ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌ನಲ್ಲಿ ಮತ್ತೆ ಚಿನ್ನ ಖಾಲಿ ಕನಸೇ ಅಣ್ಣ!

ಗಣಿ ಅಗೆದು ಇಲಿ ಹಿಡಿಯಲು ಹೊರಟಿವೆಯೇ ಸರ್ಕಾರದ ಯೋಜನೆಗಳು?
Last Updated 3 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಕೋಲಾರದ ಚಿನ್ನದ ಗಣಿ ಕಾರ್ಯಾಚರಣೆ ನಿಲ್ಲಿಸಿ ಇದೀಗ ಎರಡು ದಶಕಗಳೇ ಆಗಿವೆ. ಈ ಅವಧಿಯಲ್ಲಿ, ಬೀದಿಗೆ ಬಿದ್ದ ಸಾವಿರಾರು ಕಾರ್ಮಿಕರಲ್ಲಿ, ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಇದೀಗ ಗಣಿಗಾರಿಕೆ ಪುನರಾರಂಭಿಸುವ ಕನಸನ್ನು ಸರ್ಕಾರ ತೇಲಿಬಿಟ್ಟಿದೆ. ಕೆಜಿಎಫ್‌ನಲ್ಲಿ ಇನ್ನೂ ಚಿನ್ನವಿದೆಯೇ? ಗಣಿ ಕಾರ್ಮಿಕರ ಭವಿಷ್ಯವೇನು? ಕೋಲಾರದ ಮುಂದಿರುವ ಹಾದಿ ಯಾವುದು? ಚಿನ್ನದ ಮಣ್ಣಿನ ಬೀದಿಯಲ್ಲಿ ಹೀಗೊಂದು ಸುತ್ತಾಟ...

***

ಕೆಜಿಎಫ್ ಚಿನ್ನದ ಗಣಿಗಳ ಪ್ರದೇಶಗಳಲ್ಲಿ ಬಿದ್ದಿರುವ ಗಣಿ ತ್ಯಾಜ್ಯದಲ್ಲಿರುವ ಚಿನ್ನ, ಟಂಗ್‌ಸ್ಟನ್‌ ಮತ್ತು ಪಲ್ಲಾಡಿಯಂ ಖನಿಜಗಳ ಅಂಶವನ್ನು ಗುರುತಿಸುವುದರ ಕುರಿತು ಈಗ ಚರ್ಚೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಖನಿಜ ಶೋಧನಾ ನಿಗಮ (ಎಂಇಸಿಎಲ್‌) ಐದು ದಿನಗಳ ಹಿಂದೆಯಷ್ಟೇ ಪರಿಶೋಧನಾ ಕಾರ್ಯವನ್ನು ಆರಂಭಿಸಿದೆ. ಭಾರತ್‌ ಗೋಲ್ಡ್‌ ಮೈನ್‌ ಲಿಮಿಟೆಡ್‌ (ಬಿಜಿಎಂಎಲ್) ನಿಯಂತ್ರಣದಲ್ಲಿರುವ 12,500 ಎಕರೆ ಭೂಮಿಯಲ್ಲಿ ಬಳಸದೆ ಉಳಿದುಕೊಂಡಿರುವ 3,200 ಎಕರೆಗಳ ನೆಲವನ್ನು ವಶಪಡಿಸಿಕೊಂಡು ಕೈಗಾರಿಕಾ ವಲಯ ಸ್ಥಾಪನೆ ಮಾಡುವುದರ ಬಗೆಗೂ ಮಾತುಕತೆಗಳು ನಡೆಯುತ್ತಿವೆ. ಗಣಿಗಳಲ್ಲಿ ಕಾರ್ಮಿಕರಾಗಿ ದುಡಿದವರು ಗಣಿಗಳು ಮತ್ತೆ ಪುನಃಶ್ಚೇತನಗೊಳ್ಳುತ್ತವೆ ಎಂಬ ಆಸೆಯನ್ನು ಇನ್ನೂ ಜೀವಂತವಾಗಿ ಇಟ್ಟುಕೊಂಡೇ ಬದುಕುತ್ತಿದ್ದಾರೆ. 2001ರ ಫೆಬ್ರುವರಿ 28ರಂದು ಕೇಂದ್ರ ಸರ್ಕಾರ ಚಿನ್ನದ ಗಣಿಗಳನ್ನು ಹಠಾತ್ ಆಗಿ ನಿಲ್ಲಿಸಿಬಿಟ್ಟಿತು. ಆಗ ಕೆಲಸ ಮಾಡುತ್ತಿದ್ದ ಸುಮಾರು ನಾಲ್ಕು ಸಾವಿರ ಗಣಿ ಕಾರ್ಮಿಕರು ರಾತ್ರೋರಾತ್ರಿ ಬೀದಿಗೆ ಬಿದ್ದುಬಿಟ್ಟರು. ಗಣಿ ಮುಚ್ಚುವ ಸಂದರ್ಭದಲ್ಲಿ ಕಾರ್ಮಿಕರಿಗೆ ಗರಿಷ್ಠ ₹ 8 ಸಾವಿರ ಸಂಬಳ ಇತ್ತು. ಯಾವುದೇ ಪಿಂಚಣಿ ಇರಲಿಲ್ಲ. ಗ್ರ್ಯಾಚುಯಿಟಿ ಮತ್ತು ಭವಿಷ್ಯ ನಿಧಿ ಹೆಸರಿನಲ್ಲಿ ಸಿಗುತ್ತಿದ್ದ ಹಣವೂ ಅಷ್ಟಕ್ಕಷ್ಟೆ. ಸರ್ಕಾರ ಸ್ವಯಂನಿವೃತ್ತಿ ಘೋಷಣೆ ಮಾಡಿದರೂ ಹೆಚ್ಚು ಕಾರ್ಮಿಕರು ಪಡೆದುಕೊಳ್ಳದೆ ನ್ಯಾಯಾಲಯಕ್ಕೆ ಹೋಗಿ ಅದನ್ನು ಪಡೆದುಕೊಳ್ಳುವುದರೊಳಗೆ 15 ವರ್ಷಗಳೇ ಕಳೆದುಹೋಗಿದ್ದವು. ಅಷ್ಟರಲ್ಲಿ ಎಷ್ಟೋ ಕಾರ್ಮಿಕರು ಗಣಿ ಕಾಯಿಲೆ ಸಿಲಿಕೋಸಿಸ್ ಮತ್ತು ಇತರ ರೋಗಗಳಿಂದ ಸತ್ತೇ ಹೋಗಿದ್ದರು.

ಕೇಂದ್ರ ಸರ್ಕಾರ ಗಣಿಗಳನ್ನು ಮುಚ್ಚುವುದರ ಜೊತೆಗೆ ದೊಡ್ಡ ಎಡವಟ್ಟು ಮಾಡಿಬಿಟ್ಟಿತ್ತು. ಅದೆಂದರೆ ವಿದ್ಯುತ್ ಸಂಪರ್ಕವನ್ನು ದಿಢೀರನೆ ಅದೇ ದಿನ ಕಡಿತಗೊಳಿಸಿಬಿಟ್ಟಿತ್ತು. ಕಾರಣ 1902ರಿಂದ ನಿರಂತರವಾಗಿ ಆಳವಾದ ಗಣಿಗಳಿಂದ ನೀರನ್ನು ಶಕ್ತಿಯುತ ಪಂಪ್‍ಗಳಿಂದ ಮೇಲಕ್ಕೆ ತೆಗೆಯುವುದು ನಿಂತುಹೋಯಿತು. ಮೂರೂಕಾಲು ಕಿಲೊಮೀಟರ್‌ ಆಳ, ಎಂಟು ಕಿಲೊಮೀಟರ್‌ ಉದ್ದ ಮತ್ತು ಎರಡು ಕಿಲೊಮೀಟರ್‌ ಅಗಲದ ಪ್ರದೇಶದಲ್ಲಿ (ಮೇಲಿನ 100 ಅಡಿಗಳನ್ನು ಬಿಟ್ಟು) ಹರಡಿಕೊಂಡಿದ್ದ ಚಿನ್ನದ ಗಣಿ ಸುರಂಗಗಳಲ್ಲಿ ನೀರು ನಿಧಾನವಾಗಿ ತುಂಬಿಕೊಂಡು ನೆಲಮಟ್ಟಕ್ಕೆ ತಲುಪಿ ಕೆಲವು ಕಡೆ ಹೊರಕ್ಕೆ ಹರಿಯತೊಡಗಿತು. ಅಷ್ಟೂ ಉದ್ದ, ಅಗಲ ಹರಡಿಕೊಂಡಿದ್ದ ಸುರಂಗಗಳಿಗೆ ಅಂತರ್‌ಸಂಪರ್ಕ ಇದ್ದುದೇ ಇದಕ್ಕೆ ಕಾರಣವಾಗಿತ್ತು.

ಗಣಿಗಳಲ್ಲಿ ನೀರು ತುಂಬಿಕೊಳ್ಳುತ್ತಿದ್ದಂತೆ ಒಳಗೆ ಎಲ್ಲವೂ ಕುಸಿದು ಹೋಗಿ ಅದೊಂದು ಸೂಪರ್ ಪಿಟ್ ಆಗಿ ಮಾರ್ಪಟ್ಟಿತು! ಇದರಿಂದ ಈ ಗಣಿಗಳನ್ನು ಮತ್ತೆ ಪುನಃಶ್ಚೇತನಗೊಳಿಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿತು. ಬಳಿಕ ಓಪನ್ ಪಿಟ್ (ಕಬ್ಬಿಣ ಅದಿರು) ಗಣಿ ಮಾಡುವ ಮಾತುಗಳು ಕೇಳಿಬರಲು ಆರಂಭಿಸಿದವು. ಗಣಿಗಳ ಒಳಗೆ ಚಿನ್ನವೇ ಇಲ್ಲದಿರುವಾಗ ಹತ್ತಾರು ಕಿಲೊಮೀಟರ್‌ಗಳ ಸುತ್ತಳತೆ, ಮೂರು ಕಿಲೊಮೀಟರ್‌ಗಳ ಆಳದ ಗಣಿ ಮಾಡಲು ಸಾಧ್ಯವೇ? ಆಗ ಕೆಜಿಎಫ್ ನಗರದ ಗತಿ ಏನಾಗಬಹುದು? ಇದೊಂದು ರೀತಿಯಲ್ಲಿ ಬೆಟ್ಟ ಅಗೆದು ಇಲಿ ಇಡಿಯುವ ಕೆಲಸವಾಗುತ್ತದೆ.

ಒಂದು ವೇಳೆ ಗಣಿಗಳಿಂದ ನೀರನ್ನು ನಿರಂತರವಾಗಿ ತೆಗೆಯುತ್ತಿದ್ದರೆ ಗಣಿಗಳನ್ನು ಮತ್ತೆ ಪ್ರಾರಂಭಿಸಿ ಉಳಿದಿದ್ದ ಅಲ್ಪಸ್ವಲ್ಪ ಚಿನ್ನವನ್ನು ತೆಗೆಯಬಹುದಿತ್ತು. ಗಣಿಗಳನ್ನು ಮುಚ್ಚಿದಾಗ (2001) ಚಿನ್ನದ ಬೆಲೆ ಒಂದು ಗ್ರಾಂಗೆ
₹ 400 ಇತ್ತು. ಈಗ ಒಂದು ಗ್ರಾಂಗೆ ₹ 4,500 ಆಗಿದೆ. ಕೇಂದ್ರ ಸರ್ಕಾರ ಆಗ ಮಾಡಿದ ಎಡವಟ್ಟು ಎಷ್ಟು ದೊಡ್ಡದು ಎನ್ನುವುದನ್ನೂ ನೀವೇ ಊಹಿಸಿ. ಗಣಿಗಳ ಒಳಗಿದ್ದ ಎಲ್ಲಾ ಯಂತ್ರಗಳನ್ನು ತೆಗೆಯದೆ ಹಾಗೇ ಬಿಟ್ಟುಬಿಡಲಾಯಿತು. ಅವುಗಳೆಲ್ಲ ಈಗ ಏನಾಗಿರುತ್ತವೆ? ವಿದ್ಯುತ್ ಸಂಪರ್ಕ ಇದ್ದ ತಂತಿಗಳ ಕಥೆ ಏನಾಗಿರುತ್ತದೆ? ಎಲ್ಲವನ್ನೂ ತಿಳಿದುಕೊಂಡರೆ ಕರುಳು ಕಿತ್ತುಬರುತ್ತದೆ ಎಂದು ಕೆಲವು ಕಾರ್ಮಿಕರು ಇಂದಿಗೂ ಭಾವುಕರಾಗುತ್ತಾರೆ. ಇನ್ನು ಮೇಲಿದ್ದ ಎಲ್ಲಾ ರೀತಿಯ ಸಣ್ಣಪುಟ್ಟ ಯಂತ್ರಗಳಿಂದ ಹಿಡಿದು ದೊಡ್ಡದೊಡ್ಡ ಯಂತ್ರಗಳನ್ನು ಮಾರಿಕೊಳ್ಳಲಾಯಿತು. ಇಲ್ಲವೇ ಕಳ್ಳತನ ಮಾಡಲಾಯಿತು. ಈಗ ಉಳಿದುಕೊಂಡಿರುವುದು ತುಕ್ಕಿಡಿದಿರುವ ಅಸ್ಥಿಪಂಜರಗಳಂತಹ ಮಿಲ್ಲುಗಳು, ಗಣಿ ಶ್ಯಾಫ್ಟ್‌ಗಳು, ಗತವೈಭವ ನೆನಪಿಸುವ ಬ್ರಿಟಿಷರ ಬಂಗಲೆಗಳು, ಗುಲ್‌ಮೊಹರ್ ಮರಗಳು ಮತ್ತು ತ್ಯಾಜ್ಯಗುಡ್ಡಗಳು ಅಷ್ಟೆ.

***

ಗಣಿ ತ್ಯಾಜ್ಯದ ವಿಷಯಕ್ಕೆ ಬಂದಾಗ 121 ವರ್ಷಗಳಲ್ಲಿ ಸುರಂಗಗಳಿಂದ ಮೇಲಕ್ಕೆ ತಂದ ಅದಿರನ್ನು ಪುಡಿ ಮಾಡಿ ಎಸೆದ ಗಣಿ ತ್ಯಾಜ್ಯ (15 ತ್ಯಾಜ್ಯ ಗುಡ್ಡಗಳು) ಐದು ಕೋಟಿ ಟನ್‌ ಎಂಬ ಲೆಕ್ಕಾಚಾರವಿದೆ. ಈ ಗಣಿ ತ್ಯಾಜ್ಯ ಮಳೆ, ಗಾಳಿಗೆ ಹಾರಿಹೋದ ಮೇಲೆ ಈಗ ನಾಲ್ಕು ಕೋಟಿ ಟನ್‌ ಉಳಿದಿರಬಹುದು! ಎಲ್ಲಾ ಗಣಿಸುರಂಗಗಳನ್ನು ಒಟ್ಟಾಗಿ ರೈಲು ಬೋಗಿಗಳಂತೆ ಒಂದರ ಹಿಂದೆ ಒಂದು ಜೋಡಿಸಿದರೆ ಅದು ಸುಮಾರು 1,600 ಕಿಲೊಮೀಟರ್‌ಗಳಷ್ಟು ಉದ್ದವಾಗುತ್ತದೆ ಎನ್ನಲಾಗಿದೆ. ಪ್ರಸ್ತುತ ಈ ಗಣಿ ತ್ಯಾಜ್ಯದಲ್ಲಿ ಚಿನ್ನ, ಟಂಗ್‌ಸ್ಟನ್ ಮತ್ತು ಪಲ್ಲಾಡಿಯಂ ಅಂಶವನ್ನು ಕಂಡುಹಿಡಿಯುವಂತೆ ಎಂಇಸಿಎಲ್ ಸಂಸ್ಥೆಗೆ ಸರ್ಕಾರ ಸೂಚಿಸಿದೆ. ಈ ಗಣಿ ತ್ಯಾಜ್ಯದಲ್ಲಿ ಚಿನ್ನ, ಟಂಗ್‌ಸ್ಟನ್, ಪಲ್ಲಾಡಿಯಂ, ಬೆಳ್ಳಿ, ಸಲ್ಫೈಡ್ ಗುಂಪಿನ ಖನಿಜಗಳು ತೀರಾ ಕಡಿಮೆ ಅಂಶದಲ್ಲಿ ಇವೆ ಎನ್ನುವುದು ದೃಢಪಟ್ಟಿದೆ. ಅಂದರೆ, ಅವು ಯಾವುವೂ ಗಣಿ ಮಾಡುವ ಮಟ್ಟದಲ್ಲಿ ಇಲ್ಲ.

ಒಂದು ಟನ್‌ ಗಣಿ ತ್ಯಾಜ್ಯದಲ್ಲಿ 0.70 ಗ್ರಾಂನಿಂದ 1.00 ಗ್ರಾಂ ಚಿನ್ನ ಇರುವುದಾಗಿ ತಿಳಿದುಬಂದಿದೆ! ಅಂದರೆ ಒಂದು ಟನ್‌ ತ್ಯಾಜ್ಯದಲ್ಲಿ ಸರಾಸರಿ 0.5 ಗ್ರಾಂನಿಂದ 0.7 ಗ್ರಾಂ ಚಿನ್ನ ದೊರಕಬಹುದು. ಈ ಚಿನ್ನವನ್ನು ಕೆಲವು ವೈಜ್ಞಾನಿಕ ಪ್ರಕ್ರಿಯೆಗಳ ಮೂಲಕ ತೆಗೆಯಬಹುದಾಗಿದೆ. ಆದರೆ ಹಾಗೇನಾದರೂ ಮಾಡಿದರೆ ಸ್ವಲ್ಪ ಗಟ್ಟಿಯಾಗಿ ನೆಲೆಯೂರಿರುವ ಈ ತ್ಯಾಜ್ಯಗುಡ್ಡಗಳನ್ನು ಮತ್ತೆ ಕೆದರಿದಂತಾಗಿ ಕೆಜಿಎಫ್ ನಗರ ವಿಷದ ದೂಳಿನಿಂದ ಮುಳುಗಿಹೋಗುತ್ತದೆ. ಈಗಾಗಲೇ ಕೆಜಿಎಫ್ ನಗರವನ್ನು ‘ಗೋಸ್ಟ್ ಸಿಟಿ’ ಎಂದುಕರೆಯಲಾಗುತ್ತಿದೆ. ಗಣಿ ತ್ಯಾಜ್ಯದಲ್ಲಿರುವ ಚಿನ್ನವನ್ನು ಸಂಸ್ಕರಿಸುವುದು ಯಾವ ರೀತಿಯಲ್ಲೂ ಸರಿಯಾದ ನಿಲುವಲ್ಲ. ಕೆಲವು ಗುಡ್ಡಗಳಲ್ಲಿ 0.018 ರಿಂದ 0.35 ಗ್ರಾಂ ಟಂಗ್‌ಸ್ಟನ್ ಇರುವುದಾಗಿ ತಿಳಿದುಬಂದಿದೆ. ಕೆಲವು ವರ್ಷಗಳ ಕಾಲ ಸಂಸ್ಕರಣೆ ಮಾಡಿ ಟಂಗ್‌ಸ್ಟನ್ ತೆಗೆಯಲಾಯಿತು. ಆದರೆ, ಅದು ಲಾಭದಾಯಕವಲ್ಲ ಎಂದು ನಿಲ್ಲಿಸಲಾಯಿತು. ಈಗ ಅಲ್ಲಿ ಏನೇ ಮಾಡಿದರೂ ತ್ಯಾಜ್ಯ ಮಣ್ಣನ್ನು ಕೆದರಿದಂತಾಗಿ ಪರಿಸರ ವಿಷ ಮಾಲಿನ್ಯವಾಗುವುದು ಗ್ಯಾರಂಟಿ.

ಈ ಗಣಿ ತ್ಯಾಜ್ಯವನ್ನು ಬಳಸಿ ಇಟ್ಟಿಗೆಗಳನ್ನು ತಯಾರು ಮಾಡಿದರೆ ತುಂಬಾ ಒಳ್ಳೆಯ ಕೆಲಸವಾಗುತ್ತದೆ. ಈ ವಿಷದ ಗುಡ್ಡಗಳು ಖಾಲಿಯಾಗುವುದಲ್ಲದೆ ಜನರಿಗೆ ಒಂದಷ್ಟು ಕೆಲಸವೂ ದೊರಕಬಹುದು. ಇನ್ನು ಗಣಿ ಪ್ರದೇಶದಲ್ಲಿ ಬಿದ್ದಿರುವ ಕಪ್ಪು ಕಲ್ಲುಗಳನ್ನು ರಸ್ತೆಗಳ ನಿರ್ಮಾಣಕ್ಕೆ ಬಳಸಿಕೊಂಡರೆ ಗಣಿ ಪ್ರದೇಶ ಒಂದಷ್ಟು ಸ್ವಚ್ಛವಾಗುತ್ತದೆ. ಗಣಿಗಳ ಒಳಗಿರುವ ನೀರನ್ನು ಕೃಷಿ, ಮೀನುಗಾರಿಕೆ, ಇತ್ಯಾದಿ ಕೆಲಸಗಳಿಗೆ ಉಪಯೋಗಿಸಬಹುದು. ನೀರನ್ನು ತೆಗೆಯುವ ಪಂಪುಗಳನ್ನು ಅಳವಡಿಸಿ ಕಾಲುವೆ ಮತ್ತು ಟ್ಯಾಂಕ್‍ಗಳನ್ನು ಮಾಡಬೇಕು. ಇದರ ಕುರಿತು ಸಾಕಷ್ಟು ಸಲ ಮಾತುಕತೆಗಳು ನಡೆದರೂ ಏಕೋ ಈ ಯೋಜನೆಯ ಬಗ್ಗೆ ಯಾರಿಗೂ ಆಸಕ್ತಿ ಇರುವಂತೆ ತೋರುವುದಿಲ್ಲ. ದೂರದ ನದಿಗಳಿಂದ ನೀರನ್ನು ತರುವ ಯೋಜನೆಗಳ ಬಗ್ಗೆಯೇ ರಾಜಕಾರಣಿಗಳಿಗೆ ಆಸಕ್ತಿ. ಕೆಜಿಎಫ್ ಗಣಿಗಳಿಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. 1802ರಲ್ಲಿ ಮೈಸೂರು ಸರ್ಕಾರ ನೇಮಿಸಿದ ಲೆಫ್ಟಿನೆಂಟ್ ಜಾನ್ ವಾರೆನ್ ಇಲ್ಲಿಗೆ ಬಂದುದು ಆಧುನಿಕ ಇತಿಹಾಸದ ಆರಂಭವಾಗಿದೆ.

ಜಗತ್ತಿನ ಬಹಳಷ್ಟು ದೇಶಗಳಲ್ಲಿ ವಜ್ರ ಮತ್ತು ಬಂಗಾರದ ಗಣಿಗಳನ್ನು ಮುಚ್ಚಿದ ಮೇಲೆ ಅವುಗಳ ಇತಿಹಾಸವನ್ನು ಹಾಗೇ ಉಳಿಸಿಕೊಳ್ಳಲು ಅವುಗಳನ್ನು ಜಿಯೋ-ಪ್ರವಾಸೋದ್ಯಮ ತಾಣಗಳನ್ನಾಗಿ ಪರಿವರ್ತಿಸಲಾಗಿದೆ. ಸಾಕಷ್ಟು ಆದಾಯ ತರುವಂತಹ ದಾರಿಯೂ ಇದಾಗಿದೆ.

ಇನ್ನು 3,200 ಎಕರೆಯನ್ನು ಸ್ವಾಧೀನಪಡಿಸಿಕೊಂಡು ಆರ್ಥಿಕ ವಲಯವನ್ನಾಗಿ ಮಾಡುವ ಕುರಿತು ಮಾತುಕತೆ ನಡೆಯುತ್ತಿದ್ದು, ಈ ಭೂಮಿಯ ಕೆಳಗೆ ಏನಾದರೂ ಖನಿಜ ನಿಕ್ಷೇಪಗಳು ಇವೆಯೇ ಎಂಬುದರ ಬಗ್ಗೆ ಸಮೀಕ್ಷೆ ಆರಂಭವಾಗಿದೆ.

ಆಗಿನ ಮೈಸೂರು ರಾಜ್ಯ ಮತ್ತು ಆ ನಂತರದ ಕರ್ನಾಟಕ ರಾಜ್ಯವನ್ನು ‘ಮಾದರಿ ರಾಜ್ಯ’ವೆಂದು ಕರೆಯಲು ಕಾರಣವಾಗಿದ್ದೇ ಈ ಬಂಗಾರದ ಗಣಿಗಳು. ಮೈಸೂರು ಗಂಧದ ಎಣ್ಣೆ/ ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ, ಭದ್ರಾವತಿ ಪೇಪರ್ ಮಿಲ್, ವಿಶ್ವೇಶರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಇನ್ನಿತರ ಕಾರ್ಖಾನೆಗಳು ಪ್ರಾರಂಭವಾಗಲು ಚಿನ್ನದ ಗಣಿಗಳ ಕೊಡುಗೆ ಅಪಾರ.

ರಾಜ್ಯ ಮತ್ತು ದೇಶಕ್ಕೆ ಇಷ್ಟೆಲ್ಲ ಕೊಡುಗೆ ನೀಡಿರುವ ಕೋಲಾರ ಜಿಲ್ಲೆಯಲ್ಲಿ ಅಂದರೆ ಕೆಜಿಎಫ್ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಸ್ಥಾಪನೆ ಮಾಡಲೇಬೇಕಿದೆ. ಈ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾತನಾಡುತ್ತಿದ್ದರೂ ಅನುಷ್ಠಾನದಲ್ಲಿ ಬದ್ಧತೆ ಪ್ರದರ್ಶಿಸುವುದು ಮುಖ್ಯವಾಗಿದೆ. ಏಕೆಂದರೆ ಇಂತಹ ಮಾತುಗಳು ಚುನಾವಣೆ ಹತ್ತಿರ ಬಂದಾಗ ಮುಂಚೂಣಿಗೆ ಬಂದು ಬಿಡುತ್ತವೆ.

ಹಿಂದಿನ ಚುನಾವಣೆಯ ಸಮಯದಲ್ಲೂ ಚಿನ್ನದ ಗಣಿಗಳನ್ನು ಇನ್ನೇನು ಪ್ರಾರಂಭಿಸಿಯೇ ಬಿಟ್ಟರು ಎಂಬ ಮಾತುಗಳು ದಟ್ಟವಾಗಿ ಹರಿದಾಡಿದವು. ಚುನಾವಣೆ ಮುಗಿದ ಮೇಲೆ ಅವರೆಲ್ಲ ಎಲ್ಲಿಗೆ ಹೋದರೊಕಾಣಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT