್ನ 3ಕ್ಕೆ ಇದ್ದರೂ, ಆಹ್ವಾನಿತರನ್ನು ಮಧ್ಯಾಹ್ನ 1.30ರೊಳಗಾಗಿ ಸಭಾಂಗಣದೊಳಗೆ ಕೂರಿಸಲಾಗಿತ್ತು. ನಂತರ ಹೊರಗೆ ಹೋಗಲು ಬಿಡಲಿಲ್ಲ ಹಾಗೂ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯೂ ಇರದ ಕಾರಣ ಹಲವರು ಪರದಾಡಿದರು. 

ಜೈ ಶ್ರೀರಾಮ್ ಘೋಷಣೆ

ರಾಷ್ಟ್ರಪತಿ ವೇದಿಕೆಗೆ ಬರುವ ಮೊದಲು ಸಭಾಂಗಣಕ್ಕೆ ಬಂದ ಥಾವರಚಂದ್ ಗೆಹಲೋತ್, ಬಸವರಾಜ ಬೊಮ್ಮಾಯಿ ಮತ್ತು ಪ್ರಲ್ಹಾದ ಜೋಶಿ ಅವರು ವೇದಿಕೆ ಏರಿದರು. ಜೋಶಿ ಮತ್ತು ಬೊಮ್ಮಾಯಿ ಅವರು ಸಭಿಕರತ್ತ ಕೈಬೀಸಿದರು. ಆಗ ವಿದ್ಯಾರ್ಥಿಗಳ ಕಡೆಯಿಂದ ‘ಜೈ ಶ್ರೀರಾಮ್’ ಘೋಷಣೆ ಮೊಳಗಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು