ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಸ್ವರಾಜ್‌; ಪಂಚಾಯತ್‌ರಾಜ್‌ ಕಾಯ್ದೆಗೆ ಮತ್ತೆ ತಿದ್ದುಪಡಿ

ಅಧ್ಯಕ್ಷ ಅವಧಿ ಎರಡೂವರೆ ವರ್ಷ
Last Updated 25 ಸೆಪ್ಟೆಂಬರ್ 2020, 20:18 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಸದಸ್ಯರ ತೀವ್ರ ವಿರೋಧದ ಮಧ್ಯೆಯೂ ಪಂಚಾಯಿತಿಗಳ ಅಧ್ಯಕ್ಷ–ಉಪಾಧ್ಯಕ್ಷರ ಅಧಿಕಾರ ಅವಧಿ ಮೊಟಕುಗೊಳಿಸುವ ಕರ್ನಾಟಕ ಗ್ರಾಮ ಸ್ವರಾಜ್‌ ಹಾಗೂ ಪಂಚಾಯತ್‌ರಾಜ್‌ (ತಿದ್ದುಪಡಿ) ಮಸೂದೆಗೆ ವಿಧಾನಸಭೆಯಲ್ಲಿ ಸರ್ಕಾರ ಶುಕ್ರವಾರ ಒಪ್ಪಿಗೆ ಪಡೆಯಿತು.

ಕೆ.ಆರ್‌.ರಮೇಶ್‌ ಕುಮಾರ್ ಸಮಿತಿಯ ಶಿಫಾರಸಿನ ಆಧಾರದಲ್ಲಿ ಗ್ರಾಮ ಸ್ವರಾಜ್‌ ಕಾಯ್ದೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ತಿದ್ದುಪಡಿ ತಂದಿತ್ತು. ಅಧ್ಯಕ್ಷರ ಅವಧಿಯನ್ನು ಐದು ವರ್ಷಕ್ಕೆ ಏರಿಸಲಾಗಿತ್ತು. ಇದೀಗ ತಂದಿರುವ ತಿದ್ದುಪಡಿ ಪ್ರಕಾರ, ಅಧಿಕಾರದ ಅವಧಿ ಎರಡೂವರೆ ವರ್ಷಕ್ಕೆ ಇಳಿಯಲಿದೆ.

ಮಸೂದೆ ಮಂಡಿಸಿದ ಪಂಚಾಯತ್‌ರಾಜ್ ಸಚಿವ ಕೆ.ಎಸ್‌.ಈಶ್ವರಪ್ಪ, ‘ಹಲವು ಪ್ರಕರಣಗಳಲ್ಲಿ ಹೈಕೋರ್ಟ್‌ ಆದೇಶ ಹಾಗೂ ಅಡ್ವೊಕೇಟ್‌ ಜನರಲ್‌, ಹಣಕಾಸು ಇಲಾಖೆಯ ಸಲಹೆಯ ಮೇರೆಗೆ ಕ್ಷೇತ್ರಗಳ ಮೀಸಲಾತಿ ಅವಧಿಯನ್ನು ಐದು ವರ್ಷ ಮಾಡಲಾಗುತ್ತಿದೆ’ ಎಂದರು.

ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್‌, ‘ನಮ್ಮ ಸಮಿತಿ ವರದಿ ನೀಡಿದ ಬಳಿಕ ನಮ್ಮದೇ ಸರ್ಕಾರ ಅದನ್ನು ಜಾರಿ ಮಾಡಲಿಲ್ಲ. ರಾಹುಲ್‌ ಗಾಂಧಿ ಅವರು ಚುನಾವಣಾ ಪ್ರಚಾರಕ್ಕೆ ಬಂದಾಗ ಈ ವಿಷಯವನ್ನು ಗಮನಕ್ಕೆ ತಂದೆ. ಗ್ರಾಮ ಸ್ವರಾಜ್ ಕಾಯ್ದೆ ಜಾರಿಗೊಳಿಸುವುದಾಗಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಘೋಷಿಸಿದರು. ಆ ಬಳಿಕ ಸಚಿವ ಸಂಪುಟ ಕಾಯ್ದೆಗೆ ತಿದ್ದುಪಡಿ ತಂದಿತು. ಹೊಸ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದ ಬಳಿಕವೂ ಹಳೆಯ ಕಾಯ್ದೆಯ ಪ್ರಕಾರವೇ ಚುನಾವಣೆ ನಡೆಸಿತು. ಈಗ ಕಾಯ್ದೆಗೆ ತಿದ್ದುಪಡಿ ತಂದು ಪರಿಶಿಷ್ಟರು, ಹಿಂದುಳಿದವರು ಹಾಗೂ ಮಹಿಳೆಯರಿಗೆ ಅನ್ಯಾಯ ಮಾಡಬೇಡಿ‘ ಎಂದು ಕೋರಿದರು.

‘ಸಲಾತಿಯ ಅವಧಿಯನ್ನು ಕಡಿಮೆ ಮಾಡುವುದು ಅವೈಜ್ಞಾನಿಕ’ ಎಂದು ಬಿಎಸ್‌ಪಿಯ ಎನ್‌.ಮಹೇಶ್‌ ಪ್ರತಿಪಾದಿಸಿದರು. ಜೆಡಿಎಸ್‌ನ ಎಚ್‌.ಡಿ.ರೇವಣ್ಣ ಮಸೂದೆ ಬೆಂಬಲಿಸಿ ಮಾತನಾಡಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಅಧ್ಯಕ್ಷರ ಅವಧಿಯನ್ನು ಐದು ವರ್ಷಕ್ಕೇ ಉಳಿಸಿಕೊಳ್ಳಬೇಕು. ಅಲ್ಲಿ ಉತ್ತಮ ನಾಯಕರು ರೂಪುಗೊಂಡರೆ ಒಳ್ಳೆಯ ಶಾಸಕರು ಬರಲು ಸಾಧ್ಯವಿದೆ‘ ಎಂದು ಅಭಿಪ್ರಾಯಪಟ್ಟರು.

ಏನೇನು ಬದಲಾವಣೆ?

*ಪಂಚಾಯಿತಿ ಸದಸ್ಯರ ಕ್ಷೇತ್ರಗಳ ಮೀಸಲಾತಿ ಅವಧಿ 10 ವರ್ಷಗಳಿಂದ 5 ವರ್ಷಕ್ಕೆ ಇಳಿಕೆ

*ಅಧ್ಯಕ್ಷ ಅಥವಾ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ಅವಧಿ 30 ತಿಂಗಳಿಂದ 15 ತಿಂಗಳಿಗೆ ಇಳಿಕೆ

*ಪಂಚಾಯಿತಿಗಳ ಮತದಾನಕ್ಕೆ ಎರಡು ದಿನ ಮೊದಲು ಮದ್ಯ ಮಾರಾಟ ಬಂದ್‌. ಈ ಮೊದಲು ಎಂಟು ದಿನ ಇತ್ತು.

*ಕಾರ್ಖಾನೆಗಳು ಹಾಗೂ ಖಾಲಿ ಭೂಮಿಗಳ ಆಸ್ತಿ ತೆರಿಗೆ ಮರು ಹಂಚಿಕೆ

*ಅವಿಶ್ವಾಸ ಗೊತ್ತುವಳಿ ಮಂಡಿಸುವಾಗ ತಾಲ್ಲೂಕು ಪಂಚಾಯಿತಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ

**
ಮೀಸಲಾತಿಯಲ್ಲಿ 10 ಪಂಗಡಗಳಿವೆ. 10 ವರ್ಷ ಮೀಸಲಾತಿ ಇಟ್ಟರೆ ಅವರು ಲಾಭ ಪಡೆಯಲು ಕನಿಷ್ಠ 70 ವರ್ಷ ಕಾಯಬೇಕು. ತಿದ್ದುಪಡಿಯಿಂದ ಸಾಮಾಜಿಕ ನ್ಯಾಯ ಸಿಗಲಿದೆ.
-ಕೆ.ಎಸ್‌.ಈಶ್ವರಪ್ಪ, ಪಂಚಾಯತ್‌ರಾಜ್‌ ಸಚಿವ

**
ಮೀಸಲಾತಿ ಅವಧಿಯನ್ನು ಇಳಿಸಿದರೆ ದಲಿತರು ಹಾಗೂ ಹಿಂದುಳಿದವರು ಬಲಾಢ್ಯರ ಮರ್ಜಿಗೆ ತಕ್ಕಂತೆ ಇರಬೇಕಾಗುತ್ತದೆ. ಅವರಿಗೆ ಅನ್ಯಾಯವಾಗಲಿದೆ.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

**
ನಾಲ್ಕೈದು ತಿಂಗಳಿಗೆ ಅಧ್ಯಕ್ಷರನ್ನು ಹುದ್ದೆಯಿಂದ ಇಳಿಸುವ ಪ್ರಕರಣಗಳು ಸಾಕಷ್ಟು ನಡೆಯುತ್ತಿವೆ. ಇದಕ್ಕೆ ಇನ್ನಷ್ಟು ಉತ್ತೇಜನ ನೀಡುವ ಕೆಲಸ ಮಾಡಬೇಡಿ.
-ಕೆ.ಆರ್‌.ರಮೇಶ್‌ ಕುಮಾರ್‌, ಕಾಂಗ್ರೆಸ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT