ಮಂಗಳವಾರ, ಜೂನ್ 22, 2021
28 °C
ತನ್ನ ಕೆಲಸ ಮಾಡದೇ ಲಾಕ್‌ಡೌನ್‌ ಹೇರಿದ್ದಕ್ಕೆ ಆಕ್ಷೇಪ

ಕೋವಿಡ್‌-19: ಹೊಣೆ ಅರಿತು ಹೆಜ್ಜೆ ಇಡದ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಎರಡನೇ ಅಲೆಯ ಮಹಾಸ್ಫೋಟ ತಡೆಯಲು ಹೆಣಗಾಡುತ್ತಿರುವ ಸರ್ಕಾರ, 14 ದಿನಗಳ ಲಾಕ್‌ಡೌನ್‌ ಜಾರಿಗೆ ತಂದಿದೆ. ಕೊರೊನಾ ಸೋಂಕು ಹರಡುವಿಕೆ ತಡೆಯಲು ಜನರು ಏನು ಮಾಡಬೇಕು? ಏನು ಮಾಡಬಾರದು? ಎಂದು ಈಗ ಹೇಳುತ್ತಿರುವ ಸರ್ಕಾರ, ಸಕಾಲದಲ್ಲಿ ಮಾಡಬೇಕಿದ್ದ, ಈಗಲೂ ತುರ್ತು ಮಾಡಬೇಕಾದ್ದನ್ನು ಹೊಣೆ ಅರಿತು ಮಾಡಲಿಲ್ಲವೇ ಎಂಬ ಪ್ರಶ್ನೆ ಚರ್ಚೆಗೆ ಗುರಿಯಾಗಿದೆ.

ಕೋವಿಡ್ ತಡೆ ನಿಟ್ಟಿನಲ್ಲಿ ತೆಗೆದುಕೊಂಡ ತೀರ್ಮಾನ, ಮಾರ್ಗಸೂಚಿ ವಿಚಾರದಲ್ಲಿ ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ ಎಂಬ ಆಕ್ಷೇಪವೂ ಇದೆ. ಸರ್ಕಾರ ಹೇಗೆ ನಡೆದುಕೊಳ್ಳಬೇಕಿತ್ತು ಮತ್ತು ಮುಂದೆ ಏನು ಮಾಡಬೇಕು ಎಂಬ ಬಗ್ಗೆ  ಜನಪ್ರತಿನಿಧಿಗಳು, ಸಾಮಾಜಿಕ ಹೋರಾಟಗಾರರು, ತಜ್ಞರ ಅಭಿಪ್ರಾಯ ಇಲ್ಲಿದೆ.

ಸರ್ಕಾರ ಎದ್ದು ನಿಲ್ಲುವುದು ಯಾವಾಗ?
ರಾಜ್ಯಕ್ಕೆ ಕೊರೊನಾ ಕಾಲಿಟ್ಟು ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಈಗಲೂ ಖಾಸಗಿ ಆಸ್ಪತ್ರೆಗಳ ಮುಂದೆ ಹಾಸಿಗೆಗಾಗಿ ಭಿಕ್ಷೆ ಬೇಡುವ ಸ್ಥಿತಿ ಇದೆ ಎನ್ನುವುದಾದರೆ ಸರ್ಕಾರ ಎದ್ದು ನಿಲ್ಲುವುದು ಯಾವಾಗ? ಕರ್ನಾಟಕ ಖಾಸಗಿ ಆಸ್ಪತ್ರೆಗಳ ಕಾಯ್ದೆಯಡಿ ಇನ್ನೂ ಸರಿಯಾಗಿ ಕ್ರಮ ಜರುಗಿಸದೇ ಇರುವುದನ್ನು ನೋಡಿದರೆ ಸರ್ಕಾರಕ್ಕೆ ಅಷ್ಟೂ ಶಕ್ತಿ ಇಲ್ಲವೇ ಎಂಬ ಅನುಮಾನ ಮೂಡುತ್ತದೆ. ಜನರ ಪ್ರಾಣಕ್ಕಿಂತಲೂ ಖಾಸಗಿ ಆಸ್ಪತ್ರೆಗಳೇ ಮುಖ್ಯವೆ?

ಕೋವಿಡ್‌ ನಿಯಂತ್ರಣ ಮತ್ತು ಚಿಕಿತ್ಸೆ ವಿಚಾರದಲ್ಲಿ ನೆರೆಯ ಆಂಧ್ರಪ್ರದೇಶದ ಸರ್ಕಾರ ತೆಗೆದುಕೊಳ್ಳುವ ಕ್ರಮಗಳನ್ನು ಇಲ್ಲಿ ಏಕೆ ಮಾಡಲು ಆಗುವುದಿಲ್ಲ? ದೊಡ್ಡ ಹೋಟೆಲ್‌ಗಳು, ಸಭಾಂಗಣಗಳನ್ನೇ ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಪರಿವರ್ತಿಸಬೇಕಿತ್ತು. ವೈದ್ಯಕೀಯ, ನರ್ಸಿಂಗ್‌ ವಿದ್ಯಾರ್ಥಿಗಳನ್ನೂ ಸೇವೆಗೆ ನಿಯೋಜಿಸಬೇಕಿತ್ತು. ಮೊನ್ನೆಯವರೆಗೂ ಚುನಾವಣೆಗಳ ವಿರುದ್ಧ ಯಾವ ರಾಜಕೀಯ ಪಕ್ಷವೂ ಮಾತನಾಡಲಿಲ್ಲ. ಬಡವರು, ಮಧ್ಯಮ ವರ್ಗದ ಜನರು ಆಸ್ಪತ್ರೆಯ ಹಾಸಿಗೆ, ಔಷಧಿ, ಆಮ್ಲಜನಕಕ್ಕಾಗಿ ಪರದಾಡುತ್ತಿದ್ದಾರೆ. ಈಗಲೂ ಕೋವಿಡ್‌ ಚಿಕಿತ್ಸೆಗೆ ನೀತಿಯೇ ಇಲ್ಲ. ಹಿಟ್ಲರ್‌ ಶೈಲಿಯಲ್ಲೇ ಎಲ್ಲವೂ ನಡೆಯುತ್ತಿದೆ. ಇದು ಕ್ಷಮಾರ್ಹ ನಡವಳಿಕೆ ಅಲ್ಲ. ಇನ್ನಾದರೂ ಎಚ್ಚೆತ್ತು ಸರಿಯಾದ ದಾರಿಯಲ್ಲಿ ಹೆಜ್ಜೆ ಇಡಬೇಕು.
-ಕೆ.ಆರ್‌. ರಮೇಶ್‌ ಕುಮಾರ್‌, ಮಾಜಿ ಆರೋಗ್ಯ ಸಚಿವ ಹಾಗೂ ಶಾಸಕ

***

ಬಿಲ್‌ ವ್ಯವಹಾರದಲ್ಲಿ ನಿರತರಾಗಿದ್ದರು!
ಮೊದಲ ಅಲೆಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ಎದುರಿಸಿತು. ಮತ್ತೊಂದು ಅಲೆ ಜೋರಾಗಿ ಬೀಸಲಿದೆ ಎಂದು ಪರಿಣತರು ಎಚ್ಚರಿಕೆ ನೀಡಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸದೇ ನಿದ್ರೆ ಮಾಡಿತು. ಆಮ್ಲಜನಕದ ವ್ಯವಸ್ಥೆ ಮಾಡಿಕೊಳ್ಳುವಂತೆ ಪ್ರಧಾನಿ ಪತ್ರ ಬರೆದಿದ್ದರೂ ಅಲಕ್ಷಿಸಿತು. ಪರಿಣತರು ನೀಡಿದ ಸಲಹೆಗಳನ್ನು ಮಂತ್ರಿಗಳು, ಐಎಎಸ್‌ ಅಧಿಕಾರಿಗಳು ಕಡೆಗಣಿಸಿದರು. ಬರೀ ಬಿಲ್‌ ವ್ಯವಹಾರದಲ್ಲಿ ನಿರತರಾಗಿದ್ದರು.

ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳನ್ನು ಒಳಗೊಂಡು ಕೆಲಸ ಮಾಡುವ ಅವಶ್ಯವಿದೆ. ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಏನಿದೆ ಎಂಬುದನ್ನು ಪ್ರತಿ ತಾಲ್ಲೂಕಿನ ತಹಶೀಲ್ದಾರ್‌ ನಿತ್ಯ ಸಂಜೆ 5 ಗಂಟೆಗೆ ಬುಲೆಟಿನ್‌ ಹೊರಡಿಸಬೇಕು. ಇದರಿಂದ ಸಾರ್ವಜನಿಕರಿಗೆ ಮಾಹಿತಿ ಸಿಗುತ್ತದೆ. ವಾರ್ತಾ ಇಲಾಖೆ ಏನು ಕೆಲಸ ಮಾಡುತ್ತಿದೆಯೋ ಗೊತ್ತಿಲ್ಲ. ನರ್ಸಿಂಗ್‌, ಪ್ಯಾರಾ ಮೆಡಿಕಲ್‌ ಓದಿ ಮನೆಯಲ್ಲಿರುವ ವಿದ್ಯಾರ್ಥಿಗಳನ್ನು ಕೋವಿಡ್‌ ನಿರ್ವಹಣೆ ಕೆಲಸಕ್ಕೆ ಬಳಸಿಕೊಳ್ಳಬೇಕು. ವೈದ್ಯಕೀಯ ಕಾಲೇಜು ಹೊಂದಿರುವ ಮಠಗಳ ಸ್ವಾಮೀಜಿಗಳು ಸಾರ್ವಜನಿಕರ ನೆರವಿಗೆ ಧಾವಿಸಬೇಕು.
-ಎಚ್‌.ವಿಶ್ವನಾಥ್‌, ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ

***

ನಿರ್ವಹಣೆಯಲ್ಲಿ ಎಡವಿದ್ದರಿಂದ ಪರದಾಟ
ಮೊದಲ ಬಾರಿ ಕೋವಿಡ್‌ ಬಂದಾಗಲೇ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಬೇಕಿತ್ತು. ಸಾಕಷ್ಟು ಸಮಯಾವಕಾಶವೂ ಇತ್ತು. ಐಸಿಯು, ವೆಂಟಿಲೇಟರ್‌, ಆಮ್ಲಜನಕ, ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಆದರೆ, ಕೋವಿಡ್‌ ಮೊದಲ ಅಲೆಯಿಂದ ಸರ್ಕಾರ ಪಾಠ ಕಲಿತಿಲ್ಲ. ನಿರ್ವಹಣೆಯಲ್ಲೂ ಎಡವಿದ್ದು, ಈಗ ಪರದಾಡುತ್ತಿದೆ.

ಎರಡನೇ ಅಲೆ ಹರಡುವ ವಿಚಾರ ಗೊತ್ತಾದ ಕೂಡಲೇ ಎಚ್ಚೆತ್ತುಕೊಳ್ಳಬೇಕಿತ್ತು. ಸಂಪರ್ಕಿತರನ್ನು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸಬೇಕಿತ್ತು. ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿತು. ಈಗ ಲಾಕ್‌ಡೌನ್‌ ಮಾಡಿರುವ ವಿಚಾರ ಸರಿಯಾಗಿದೆ. ಲಸಿಕಾ ಅಭಿಯಾನವನ್ನು ಮತ್ತಷ್ಟು  ತ್ವರಿತಗೊಳಿಸಬೇಕು. ದೆಹಲಿ, ಮಹಾರಾಷ್ಟ್ರ ಸ್ಥಿತಿಯನ್ನು ತಲುಪುವ ಮುನ್ನವೇ ಕಾರ್ಯೋನ್ಮುಖವಾಗಬೇಕು.
-ಡಾ.ಎಚ್‌.ಸುದರ್ಶನ್‌, ಆರೋಗ್ಯ ತಜ್ಞ, ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ  ಗೌರವ ಕಾರ್ಯದರ್ಶಿ

***

ರಾಜಕೀಯ ಲಾಭದ ನಿರ್ಧಾರಕ್ಕೆ ಸೀಮಿತ
ಕೋವಿಡ್‌ ಮೊದಲ ಅಲೆಯಲ್ಲಾದ ಸಮಸ್ಯೆ ಗೊತ್ತಿದ್ದರೂ ರಾಜ್ಯ ಸರ್ಕಾರ ಪೂರ್ವಸಿದ್ಧತೆ ಮಾಡಿಕೊಳ್ಳಲಿಲ್ಲ. ಪರಿಣತರು ಬಾಯಿ ಬಡಿದುಕೊಂಡರೂ ಅವರ ಮಾತು ಕೇಳಲಿಲ್ಲ. ರಾಜಕೀಯ ಲಾಭಗಳಿಗಾಗಿ ತಮ್ಮದೇ ನಿರ್ಧಾರ ಕೈಗೊಂಡರು. ಕಳೆದ ವರ್ಷ ವೈದ್ಯರು, ನರ್ಸ್‌ಗಳು ಹಗಲು ರಾತ್ರಿ ಏಳೆಂಟು ತಿಂಗಳು ಕೆಲಸ ಮಾಡಿದರು. ಆದರೆ, ಅವರ ಕೆಲಸವನ್ನು ಗೌರವಿಸುವ, ಪ್ರೋತ್ಸಾಹಿಸುವ ಕೆಲಸವನ್ನು ಮಾಡಲಿಲ್ಲ. ಸರಿಯಾಗಿ ವೇತನ ನೀಡಲೂ ಸತಾಯಿಸಿದರು.

ನನ್ನ ಪ್ರಕಾರ ಒಂದು ತಿಂಗಳ ಹಿಂದೆಯೇ ಲಾಕ್‌ಡೌನ್‌ ಮಾಡಬೇಕಿತ್ತು. ಆದರೆ, ಈಗ ಹಾಸಿಗೆ ಹೆಚ್ಚಿಸುವ, ಆಮ್ಲಜನಕದ ವ್ಯವಸ್ಥೆ ಮಾಡುವ ಹೇಳಿಕೆಗಳನ್ನು ನೀಡುತ್ತಾ ಸಾರ್ವಜನಿಕರನ್ನು ವಂಚಿಸಲಾಗುತ್ತಿದೆ. ಈಗಲೂ ರಾಜಕೀಯ ಆಶ್ವಾಸನೆ ನೀಡಲಾಗುತ್ತಿದೆ. ನರ್ಸ್‌, ವೈದ್ಯರ ಕೊರತೆ ವಿಪರೀತವಾಗಿ ಕಾಡುತ್ತಿದೆ. ಹೀಗಿದ್ದ ಮೇಲೆ ಹಾಸಿಗೆ ಇಟ್ಟುಕೊಂಡು ಏನು ಮಾಡುವುದು? ಕೋವಿಡ್‌ ಮೂರನೇ ಅಲೆ ಬರುವ ಮುನ್ನವಾದರೂ ಎಚ್ಚೆತ್ತುಕೊಂಡು ವ್ಯವಸ್ಥೆ ಮಾಡಿಕೊಳ್ಳಲಿ.
-ಡಾ.ಆರ್‌.ಬಾಲಸುಬ್ರಹ್ಮಣ್ಯಂ,ವಿ–ಲೀಡ್‌ ಸಂಸ್ಥಾಪಕ

***

ರಾಜಕೀಯ, ಧಾರ್ಮಿಕ ಮುಖಂಡರ ‘ಮದ್ದಿನ’ ಅಪರಾಧ
ರಾಜಕೀಯ ನಾಯಕರು ಚುನಾವಣಾ ರ್‍ಯಾಲಿಗಳಲ್ಲಿ ಪಾಲ್ಗೊಂಡು ಜನರಿಗೆ ಮಿಶ್ರ ಸಂದೇಶ ನೀಡಿದರು. ಧಾರ್ಮಿಕ ಮುಖಂಡರು ರಥೋತ್ಸವ, ಜಾತ್ರೆಗಳಲ್ಲಿ ಪಾಲ್ಗೊಂಡರು.

ಸಾರ್ವಜನಿಕರು ಕೂಡ ಎಚ್ಚರದಿಂದ ಇರಬೇಕಿತ್ತು. ಪ್ರತಿ ದೇಶವೂ ಎರಡನೆಯ ಅಲೆ ಎದುರಿಸಿದ್ದನ್ನು ಕಂಡು ನಾವು ಪಾಠ ಕಲಿಯಬಹುದಿತ್ತು.

ರಾಜಕೀಯ, ಧಾರ್ಮಿಕ ಮುಖಂಡರು ಮನೆಮದ್ದಿನಿಂದ, ಹನುಮಾನ್ ಚಾಳೀಸ ಪಠಿಸುವುದರಿಂದ, ಮಸಾಲೆಯುಕ್ತ ರಸಂ ಸೇವಿಸುವುದರಿಂದ ಕೊರೊನಾ ಗುಣಪಡಿಸಬಹುದು ಎಂದೆಲ್ಲ ಹೇಳಿದ್ದು ಅಪರಾಧ.

ಮಾಸ್ಕ್ ಧರಿಸಿಕೊಂಡು, ಅಂತರ ಕಾಯ್ದುಕೊಂಡು ನಾವು ಲಸಿಕೆ ಹಾಕಿಸುವುದನ್ನು ಚುರುಕುಗೊಳಿಸಬೇಕು. ದಿನಗೂಲಿ ನೌಕರರು, ವರ್ತಕರು, ವಾಣಿಜ್ಯೋದ್ಯಮಿಗಳ ಬಗ್ಗೆ ಕಳವಳಗೊಂಡಿದ್ದೇನೆ. ಅವರು ಹಸಿವಿನತ್ತ ಮುಖ ಮಾಡಿದ್ದಾರೆ. ಅವರಿಗೆ ಹಣಕಾಸಿನ ನೆರವು ನೀಡಲು ಸರ್ಕಾರಕ್ಕೆ ಸಾಧ್ಯವಿಲ್ಲದಿದ್ದರೆ ಲಾಕ್‌ಡೌನ್‌ ನಿಯಮಗಳಲ್ಲಿ ಬದಲಾವಣೆ ತಂದು, ಅವರ ಸಮಸ್ಯೆಗಳಿಗೆ ಸ್ಪಂದಿಸಬಹುದೇ ಎಂದು ಆಲೋಚಿಸಲಿ.
– ಕ್ಯಾಪ್ಟನ್ ಜಿ.ಆರ್. ಗೋಪಿನಾಥ್, ಉದ್ಯಮಿ

***

ಸರ್ಕಾರಗಳ ಕ್ರೌರ್ಯದ ಪರಮಾವಧಿ
ಎರಡನೇ ಅಲೆ ಎದುರಿಸಲು ಸರ್ಕಾರಕ್ಕೆ ಒಂದು ವರ್ಷ ಸಮಯ ಇತ್ತು. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು  ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಲಸಿಕೆಯನ್ನು ಎಲ್ಲರಿಗೂ ತಲುಪಿಸಲಿಲ್ಲ. ಚುನಾವಣೆ ಮತ್ತು ಕುಂಭಮೇಳಗಳನ್ನು ನಡೆಸಿ ಸೋಂಕು ವ್ಯಾಪಿಸಲು ಮತ್ತಷ್ಟು ಕೊಡುಗೆ ನೀಡಿದರು. ಕೊರೊನಾ ಸಂಕಷ್ಟದ ಮಧ್ಯೆಯೂ ಕೇಂದ್ರ ಸರ್ಕಾರದವರು ರಾಮಮಂದಿರಕ್ಕೆ ಜನರಿಂದ ದೇಣಿಗೆ ಸಂಗ್ರಹಿಸಿದರು. ಅದರ ಬದಲು ಕೊರೊನಾ ನಿಗ್ರಹಕ್ಕೆ ಹಣ ಕೊಡಿ ಎಂದರೆ ಜನ ಇದಕ್ಕಿಂತ ಹೆಚ್ಚಿನ ಹಣ ಕೊಡುತ್ತಿದ್ದರು. ಅದರಿಂದಲಾದರೂ ವೈದ್ಯಕೀಯ ಸೌಲಭ್ಯ ಕಲ್ಪಿಸಬಹುದಾಗಿತ್ತು. ಹಾಸಿಗೆ–ವೆಂಟೆಲೇಟರ್‌, ಆಮ್ಲಜನಕದ ಸೌಲಭ್ಯವನ್ನೂ ಕಲ್ಪಿಸದೆ ಜನರು ಕೋವಿಡ್‌ನಿಂದ ಸಾಯುವಂತೆ ಮಾಡಿದ ಕ್ರೂರಿ, ಕೊಲೆಗಡುಕ ಸರ್ಕಾರಗಳಿವು.
-ಕೆ.ನೀಲಾ, ಹೋರಾಟಗಾರ್ತಿ, ಕಲಬುರ್ಗಿ

***

ನಿರ್ಲಕ್ಷ್ಯದ ಪರಿಣಾಮ
ತಜ್ಞರು ನೀಡಿದ ಎಚ್ಚರಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಆಸ್ಪತ್ರೆಗಳಿಗೆ ಮೂಲಸೌಕರ್ಯ ಒದಗಿಸಿ ಸಜ್ಜುಗೊಳಿಸಬೇಕಿತ್ತು. ಬದಲಿಗೆ ನಿರ್ಲಕ್ಷ್ಯ ತೋರಿದ್ದರಿಂದ ಸಮುದಾಯದ ಮಟ್ಟಕ್ಕೆ ಸೋಂಕು ಹರಡಿತು. ಇದೀಗ ತಡವಾಗಿಯಾದರೂ ಸರ್ಕಾರ ಲಾಕ್‌ಡೌನ್ ಘೋಷಿಸಿದೆ. ಸಂಕಷ್ಟಕ್ಕೆ ಸಿಲುಕುವ ಬಡವರಿಗೆ ಹೆಚ್ಚುವರಿಯಾಗಿ ಆಹಾರ–ಧಾನ್ಯ ವಿತರಿಸಲು ಮುಂದಾಗಬೇಕು. ತಾಲ್ಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸಬೇಕು. ಖಾಸಗಿಯವರು ಚಿಕಿತ್ಸೆ ಹೆಸರಿನಲ್ಲಿ ರೋಗಿಗಳನ್ನು ಸುಲಿಗೆ ಮಾಡದಂತೆ ಕಠಿಣ ಕ್ರಮ ಕೈಗೊಳ್ಳಬೇಕು.
-ಡಾ. ಇಸಬೆಲಾ ಝೇವಿಯರ್, ಮಾನವ ಹಕ್ಕುಗಳ ಹೋರಾಟಗಾರ್ತಿ,ಧಾರವಾಡ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು