ಬುಧವಾರ, ಜೂನ್ 29, 2022
24 °C

ಪಠ್ಯಪುಸ್ತಕ ಪರಿಷ್ಕರಣೆ: ದಲಿತ ಸಂಘಟನೆಗಳ ರಾಜ್ಯ ಸಮಿತಿ ಪ್ರತಿಭಟನೆಯ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಪರಿಷ್ಕರಣೆಗೊಳಿಸಿರುವ ಪಠ್ಯಪುಸ್ತಕವನ್ನು ಹಿಂದಕ್ಕೆ ಪಡೆದು, ಈ ಮೊದಲಿನ ಪಠ್ಯ ಮುಂದುವರೆಸಬೇಕು. ಇಲ್ಲವಾದಲ್ಲಿ ಸಾಮಾಜಿಕ ನ್ಯಾಯ ವಿರೋಧಿ ಮರು ಪರಿಷ್ಕರಣೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು’ ಎಂದು ದಲಿತ ಸಂಘಟನೆಗಳ ರಾಜ್ಯ ಸಮಿತಿ ಎಚ್ಚರಿಸಿದೆ. 

ಇಲ್ಲಿ ಮಂಗಳವಾರ ದಲಿತ ಹಕ್ಕುಗಳ ಸಮಿತಿಯ (ಡಿಎಚ್‌ಎಸ್) ಬಿ. ರಾಜಶೇಖರಮೂರ್ತಿ ಮಾತನಾಡಿ, ‘ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಸಾಮಾಜಿಕ ನ್ಯಾಯ ಕಡೆಗಣಿಸಲ್ಪಟ್ಟಿದೆ. ಜಾತಿವಾದಿ ಹಾಗೂ ಮೂಲಭೂತವಾದಿ ನಿಲುವು ಕಂಡುಬರುತ್ತಿದೆ. ಈ ಹಿಂದೆ ಪಠ್ಯಪುಸ್ತಕ ಪರಿಷ್ಕರಣೆಗೆ ಒಟ್ಟು 27 ಸಮಿತಿಗಳಿದ್ದವು. ಪ್ರತಿ ಸಮಿತಿಗೂ ಒಬ್ಬಬ್ಬರು ಅಧ್ಯಕ್ಷರಿದ್ದರು. ಬರಗೂರು ರಾಮಚಂದ್ರಪ್ಪ ಒಬ್ಬರೇ ಪರಿಷ್ಕರಣೆ ಮಾಡಿರಲಿಲ್ಲ. ಸಮಿತಿಯಲ್ಲಿ 170ಕ್ಕೂ ಅಧಿಕ ಸದಸ್ಯರಿದ್ದರು. 27 ಸಮಿತಿಯಲ್ಲಿಯೂ ವಿಷಯ ತಜ್ಞರು, ಅಧ್ಯಾಪಕರು ಮತ್ತು ವಿವಿಧ ಸಮುದಾಯಕ್ಕೆ ಸೇರಿದವರು ಇದ್ದರು. ಆದರೆ, ಈಗ ಪರಿಷ್ಕರಣೆಗೆ ಒಂದೇ ಸಮಿತಿ ರಚಿಸಿದ್ದು, ಅದು ಸಾಮಾಜಿಕ ಸಮತೋಲನದಿಂದ ಕೂಡಿಲ್ಲ’ ಎಂದರು. 

‘ರೋಹಿತ್ ಚಕ್ರತೀರ್ಥ ಅವರು ಭಾಷಾಪಠ್ಯಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆ ತುರುಕಬಾರದು ಎಂದಿದ್ದಾರೆ. ಅದರಂತೆ ಸಾಮಾಜಿಕ ನ್ಯಾಯ, ಲಿಂಗ ಸಮಾನತೆಗೆ ವಿರುದ್ಧವಾಗಿ ಪರಿಷ್ಕರಣೆ ಮಾಡಿದ್ದಾರೆ. ಇದನ್ನು ಸಚಿವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸಂವಿಧಾನದ ಆಶಯಕ್ಕೆ ವಿರುದ್ಧವಾದ ಈ ನಡೆ ಖಂಡನೀಯ’ ಎಂದು ಬೇಸರ ವ್ಯಕ್ತಪಡಿಸಿದರು. 

ದಲಿತ ಸಂಘರ್ಷ ಸಮಿತಿಯ (ಡಿಎಸ್‌ಎಸ್–ಭೀಮವಾದ) ಮೋಹನ್ ರಾಜು ಆರ್., ‘ಸಮಾಜ ಸುಧಾರಕರಾದ ನಾರಾಯಣಗುರು ಮತ್ತು ಪೆರಿಯಾರ್ ಅವರ ಪಾಠಗಳನ್ನು 10ನೇ ತರಗತಿ ಪಠ್ಯದಿಂದ ಕೈಬಿಡಲಾಗಿದೆ. ನಾರಾಯಣಗುರು ಅವರು ತಳಸಮುದಾಯಗಳಲ್ಲಿ ಆತ್ಮವಿಶ್ವಾಸ ತುಂಬಿದರು. ಮೂಲತಃ ಕರ್ನಾಟಕದವರೇ ಆದ ಪೆರಿಯಾರ್ ಅವರು ದ್ರಾವಿಡ ಸ್ವಾಭಿಮಾನ ಚಳವಳಿ ಕಟ್ಟಿದರು. ಇವರನ್ನು ಕೈಬಿಟ್ಟು, ಹೊಸದಾಗಿ ಸೇರಿಸಿದ ಪಾಠಗಳು ಜನವಿರೋಧಿಯಾಗಿವೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು