ಬುಧವಾರ, ಆಗಸ್ಟ್ 10, 2022
24 °C
ಮರಣ ಪ್ರಮಾಣ ಇಳಿಕೆಗೆ ಸಹಾಯಕ

ಎಲ್ಲ ಕಾಯಿಲೆಗಳಿಗೆ ಟೆಲಿ–ಐಸಿಯು ಸೇವೆ: ತಜ್ಞ ವೈದ್ಯರ ಕೊರತೆ ನೀಗಿಸಲು ಯೋಜನೆ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸಲು ಹಾಗೂ ಮರಣ ಪ್ರಮಾಣ ಇಳಿಕೆ ಮಾಡಲು ಹೃದ್ರೋಗ, ಕ್ಯಾನ್ಸರ್ ಸೇರಿದಂತೆ ಎಲ್ಲ ಕಾಯಿಲೆಗಳಿಗೆ ಟೆಲಿ–ಐಸಿಯು ಸೇವೆ ಒದಗಿಸುವ ಯೋಜನೆಯನ್ನು ಆರೋಗ್ಯ ಇಲಾಖೆ ರೂಪಿಸಿದೆ.

ಏಪ್ರಿಲ್ ಅಂತ್ಯಕ್ಕೆ ಈ ಸೇವೆಯು ರಾಜ್ಯದ ಪ್ರಮುಖ ಆಸ್ಪತ್ರೆಗಳು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ದೊರೆಯಲಿದೆ.

ಆರೋಗ್ಯ ಇಲಾಖೆಯಡಿ 2,008 ತಜ್ಞ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ಸರ್ಕಾರಿ ಆಸ್ಪತ್ರೆಗಳು ತಜ್ಞ ವೈದ್ಯರ ಕೊರತೆ ಎದುರಿಸುತ್ತಿವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಾರದ ಎಲ್ಲ ದಿನ 24 ಗಂಟೆಗಳೂ ಟೆಲಿ–ಐಸಿಯು ಸೇವೆ ಒದಗಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರ ಸಹಕಾರ ಪಡೆದು, ಎಲ್ಲೆಡೆ ಒಂದೇ ರೀತಿಯ ವೈದ್ಯಕೀಯ ಸೇವೆ ಒದಗಿಸುವುದು ಯೋಜನೆಯ ಉದ್ದೇಶ. 

ಕಳೆದ ವರ್ಷ ಕೋವಿಡ್ ಪ್ರಕರಣಗಳು ಏರಿಕೆ ಕಂಡ ಬಳಿಕ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿತ್ತು. ಇದರಿಂದಾಗಿ ಎಲ್ಲ ರೋಗಿಗಳಿಗೆ ಗುಣಮಟ್ಟದ ಸೇವೆ ಒದಗಿಸುವುದು ವೈದ್ಯರಿಗೆ ಸವಾಲಾಗಿತ್ತು. ಹೀಗಾಗಿ, ದೇಶದಲ್ಲಿಯೇ ಮೊದಲ ಬಾರಿಗೆ ಟೆಲಿ–ಐಸಿಯು ಪರಿಕಲ್ಪನೆಯನ್ನು ಇಲ್ಲಿ ಪರಿಚಯಿಸಲಾಯಿತು. ಸಿಸಿಟಿವಿ, ಇಂಟರ್‌ನೆಟ್ ಸಂಪರ್ಕಿತ ಸೆನ್ಸರ್‌ಗಳ ಮೂಲಕ ರೋಗಿಯ ಸ್ಥಿತಿಗತಿಯ ಬಗ್ಗೆ ರಿಯಲ್‌ ಟೈಮ್‌ ಮಾಹಿತಿ ಪಡೆದು, ಚಿಕಿತ್ಸೆ ಒದಗಿಸಲಾಯಿತು. ಈಗ ಕೋವಿಡೇತರ ಕಾಯಿಲೆಗಳ ಮರಣ ಪ್ರಮಾಣ ತಗ್ಗಿಸಲು ಈ ವ್ಯವಸ್ಥೆ ಬಳಸಿಕೊಳ್ಳಲು ಸರ್ಕಾರ ಯೋಜನೆ ರೂಪಿಸಿದೆ.

ಗುಣಮಟ್ಟದ ಸೇವೆ ಸಾಧ್ಯ: ‘ಕೋವಿಡ್ ಕಾಣಿಸಿಕೊಂಡ ಬಳಿಕ ಕೇಂದ್ರೀಕೃತ ಟೆಲಿ–ಐಸಿಯು ಘಟಕವನ್ನು ನಿರ್ಮಿಸಿ, ವರ್ಚುವಲ್ ಮಾದರಿಯಲ್ಲಿ ತಜ್ಞರ ನೆರವಿನಿಂದ ವೈದ್ಯರಿಗೆ, ಚಿಕಿತ್ಸೆಗೆ ಸಂಬಂಧಿಸಿದಂತೆ ಮಾರ್ಗದರ್ಶನವನ್ನು ಒದಗಿಸಲಾಯಿತು. ಐಸಿಯುದಲ್ಲಿ ಕ್ಲಿಷ್ಟಕರ ಸಮಸ್ಯೆ ಎದುರಿಸುತ್ತಿರುವ ಸೋಂಕಿತರ ಮಾಹಿತಿ ಸಂಗ್ರಹಿಸಿ, ತಜ್ಞರಿಗೆ ರವಾನಿಸಲಾಯಿತು. ಶೇ 60ಕ್ಕೆ ಏರಿಕೆಯಾಗಿದ್ದ ಐಸಿಯು ಮರಣ ಪ್ರಮಾಣವನ್ನು ಶೇ 24ಕ್ಕೆ ಇಳಿಕೆ ಮಾಡಲು ಸಾಧ್ಯವಾಯಿತು. ಈ ವ್ಯವಸ್ಥೆಯಿಂದ ತಜ್ಞ ವೈದ್ಯರ ಕೊರತೆಯನ್ನು ಶೇ 60ರಷ್ಟು ನಿವಾರಿಸಲು ಸಾಧ್ಯವಾಗುತ್ತದೆ. ಶುಶ್ರೂಷಕರಿಗೆ ಕೂಡ ಅಗತ್ಯ ತರಬೇತಿ ದೊರೆಯಲಿದೆ’ ಎಂದು ಇಲಾಖೆಯ ‘ಇ–ಆರೋಗ್ಯ’ ವಿಭಾಗದ ಸಹಾಯಕ ಉಪನಿರ್ದೇಶಕ ಡಾ. ವಸಂತ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

 ‘ರೋಗಿಗಳ ದತ್ತಾಂಶ ಸಂಗ್ರಹ’

‘28 ಜಿಲ್ಲಾ ಆಸ್ಪತ್ರೆಗಳು ಹಾಗೂ ಬೆಂಗಳೂರಿನ 10 ಆಸ್ಪತ್ರೆಗಳಲ್ಲಿ ಟೆಲಿ–ಐಸಿಯು ಸೇವೆಯನ್ನು ಮೊದಲ ಹಂತದಲ್ಲಿ ಪ್ರಾರಂಭಿಸಲಾಗುವುದು’ ಎಂದು ಡಾ. ವಸಂತ್ ಕುಮಾರ್ ತಿಳಿಸಿದರು.

‘ಆರೋಗ್ಯಸೌಧದಲ್ಲಿರುವ ಕೇಂದ್ರೀಕೃತ ಘಟಕವು ಕಾರ್ಯಾಚರಣೆ ಮಾಡಲಿದೆ. ಜಯದೇವ ಹೃದ್ರೋಗ ಸಂಸ್ಥೆ, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಸೇರಿದಂತೆ ವಿವಿಧ ವೈದ್ಯಕೀಯ ಸಂಸ್ಥೆಗಳ ತಜ್ಞ ವೈದ್ಯರು ಈ ವ್ಯವಸ್ಥೆಯಡಿ ಸೇವೆ ನೀಡುತ್ತಾರೆ. ಇ–ಆಸ್ಪತ್ರೆ ಯೋಜನೆಯಡಿ ರೋಗಿಗಳ ದತ್ತಾಂಶವನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಐಸಿಯುಗೆ ದಾಖಲಾದವರ ವಿವರವನ್ನೂ ನಮೂದಿಸಿಕೊಳ್ಳಲಾಗುತ್ತದೆ. ಇ–ಆಸ್ಪತ್ರೆ ಲಾಗಿನ್ ಐಡಿಯನ್ನು ತಜ್ಞರಿಗೆ ಒದಗಿಸಿ, ವೈದ್ಯರೊಂದಿಗೆ ಸಮಾಲೋಚನೆಗೆ ಅವಕಾಶ ಕಲ್ಪಿಸಲಾಗುತ್ತದೆ’ ಎಂದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು