ಭಾನುವಾರ, ಫೆಬ್ರವರಿ 5, 2023
21 °C
ಸಿ.ಡಿ. ಪ್ರಕರಣ: ವಕೀಲರಿಗೇ ನೋಟಿಸ್ ಕೊಟ್ಟ ಪೊಲೀಸರು

ನ್ಯಾಯಾಧೀಶರ ಎದುರು ಇಂದು ಸಂತ್ರಸ್ತೆ ಹೇಳಿಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿ.ಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಅಜ್ಞಾತ ಸ್ಥಳದಲ್ಲಿರುವ ಯುವತಿಯನ್ನು ವಿಚಾರಣೆಗೆ ಕರೆತರುವಂತೆ ಅವರ ಪರ ವಕೀಲರಿಗೆ ಇದೀಗ ಪೊಲೀಸರು ನೋಟಿಸ್ ನೀಡಿದ್ದಾರೆ.

ಇದರಿಂದಾಗಿ, ಸಂತ್ರಸ್ತೆ ಸೋಮವಾರ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡುವ ಸಾಧ್ಯತೆ ಇದೆ.

‘ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ದ ರಮೇಶ ಜಾರಕಿಹೊಳಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು ಆರೋಪಿಸಿ ಯುವತಿ ನೀಡಿದ್ದ ಲಿಖಿತ ಹೇಳಿಕೆಯನ್ನು, ಅವರ ಪರ ವಕೀಲ ಜಗದೀಶ್ ಕೆ.ಎನ್. ಹಾಗೂ ಮಂಜುನಾಥ್ ಅವರು
ಪೊಲೀಸರಿಗೆ ನೀಡಿದ್ದರು. ಅದೇ ದೂರಿನನ್ವಯ, ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಪ್ರಕರಣದಲ್ಲಿ ಯುವತಿ ಹೇಳಿಕೆ ಅಗತ್ಯವಿದ್ದು, ಈಗಾಗಲೇ ಅವರಿಗೆ ಮೂರು ಬಾರಿ ನೋಟಿಸ್ ನೀಡಲಾಗಿದೆ. ಅವರು ವಿಚಾರಣೆಗೆ ಬಂದಿಲ್ಲ. ನೀವು ಅವರನ್ನು ವಿಚಾರಣೆಗೆ ಕರೆದುಕೊಂಡು ಬನ್ನಿ’ ಎಂದು ಪೊಲೀಸರು, ಜಗದೀಶ್ ಅವರಿಗೆ ವಾಟ್ಸ್‌ಆ್ಯಪ್‌ ಮೂಲಕ ನೋಟಿಸ್‌ ಪ್ರತಿ ಕಳುಹಿಸಿದ್ದಾರೆ.

‘ಪ್ರಭಾವಕ್ಕೆ ಮಣಿದು ಪೊಲೀಸರು ಪ್ರಕರಣದ ದಿಕ್ಕು ತಪ್ಪಿಸಿದ್ದಾರೆ’ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿಬಿಟ್ಟಿರುವ ವಕೀಲರಾದ ಜಗದೀಶ್ ಹಾಗೂ ಮಂಜುನಾಥ್, ‘ಪೊಲೀಸರ ಈ ನಡೆ ಸರಿ ಅನ್ನಿಸುತ್ತಿಲ್ಲ’ ಎಂದಿದ್ದಾರೆ.

‘ಯುವತಿ ದೂರಿನನ್ವಯ ಎಫ್‌ಐಆರ್ ದಾಖಲಾದ ನಂತರದ ಬೆಳವಣಿಗೆ ನೋಡಿದರೆ, ತನಿಖಾಧಿಕಾರಿ ಎದುರು ಯುವತಿಯನ್ನು  ಹಾಜರುಪಡಿಸಬೇಕು ಎಂದು ಅನ್ನಿಸುತ್ತಿಲ್ಲ. ಹೀಗಾಗಿ, ಯುವತಿ ನೇರವಾಗಿ ನ್ಯಾಯಾಧೀಶರ ಎದುರು ಸೋಮವಾರವೇ ಹಾಜರಾಗಿ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ’ ಎಂದೂ ಅವರು ಹೇಳಿದ್ದಾರೆ.

‘ನ್ಯಾಯಾಧೀಶರ ಎದುರು ಯುವತಿ ದಾಖಲಿಸುವ ಸ್ವ–ಇಚ್ಛಾ ಹೇಳಿಕೆ ಮಹತ್ವದ್ದು. ಅದು ಪ್ರಕರಣದ ಬೆನ್ನೆಲುಬು. ಯುವತಿ ಹೇಳಿಕೆ ಆಧರಿಸಿ ನ್ಯಾಯಾಧೀಶರು ಯಾವುದೇ ರೀತಿಯಲ್ಲೂ ಆದೇಶ ಹೊರಡಿಸಬಹುದು. ನಂತರ, ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬಹುದು. ಆರೋಪಿ, ತಾನು ಪ್ರಭಾವಿ ಎಂದು ಪರೀಕ್ಷೆ ನಿರಾಕರಿಸಲಾಗದು’ ಎಂದೂ ತಿಳಿಸಿದ್ದಾರೆ.

ಆರೋಪಿಗೆ ಎಸ್‌ಐಟಿ ಬೆಂಬಲ’

‘ಪ್ರಕರಣ ಸಂಬಂಧ ಕಬ್ಬನ್‌ ಪಾರ್ಕ್ ಹಾಗೂ ಸದಾಶಿವನಗರದಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ. ಎರಡೂ ಪ್ರಕರಣಗಳ ತನಿಖೆಯನ್ನು ಒಂದೇ ತನಿಖಾ ಸಂಸ್ಥೆ ನಡೆಸುವುದು ಎಷ್ಟು ನ್ಯಾಯಯುತ’ ಎಂದು ವಕೀಲ ಜಗದೀಶ್ ಪ್ರಶ್ನಿಸಿದರು.

‘ಯುವತಿ ದೂರಿನಡಿ ದಾಖಲಾದ ಪ್ರಕರಣದ ಆರೋಪಿ, ರಾಜ್ಯ ಸರ್ಕಾರದ ಭಾಗ ಹಾಗೂ ಪ್ರಭಾವಿ. ಅವರೇ ಈ ಕೃತ್ಯ ಎಸಗಿದ್ದಾರೆ. ಇದೀಗ ತನಿಖಾ ಸಂಸ್ಥೆಯು ಅವರಿಗೆ ಬೆಂಬಲ ನೀಡುತ್ತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಅತ್ಯಾಚಾರದ ಆರೋಪಿಯೊಬ್ಬ, ಯಾವ ರೀತಿ ಬಹಿರಂಗವಾಗಿ ಮಾಧ್ಯಮಗಳಿಗೆ ಹೇಳಿಕೆ ಕೊಡುತ್ತಿದ್ದಾರೆ. ಬೇರೆ ಯಾರಾದರೂ ಸಾಮಾನ್ಯ ವ್ಯಕ್ತಿಯಾಗಿದ್ದರೆ ಇದು ಸಾಧ್ಯವಾಗುತ್ತಿತ್ತಾ’ ಎಂದೂ ಅವರು ಪ್ರಶ್ನಿಸಿದರು.

ಯುವತಿ ಸ್ನೇಹಿತನಿಗೆ ಮತ್ತೊಮ್ಮೆ ನೋಟಿಸ್

ಯುವತಿಯ ಪೋಷಕರು ಹಾಗೂ ತಮ್ಮಂದಿರನ್ನು ಶನಿವಾರವಷ್ಟೇ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದರು. ಇದೀಗ, ಅದೇ ಹೇಳಿಕೆ ಆಧರಿಸಿ ಯುವತಿ ಸ್ನೇಹಿತನನ್ನು ವಿಚಾರಣೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ. ಸೋಮವಾರ ವಿಚಾರಣೆಗೆ ಬರುವಂತೆ ಸ್ನೇಹಿತನಿಗೆ ನೋಟಿಸ್ ಸಹ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು