ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಗ್ನಿಪಥ’ ಯೋಜನೆ ಕ್ರಾಂತಿಕಾರಕ ಸುಧಾರಣೆ: ಚಿತ್ರದುರ್ಗ ಸಮಾವೇಶದಲ್ಲಿ ಜೆಪಿ ನಡ್ಡಾ

ಹೋರಾಟ ಕೈಬಿಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಯುವಕರಲ್ಲಿ ಮನವಿ
Last Updated 18 ಜೂನ್ 2022, 14:27 IST
ಅಕ್ಷರ ಗಾತ್ರ

ಚಿತ್ರದುರ್ಗ: ರಕ್ಷಣಾ ಪಡೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿದ ‘ಅಗ್ನಿಪಥ’ ಯೋಜನೆ ಕ್ರಾಂತಿಕಾರಕ ಸುಧಾರಣೆಯಾಗಿದೆ. ಯುವಸಮೂಹ ಯೋಜನೆಯನ್ನು ಅರ್ಥಮಾಡಿಕೊಳ್ಳಬೇಕೆ ಹೊರತು ವಿಚಿದ್ರಕಾರಿ ಶಕ್ತಿಗಳ ಪಿತೂರಿಗೆ ಬಲಿಯಾಗಬಾರದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮನವಿ ಮಾಡಿದರು.

ಇಲ್ಲಿನ ಮುರುಘಾ ಮಠದ ಅನುಭವಮಂಟಪದಲ್ಲಿ ಶನಿವಾರ ನಡೆದ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಬಿಜೆಪಿ ಜನಪ್ರತಿನಿಧಿಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಭಾರತೀಯ ಸೇನೆಯನ್ನು ಬಲಿಷ್ಠಪಡಿಸಲು ಇದೊಂದು ನಂಬಿಕಾರ್ಹ ಮಾರ್ಗ. ರಕ್ಷಣಾ ಪಡೆಗಳಲ್ಲಿ ಪರಿವರ್ತನೆ, ಸುಧಾರಣೆಯ ಅಗತ್ಯವಿದ್ದು, ಅತ್ಯುತ್ತಮ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಭಾರತದ ಸೇನಾ ಸಾಮರ್ಥ್ಯ ಇನ್ನಷ್ಟು ವೃದ್ಧಿಸಿ ವಿಶ್ವದಲ್ಲಿಯೇ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಹೋರಾಟ ಮಾರ್ಗವನ್ನು ಕೈಬಿಟ್ಟು ದಾರಿತಪ್ಪಿಸುವ ಷಡ್ಯಂತ್ರವನ್ನು ಹುಸಿಗೊಳಿಸಿ. ಪ್ರಧಾನಿ ನರೇಂದ್ರ ಮೋದಿ ಮೇಲೆ ನಂಬಿಕೆ ಇಡಿ’ ಎಂದು ವಿನಂತಿಸಿಕೊಂಡರು.

‘ಯುವ ಸಮೂಹ, ಸೇನೆ ಹಾಗೂ ದೇಶದ ಬಗ್ಗೆ ಚಿಂತನೆ ಮಾಡುವ ಏಕೈಕ ಪಕ್ಷ ಬಿಜೆಪಿ. ಯುವಸಮೂಹಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದಲೇ ಈ ಯೋಜನೆ ರೂಪಿಸಲಾಗಿದೆ. ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ ಸಮಾಜದಲ್ಲಿ ಹೆಚ್ಚು ಅವಕಾಶಗಳು ಲಭಿಸಲಿದೆ. ಅಗ್ನಿವೀರರಿಗೆ ಸರ್ಕಾರಿ ನೇಮಕಾತಿಯಲ್ಲಿ ಆದ್ಯತೆ ಸಿಗಲಿದೆ’ ಎಂದು ಹೇಳಿದರು.

ಮುಖ್ಯಮಂತ್ರಿ ಶ್ಲಾಷಿಸಿದ ನಡ್ಡಾ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರದ ಜನಕಲ್ಯಾಣ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶ್ಲಾಘಿಷಿದರು.

‘ವಿದೇಶಿ ನೇರ ಬಂಡವಾಳ ಆಕರ್ಷಿಸುವಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕಾಫಿ, ಸಾಂಬಾರು ಪದಾರ್ಥಗಳನ್ನು ವಿದೇಶಕ್ಕೆ ರಫ್ತು ಮಾಡುವಲ್ಲಿಯೂ ಸಾಧನೆ ತೋರಿದೆ. 2023ರಲ್ಲಿ ನಡೆಯುವ ಚುನಾವಣೆಯಲ್ಲಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಂಪೂರ್ಣ ವಿಶ್ವಾಸವಿದೆ’ ಎಂದು ಹೇಳಿದರು.

ಕಾಂಗ್ರೆಸ್‌ ದಿವಾಳಿ: ಸಿಎಂ

ಬೌದ್ಧಿಕ, ರಾಜಕೀಯ ಹಾಗೂ ಸಂಘಟನಾತ್ಮಕವಾಗಿ ದಿವಾಳಿಯಾಗಿರುವ ಕಾಂಗ್ರೆಸ್‌, ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

‘ಅಧಿಕಾರಕ್ಕೆ ಏರುವ ಏಕಮಾರ್ತ ಉದ್ದೇಶದಿಂದ ಸಮಾಜದಲ್ಲಿ ಗೊಂದಲ ಉಂಟು ಮಾಡಿ ಕ್ಷೇಭೆ ಸೃಷ್ಟಿಸಲು ಕಾಂಗ್ರೆಸ್‌ ಹವಣಿಸುತ್ತಿದೆ. ತುರ್ತುಪರಿಸ್ಥಿತಿಯನ್ನು ಹೇರಿದ ಕಾಂಗ್ರೆಸ್‌, ಪ್ರಜಾಪ್ರಭುತ್ವ, ನಾಗರಿಕಹಕ್ಕು, ಸ್ವಾತಂತ್ರ್ಯ ಬಗ್ಗೆ ಮಾತನಾಡುತ್ತಿದೆ. ಇ.ಡಿ ವಿಚಾರಣೆಗೆ ಅಸಹಕಾರ ತೋರುತ್ತಿರುವ ರಾಹುಲ್‌ ಗಾಂಧಿ ಅವರದು ಕಾನೂನು ಮೀರಿದ ಕುಟುಂಬವಲ್ಲ’ ಎಂದರು.

‘ಕರ್ನಾಟಕದ ಕಾಂಗ್ರೆಸ್‌ ನಾಯಕರು ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ದೇಶದಲ್ಲಿ ದಿವಾಳಿಯಾಗಿರುವ ಕಾಂಗ್ರೆಸ್‌ ಹಡಗು ರಾಜ್ಯದಲ್ಲಿಯೂ ಮುಳುಗಲಿದೆ. ನಾಡು, ದೇಶವನ್ನು ಮುನ್ನೆಡೆಸುವ ಸಾಮರ್ಥ್ಯ, ಹಕ್ಕು ಕಾಂಗ್ರೆಸ್‌ಗೆ ಇಲ್ಲ’ ಎಂದು ಕುಟುಕಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸಾರಿಗೆ ಸಚಿವ ಬಿ.ಶ್ರೀರಾಮುಲು, ಕೃಷಿ ಸಚಿವ ಬಿ.ಸಿ.ಪಾಟೀಲ, ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT