ಮಂಗಳವಾರ, ಸೆಪ್ಟೆಂಬರ್ 21, 2021
29 °C
ಹಿಂದಿನ ವರ್ಷದ ಅನುದಾನ ಬಳಸಿದ ಕೆಲ ಇಲಾಖೆಗಳು

ಕೈಕೊಟ್ಟ ಕೇಂದ್ರ: ಯೋಜನೆ ಸ್ಥಗಿತ, 10 ಕಾರ್ಯಕ್ರಮಗಳಿಗೆ ಬಿಡಿಗಾಸೂ ಇಲ್ಲ

ವಿ.ಎಸ್‌. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ವಚ್ಛ ಭಾರತ, ಪ್ರಧಾನ ಮಂತ್ರಿ ಆವಾಸ್‌, ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಸೇರಿದಂತೆ ಹತ್ತು ಪ್ರಮುಖ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ಪ್ರಸಕ್ತ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಬಿಡಿಗಾಸು ಕೂಡ ನೀಡಿಲ್ಲ. ರಾಜ್ಯ ಸರ್ಕಾರ ಕೂಡ ಹೊಂದಾಣಿಕೆ ಅನುದಾನ ಬಿಡುಗಡೆ ಮಾಡದೇ ಇರುವುದರಿಂದ ಬಹುತೇಕ ಯೋಜನೆಗಳ ಅನುಷ್ಠಾನ ಕುಂಠಿತಗೊಂಡಿದೆ.

ಗ್ರಾಮೀಣಾಭಿವೃದ್ಧಿ, ವಸತಿ, ಕೃಷಿ, ತೋಟಗಾರಿಕೆ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿ
ಯಲ್ಲಿರುವ ಕೇಂದ್ರ ಮತ್ತು ರಾಜ್ಯದ ಪಾಲುದಾರಿಕೆಯ ಹತ್ತು ಯೋಜನೆಗಳಿಗೆ ಜುಲೈ ಅಂತ್ಯದವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ.

ಗ್ರಾಮ ಸಡಕ್‌, ಸ್ವಚ್ಛ ಭಾರತ, ಪ್ರಧಾನ ಮಂತ್ರಿ ಆವಾಜ್‌, ಕೃಷಿ ಯಾಂತ್ರಿಕತೆಯ ಮೇಲಿನ ಉಪ ಅಭಿಯಾನ, ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆ, ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ನೀಡುವ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ, ಸಂವಿಧಾನದ 275(1)ನೇ ವಿಧಿಯಡಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆ ಮತ್ತು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ಯೋಜನೆಗಳಿಗೆ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಅನುದಾನವೇ ಬಿಡುಗಡೆಯಾಗಿಲ್ಲ.

ಈ ಮಾಹಿತಿಯನ್ನು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಶೀಲನಾ ಸಭೆಯಲ್ಲಿ ಮಂಡಿಸಿದ ಅಂಕಿಅಂಶಗಳೇ ಬಹಿರಂಗಪಡಿಸಿವೆ.

ಏಳು ಯೋಜನೆ–ಶೂನ್ಯ ಸಾಧನೆ: ಹತ್ತು ಯೋಜನೆಗಳ ಪೈಕಿ ಏಳು ಯೋಜನೆಗಳು ಮುಂದಡಿಯನ್ನೇ ಇಟ್ಟಿಲ್ಲ. ಆದರೆ, ಪಂಚಾಯತ್ ರಾಜ್‌ ಇಲಾಖೆ ಮತ್ತು ವಸತಿ ಇಲಾಖೆಗಳು ಹಿಂದಿನ ವರ್ಷದ ಅನುದಾನವನ್ನೇ ಸಮರ್ಪಕವಾಗಿ ಬಳಸಿಕೊಂಡು ಕಾಮಗಾರಿ ಆರಂಭಿಸಿವೆ.

ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಹಿಂದಿನ ವರ್ಷದ ಅನುದಾನದಲ್ಲಿ ₹334.64 ಕೋಟಿಯನ್ನು ಬಳಕೆ ಮಾಡಲು ಕ್ರಿಯಾಯೋಜನೆ ರೂಪಿಸಿದ್ದಾರೆ.

ಗ್ರಾಮ ಸಡಕ್‌ ಯೋಜನೆಗೆ ಕೇಂದ್ರ ಸರ್ಕಾರ ₹ 900 ಕೋಟಿ ಮತ್ತು ರಾಜ್ಯ ಸರ್ಕಾರ ₹ 600 ಕೋಟಿ ಒದಗಿಸಬೇಕು. ಎರಡೂ ಸರ್ಕಾರಗಳು ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಆದರೆ, ಹಿಂದಿನ ಆರ್ಥಿಕ ವರ್ಷದಲ್ಲಿ ಉಳಿದಿದ್ದ ₹ 271.36 ಕೋಟಿಯಲ್ಲಿ ₹ 251.39 ಕೋಟಿ ಬಳಕೆ ಮಾಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಕೆಲವು ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ.

ಸ್ವಚ್ಛ ಭಾರತ ಯೋಜನೆಗೆ ಕೇಂದ್ರ ಸರ್ಕಾರ ₹ 249.60 ಕೋಟಿ ಮತ್ತು ರಾಜ್ಯ ಸರ್ಕಾರ ₹ 166.40 ಕೋಟಿ ಒದಗಿಸಬೇಕಿದೆ. ಈ ಯೋಜನೆಯಡಿ ₹ 680.23 ಕೋಟಿ ಪ್ರಾರಂಭಿಕ ಶಿಲ್ಕು ಇತ್ತು. ಅದರಲ್ಲೇ ₹ 83.25 ಕೋಟಿ ಬಳಕೆ ಮಾಡಿರುವ ಗ್ರಾಮೀಣಾಭಿವೃದ್ಧಿ ಇಲಾಖೆ, ಯೋಜನೆಯ ಅನುಷ್ಠಾನವನ್ನು ಜೀವಂತವಾಗಿರಿಸಿದೆ.

ಪ್ರಧಾನ ಮಂತ್ರಿ ಆವಾಸ್‌ ಯೋಜನೆಗೆ ಕೇಂದ್ರ ₹ 300 ಕೋಟಿ ಮತ್ತು ರಾಜ್ಯ ₹ 200 ಕೋಟಿ ವೆಚ್ಚ ಮಾಡಬೇಕಿದೆ. ಈ ಯೋಜನೆಯಡಿ ಕಳೆದ ವರ್ಷ ಒದಗಿಸಿದ್ದ ಅನುದಾನದಲ್ಲಿ ₹ 404.77 ಕೋಟಿ ಉಳಿಕೆಯಾಗಿತ್ತು. ಅದರಲ್ಲಿ ₹ 26.81 ಕೋಟಿ ಮಾತ್ರ ಬಳಕೆ ಮಾಡಲಾಗಿದೆ.

ಆರ್ಥಿಕ ಇಲಾಖೆಯಿಂದ ನಿರ್ಬಂಧ: ‘ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ ವಿಳಂಬವಾದರೂ ರಾಜ್ಯದ ಪಾಲಿನ ಅನುದಾನ ಬಿಡುಗಡೆ ಮಾಡುವ ಮೂಲಕ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿತ್ತು. ಕೋವಿಡ್‌, ಜಿಎಸ್‌ಟಿ ಪಾಲು ಹಂಚಿಕೆ ಮತ್ತು ಪರಿಹಾರದ ಮೊತ್ತದಲ್ಲಿ ಕಡಿತವಾಗಿರುವುದರಿಂದ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಮುಂಗಡವಾಗಿ ಹೊಂದಾಣಿಕೆ ಅನುದಾನ ಬಿಡುಗಡೆ ಮಾಡದಂತೆ ಆರ್ಥಿಕ ಇಲಾಖೆ ನಿರ್ಬಂಧ ವಿಧಿಸಿದೆ’ ಎಂದು ಮೂಲಗಳು ತಿಳಿಸಿವೆ.

*
ಕೆಲವು ಇಲಾಖೆಗಳಲ್ಲಿ ಕಳೆದ ವರ್ಷದ ಅನುದಾನದ ಪೂರ್ಣ ಬಳಕೆ ಇನ್ನೂ ಆಗದೇ ಇರುವುದರಿಂದ ಹೊಸ ಅನುದಾನ ಬಿಡುಗಡೆ ವಿಳಂಬವಾಗಿದೆ. ತ್ರೈಮಾಸಿಕವಾಗಿ ಬಳಕೆಯ ಪ್ರಮಾಣದ ಆಧಾರದಲ್ಲಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು.
–ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು