ಬುಧವಾರ, ಆಗಸ್ಟ್ 10, 2022
24 °C
ಕೊರೊನಾ

ವೇತನವೂ ಇಲ್ಲ ಸೇವಾ ಭದ್ರತೆಯೂ ಇಲ್ಲ: ಸಂಕಷ್ಟದಲ್ಲಿ ಅಂಗವಿಕಲ ಅತಿಥಿ ಉಪನ್ಯಾಸಕರು

ಗಣೇಶ್ ತಮ್ಮಡಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದ 247 ಅಂಗವಿಕಲ ಅತಿಥಿ ಉಪನ್ಯಾಸಕರು ಸಂಕಷ್ಟದಲ್ಲಿದ್ದಾರೆ.

‘ಕೊರೊನಾ ಸಂಕಷ್ಟ ಆರಂಭವಾದ ನಂತರ ಕೆಲಸ ಕಳೆದುಕೊಂಡು ಮಾನಸಿಕವಾಗಿ ಕುಗ್ಗಿರುವ ನಮಗೆ ಲಾಕ್‌ಡೌನ್‌ ಅವಧಿಯ ಗೌರವಧನದ ಜತೆಗೆ ಸೇವಾ ಭದ್ರತೆ ನೀಡಬೇಕು. ಇಲ್ಲವೇ ಸರ್ಕಾರದ ಯಾವುದಾದರೂ ಇಲಾಖೆಯಲ್ಲಿ ಕೆಲಸ ಕೊಡಬೇಕು’ ಎಂದು ಅಂಗವಿಕಲ ಅತಿಥಿ ಉಪನ್ಯಾಸಕರು ಸರ್ಕಾರಕ್ಕೆ ಮೊರೆಇಟ್ಟಿದ್ದಾರೆ.

‘ಐದಾರು ತಿಂಗಳಿಂದ ಕೆಲಸವಿಲ್ಲ, ಗೌರವಧನವೂ ಇಲ್ಲ. ಬೇರೆ ಕೆಲಸ ಮಾಡಿಯಾದರೂ ಜೀವನ ಸಾಗಿಸೋಣ ಎಂದರೆ ದೈಹಿಕ ಸಾಮರ್ಥ್ಯವೂ ಇಲ್ಲ. ಕುಟುಂಬ ನಿರ್ವಹಣೆಗೂ ಹಣವಿಲ್ಲದೆ ಪರದಾಡುತ್ತಿರುವ ನಮ್ಮ ಗೋಳು ಕೇಳುವವರಿಲ್ಲ. ಗೌರವ ಸಂಭಾವನೆಯಲ್ಲೇ ಸ್ವಾಭಿಮಾನದ ಬದುಕು ಸಾಗಿಸುತ್ತಿರುವ ನಾವು ಹಲವು ವರ್ಷಗಳಿಂದ ಸೇವೆ ಸಲ್ಲಿಸಿದರೂ ಸೇವಾ ಭದ್ರತೆ ನೀಡದ ಕಾರಣ ಮಾನಸಿಕ ಕ್ಷೋಭೆಗೆ ಒಳಗಾಗಿದ್ದೇವೆ. ನಮ್ಮ ಆದಾಯವನ್ನೇ ನೆಚ್ಚಿಕೊಂಡಿರುವ ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ’ ಎಂದು ಅಳಲು ತೋಡಿಕೊಂಡಿದ್ದಾರೆ. 

‘ಲಾಕ್‌ಡೌನ್‌ ಪೂರ್ವದಲ್ಲಿ ಕಾಲೇಜಿಗೆ ಹೋಗಿ ಪಾಠ ಮಾಡುತ್ತಿದ್ದೆವು. ಸರ್ಕಾರ ಕೊಡುವ ಗೌರವಧನದಲ್ಲಿ ಹೇಗೊ ಸಂಸಾರ ಸಾಗುತ್ತಿತ್ತು. ಆದರೆ, ಲಾಕ್‌ಡೌನ್‌ ಬಳಿಕ ನಮ್ಮ ಸ್ಥಿತಿ ಶೋಚನೀಯವಾಗಿದೆ. ಶೈಕ್ಷಣಿಕವಾಗಿ ಸಮರ್ಥರಾದರೂ ದೈಹಿಕವಾಗಿ ದುರ್ಬಲವಾಗಿರುವ ನಾವು ಕುಟುಂಬ ನಿರ್ವಹಣೆಗೆ ಭಿಕ್ಷಾಟನೆ ಮಾಡಬೇಕಾದ ಅನಿವಾರ್ಯತೆ ಇದೆ’ ಎಂದು ಅಂಗವಿಕಲ ಅತಿಥಿ ಉಪನ್ಯಾಸಕ ವಿ.ಧನಂಜಯ ‘ಪ್ರಜಾವಾಣಿ’ಗೆ ಅಳಲು ತೋಡಿಕೊಂಡರು.

‘ಲಾಕ್‌ಡೌನ್‌‌ ಅವಧಿಯಲ್ಲಿ ಬಹಳಷ್ಟು ಮಂದಿ ಅತಿಥಿ ಉಪನ್ಯಾಸಕರು ತರಕಾರಿ, ಮಾಸ್ಕ್, ಕೃಷಿ ಸೇರಿ ಇತರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೆಲವರು ಮನೆಯಲ್ಲೇ ಉಳಿದಿದ್ದಾರೆ. ಆದರೆ, ನಮ್ಮಂತಹವರಿಗೆ ಬದುಕು ಸಾಗಿಸಲು ಈಗ ಭಿಕ್ಷಾಟನೆಯೊಂದೇ ದಾರಿ’ ಎಂದು ಅಂಗವಿಕಲ ಉಪನ್ಯಾಸಕರ ಸಂಕಷ್ಟ ತೆರೆದಿಟ್ಟರು ರಾಜ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಅಂಗವಿಲಕ ಅತಿಥಿ ಉಪನ್ಯಾಸಕರ ರಾಜ್ಯ ಸಮಿತಿ ಅಧ್ಯಕ್ಷ ಮಂಜುನಾಥಗೌಡ ನಿಂಗನಗೌಡ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು