ಶನಿವಾರ, ಜನವರಿ 22, 2022
16 °C

ಶಾಲೆ ಬಂದ್‌ ಆಲೋಚನೆಯೇ ಇಲ್ಲ: ಸಚಿವ ಬಿ.ಸಿ.ನಾಗೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಕ್ಕಳ ಪರಿಣಾಮಕಾರಿ ಕಲಿಕೆಗೆ ಆನ್‌ಲೈನ್‌ ತರಗತಿಗಳು ತೊಡಕಾಗಿವೆ. ಹೀಗಾಗಿ ಭೌತಿಕ ತರಗತಿಗಳಿಗೆ ಒತ್ತು ನೀಡಲಾಗುತ್ತಿದ್ದು, ಶಾಲೆಗಳನ್ನು ಬಂದ್‌ ಮಾಡುವ ಆಲೋಚನೆ ಸದ್ಯಕ್ಕಂತೂ ಇಲ್ಲ’ ಎಂದು ಸಚಿವ ಬಿ.ಸಿ.ನಾಗೇಶ್‌ ಪ್ರತಿಪಾದಿಸಿದರು.

‘ಸರ್ಕಾರಿ ಶಾಲೆಗಳಿಗೆ ದಾಖಲಾಗುವವರಲ್ಲಿ ಬಡವರೇ ಹೆಚ್ಚಿರುತ್ತಾರೆ. ಆನ್‌ಲೈನ್‌ ತರಗತಿಗೆ ಅಗತ್ಯವಿರುವ ಸಾಧನ ಹಾಗೂ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸಿಕೊಳ್ಳುವ ಸಾಮರ್ಥ್ಯ ಅವರಿಗೆ ಇರುವುದಿಲ್ಲ. ಆ ಮಕ್ಕಳ ಭವಿಷ್ಯವನ್ನೂ ಗಮನದಲ್ಲಿಟ್ಟುಕೊಳ್ಳಬೇಕು’ ಎಂದರು.

‘ಯಾವುದೇ ಕಾರಣಕ್ಕೂ ಶಾಲೆಗಳು ಬಂದ್‌ ಆಗಬಾರದು. ಮಕ್ಕಳ ಕಲಿಕೆಗೆ ತೊಡಕಾಗಬಾರದು. ಹೀಗಾಗಿ ಬಿಗಿಕ್ರಮ ಕೈಗೊಳ್ಳಲಾಗುತ್ತದೆ. ಹಿಂದಿನ ಎರಡು ದಿನಗಳಲ್ಲಿ ವಸತಿ ಶಾಲೆ ಸೇರಿ ರಾಜ್ಯದ ಯಾವ ಶಾಲೆಯ ಮಕ್ಕಳಿಗೂ ಸೋಂಕು ತಗುಲಿಲ್ಲ. ಹೀಗಾಗಿ ಪೋಷಕರು ಧೈರ್ಯದಿಂದ ಇರಬೇಕು’ ಎಂದು ತಿಳಿಸಿದರು.

2 ದಿನಗಳಲ್ಲಿ ಶಾಲೆ–ಕಾಲೇಜಿಗೆ ಪ್ರತ್ಯೇಕ ಮಾರ್ಗಸೂಚಿ

ರಾಜ್ಯದಲ್ಲಿರುವ ಶಾಲೆ ಹಾಗೂ ಕಾಲೇಜುಗಳಲ್ಲಿ ಕೋವಿಡ್ ಹರಡುವಿಕೆ ತಡೆಯುವ ಉದ್ದೇಶದಿಂದ ಮುಂದಿನ ಎರಡು ದಿನಗಳಲ್ಲಿ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ.

‘ಶಾಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವಂತೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಇದೇ 9ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಜ್ಞರ ಜೊತೆ ಸಭೆ ನಡೆಸಲಿದ್ದಾರೆ. ಅಲ್ಲಿ ಈ ಬಗ್ಗೆ ವಿಶೇಷವಾಗಿ ಚರ್ಚಿಸಲಾಗುತ್ತದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಮಂಗಳವಾರ ಹೇಳಿದ್ದಾರೆ.

‘ಸಚಿವರು ಬರೆದಿರುವ ಪತ್ರ ಕೈಸೇರಿದೆ. ಅದನ್ನು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಮುಂದೆ ಇಡಲಾಗುತ್ತದೆ. ಹೊಸ ಮಾರ್ಗಸೂಚಿ ಸಿದ್ಧಪಡಿಸಿ ಮುಂದಿನ ಎರಡು ದಿನಗಳಲ್ಲಿ ಅದನ್ನು ಬಿಡುಗಡೆ ಮಾಡಲಾಗುತ್ತದೆ’ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್‌) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್, ‘ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಹೀಗಿದ್ದರೂ ವಿದ್ಯಾರ್ಥಿಗಳಿಗೆ ಸೋಂಕು ತಗುಲುತ್ತಿರುವುದು ಶಾಲೆ ಹಾಗೂ ಕಾಲೇಜು ಆಡಳಿತ ಮಂಡಳಿಗಳನ್ನು ಚಿಂತೆಗೀಡು ಮಾಡಿದೆ’ ಎಂದಿದ್ದಾರೆ.

ಪಿಯು ಕಾಲೇಜುಗಳಲ್ಲಿ 27 ಪ್ರಕರಣ: ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ಹಿಂದಿನ 10 ದಿನಗಳಲ್ಲಿ 27 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 21 ಮಂದಿ ವಿದ್ಯಾರ್ಥಿಗಳು ಸೇರಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು