ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲು ಪಠ್ಯಪುಸ್ತಕ ನೀಡಿ: ವಿದ್ಯಾರ್ಥಿಗಳ ಆಗ್ರಹ

ಪೂರೈಕೆಯಲ್ಲಿ ವಿಳಂಬ: ಶಾಲಾ ವಿದ್ಯಾರ್ಥಿಗಳ ಆಗ್ರಹ
Last Updated 3 ಜೂನ್ 2022, 0:53 IST
ಅಕ್ಷರ ಗಾತ್ರ

ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಈ ಸಾಲಿನ ಕನ್ನಡ ಭಾಷಾ ಮತ್ತು ಸಮಾಜವಿಜ್ಞಾನ ಪಠ್ಯಪುಸ್ತಕಗಳನ್ನು ಇನ್ನೂ ನೀಡಿಲ್ಲ. ಪಠ್ಯಪುಸ್ತಕ ಪರಿಷ್ಕರಣೆಯ ಕಾರಣದಿಂದ, ಈ ಪುಸ್ತಕಗಳ ಪೂರೈಕೆಯಲ್ಲಿ ವಿಳಂಬವಾಗಿದೆ. ಪರಿಷ್ಕೃತ ಪಠ್ಯ ಪುಸ್ತಕಗಳಿಗೆ ರಾಜಕೀಯ, ಸಾಮಾಜಿಕ ಮತ್ತು ಸಾಹಿತ್ಯ ವಲಯದಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಇದರ ಮಧ್ಯೆಯೇ ವಿದ್ಯಾರ್ಥಿಗಳು, ‘ಮೊದಲು ನಮಗೆ ಪಠ್ಯ ಪುಸ್ತಕ ನೀಡಿ’ ಎಂದು ಆಗ್ರಹಿಸಿದ್ದಾರೆ.

ತಪ್ಪು ಮಾಹಿತಿ ಇರಬಾರದು
ಹಿಂದಿನ ಪಠ್ಯಪುಸ್ತಕಗಳನ್ನೇ ಮುಂದುವರಿಸಬೇಕು. ಅವುಗಳಲ್ಲಿ ಗದ್ಯ–ಪದ್ಯ ಎಲ್ಲವೂ ಚೆನ್ನಾಗಿವೆ. ಎಲ್ಲ ಮಾಹಿತಿ ಇದೆ. ಮಹನೀಯರ ವಿಚಾರಧಾರೆಗಳು ಇವೆ. ಅವುಗಳನ್ನು ಬದಲಾಯಿಸುವುದು ಸರಿಯಲ್ಲ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಪಠ್ಯಪುಸ್ತಕಗಳಲ್ಲಿನ ಪಾಠ, ಪದ್ಯಗಳನ್ನು ಕೈಬಿಡಲೂಬಾರದು, ತಿದ್ದುಪಡಿಯನ್ನೂ ಮಾಡಬಾರದು. ಅನಿವಾರ್ಯ ಇದ್ದರೆ ಹೊಸ ಪಾಠ ಸೇರಿಸಲಿ. ಅದು ನಮ್ಮ ಜ್ಞಾನಾರ್ಜನೆಗೆ ಪೂರಕವಾಗಿರಬೇಕು. ಪಠ್ಯದಲ್ಲಿ ತಪ್ಪು ಮಾಹಿತಿ, ಗೊಂದಲದ ಅಂಶಗಳು ಇರಬಾರದು.
-ಎಚ್‌.ಎಸ್‌. ಜೀವನ್‌, 10ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಹಿರೇಗೌಜ, ಚಿಕ್ಕಮಗಳೂರು ತಾಲ್ಲೂಕು

ವಾರದ ಒಳಗೆ ಪಠ್ಯ ಪುಸ್ತಕ ನೀಡಿ
ಶಿಕ್ಷಕರು ಪಾಠ ಮಾಡುವಾಗ ನಮ್ಮ ಕೈಯಲ್ಲಿ ಪುಸ್ತಕ ಇದ್ದರೆ ಚೆನ್ನಾಗಿ ಅರ್ಥವಾಗುತ್ತದೆ. ಆದರೆ, ಸರ್ಕಾರ ಪುಸ್ತಕ ಕೊಟ್ಟಿಲ್ಲ. ರಜೆಯಲ್ಲಿ ಪರಿಷ್ಕರಣೆಗಳನ್ನು ಮುಗಿಸಿಕೊಂಡು ಶಾಲೆ ಶುರುವಾಗುವ ಹೊತ್ತಿಗೆ ಪುಸ್ತಕ ನೀಡಿದ್ದರೆ ಚೆನ್ನಾಗಿತ್ತು. ಈಗಲಾದರೂ ಒಂದು ವಾರದ ಒಳಗೆ ಕೊಡಬೇಕು. ಇಲ್ಲದೇ ಇದ್ದರೆ ನಮಗೆ ಕಲಿಯಲು ಕಷ್ಟವಾಗಲಿದೆ.
-ಇಂದೂ ಆರ್‌., 10ನೇ ತರಗತಿ, ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆ, ನಿಟುವಳ್ಳಿ, ದಾವಣಗೆರೆ

ರಾಜಕೀಯ ಬೆರೆಸಬಾರದು
ಪಠ್ಯಪುಸ್ತಕ ಪರಿಷ್ಕರಣೆ ಬೇಡ. ಮೊದಲಿದ್ದ ಇತಿಹಾಸ, ಭಾಷೆಯನ್ನು ಓದಲು ಇಚ್ಛಿಸುತ್ತೇನೆ. ಎಲ್ಲಾ ಸಾಹಿತಿಗಳು ಹಾಗೂ ಇತಿಹಾಸಕಾರರ ಜ್ಞಾನ ಅತ್ಯವಶ್ಯಕ. ಪಠ್ಯ ಪರಿಷ್ಕರಣೆಯಿಂದ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗಬಾರದು. ಪಠ್ಯಪುಸ್ತಕ ವಿಷಯದಲ್ಲಿ ರಾಜಕೀಯ ಬೆರೆಸಬಾರದು. ಪರಿಷ್ಕರಣೆ ಅಗತ್ಯ ಎನಿಸಿದರೆ, ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಸಾಹಿತಿಗಳು, ಪ್ರಗತಿಪರರು ಹಾಗೂ ಶಿಕ್ಷಕರು ಇದ್ದರೆ ಒಳ್ಳೆಯದು.
-ಮಲ್ಲಿಕಾರ್ಜುನ ಅಗಸರ, ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಸ್ಕೂಲ್, ಸಿಂದಗಿ, ವಿಜಯಪುರ ಜಿಲ್ಲೆ

ಸಲಹೆ ಪಡೆಯಿರಿ
ಜೂನ್‌ ಆರಂಭವಾಗಿದ್ದರೂ ಪಠ್ಯಪುಸ್ತಕ ವಿತರಣೆಯಾಗಿಲ್ಲ. ಇನ್ನೂ ಪಠ್ಯಪುಸ್ತಕ ಪರಿಷ್ಕರಣೆ ನಡೆಯುತ್ತಿದ್ದು ನಮ್ಮ ಕೈಗೆ ಯಾವಾಗ ಪುಸ್ತಕ ಸಿಗುತ್ತವೆ ಎನ್ನುವುದೇ ಗೊತ್ತಿಲ್ಲ. ಕಳೆದೆರಡು ವರ್ಷ ಕೋವಿಡ್‌ನಿಂದಾಗಿ ಶಾಲೆಗಳು ಸರಿಯಾಗಿ ನಡೆದಿಲ್ಲ. ಸರಿಯಾಗಿ ವ್ಯಾಸಂಗ ಮಾಡಲೂ ಸಾಧ್ಯವಾಗಿಲ್ಲ. ನಮ್ಮ ಕಲಿಕೆಗೆ, ವ್ಯಕ್ತಿತ್ವ ವಿಕಸನಕ್ಕೆ ಏನು ಬೇಕಾಗಿದೆ ಎಂಬುದನ್ನು ಅರಿತು ಅಂತಹ ಪಾಠಗಳನ್ನು ಪುಸ್ತಕದಲ್ಲಿ ಸೇರ್ಪಡೆ ಮಾಡ ಬೇಕು. ಅದಕ್ಕಾಗಿ ಸಾಹಿತಿಗಳು ಹಾಗೂ ಪರಿಣತರ ಸಲಹೆ ಪಡೆಯಬೇಕು.
-ಡಿ.ಹೊನ್ನು, 9ನೇ ತರಗತಿ ವಿದ್ಯಾರ್ಥಿನಿ, ಪಣ್ಣೆದೊಡ್ಡಿ, ಮದ್ದೂರು ತಾಲ್ಲೂಕು, ಮಂಡ್ಯ

*

ಪಠ್ಯ ಪರಿಷ್ಕರಣೆ ಸಂಬಂಧ ಸ್ವಾಮೀಜಿಗಳು, ಸಾಹಿತಿಗಳು ಸರ್ಕಾರಕ್ಕೆ ಪತ್ರ ಬರೆದು ಅಭಿಪ್ರಾಯ ತಿಳಿಸಿದ್ದಾರೆ. ಎಲ್ಲರ ಮನವಿಯನ್ನೂ ಪರಿಗಣಿಸಿ ಜೂನ್‌ 2ರಂದು ನಿರ್ಧಾರ ತೆಗೆದುಕೊಳ್ಳಲಾಗುವುದು.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT