ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ದೆಹಲಿಗೆ ಬೆಲ್ಲದ್: ಸಂತೋಷ್‌ ಜತೆ ಚರ್ಚೆ

ವೈಯಕ್ತಿಕ ಕೆಲಸಗಳ ಕಾರಣ ನೀಡಿದ ಶಾಸಕ
Last Updated 12 ಜೂನ್ 2021, 20:05 IST
ಅಕ್ಷರ ಗಾತ್ರ

ನವದೆಹಲಿ: ‘ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಸ್ತಾವವೇ ಇಲ್ಲ’ ಎಂದು ಗುರುವಾರವಷ್ಟೇ ಬಿಜೆಪಿ ಹೈಕಮಾಂಡ್‌ ಸ್ಪಷ್ಟಪಡಿಸಿರುವ ಬೆನ್ನಲ್ಲೇ ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ದೆಹಲಿಗೆ ದೌಡಾಯಿಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಶುಕ್ರವಾರ ತಡರಾತ್ರಿ ದೆಹಲಿಗೆ ಬಂದಿರುವ ಬೆಲ್ಲದ್, ಶನಿವಾರ ಸಂಜೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌. ಸಂತೋಷ್ ಅವರನ್ನು ಭೇಟಿ ಮಾಡಿ ಎರಡು ಗಂಟೆಗಳ ಕಾಲ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ. ಇತರ ಮುಖಂಡರನ್ನು ಭೇಟಿ ಮಾಡಬೇಕೆಂಬ ಅವರ ಉದ್ದೇಶ ಈಡೇರಿಲ್ಲ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಲು ಅವರು ನಡೆಸಿದ ಪ್ರಯತ್ನಗಳು ಫಲಿಸಿಲ್ಲ. ಬದಲಿಗೆ, ಮುಂದಿನ ವಾರ ಬೆಂಗಳೂರು ಭೇಟಿ ಸಂದರ್ಭ ಎಲ್ಲ ಶಾಸಕರ ಅಹವಾಲು ಆಲಿಸುವುದಾಗಿ ಸಿಂಗ್‌ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಜೂನ್‌ 16 ಅಥವಾ 17ರಿಂದ ಮೂರು ದಿನಗಳ ಕಾಲ ಬೆಂಗಳೂರಿಗೆ ಭೇಟಿ ನೀಡಿ, ಮುಖಂಡರೊಂದಿಗೆ ಮಾತುಕತೆ ನಡೆಸುವುದಾಗಿ ಅರುಣ್ ಸಿಂಗ್ ತಿಳಿಸಿದ್ದರು. ಆದರೂ, ದೆಹಲಿಗೆ ದಿಢೀರ್‌ ಭೇಟಿ ಕೊಟ್ಟಿರುವ ಬೆಲ್ಲದ್, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ವರಿಷ್ಠರಿಗೆ ದೂರು ನೀಡಲು ಇಚ್ಛಿಸಿದ್ದರು ಎಂದು ಹೇಳಲಾಗಿದೆ.

ಸಚಿವ ಸಿ.ಪಿ. ಯೋಗೇಶ್ವರ್ ಅವರೊಂದಿಗೆ ಮೇ ತಿಂಗಳಲ್ಲಿ ಎರಡು ಬಾರಿ ದೆಹಲಿಗೆ ಬಂದಿದ್ದ ಬೆಲ್ಲದ್‌ ಮತ್ತಿತರ ಶಾಸಕರಿಗೆ ಆಗಲೂ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ.

ಆದರೆ, ದೆಹಲಿಯಲ್ಲಿ ಪಕ್ಷದ ಯಾವುದೇ ಮುಖಂಡರನ್ನು ಭೇಟಿ ಮಾಡುವ ಉದ್ದೇಶ ಇಲ್ಲ ಎಂದು ‘ಪ್ರಜಾವಾಣಿ‘ಗೆ ತಿಳಿಸಿರುವ ಬೆಲ್ಲದ್, ವೈಯಕ್ತಿಕ ಕಾರ್ಯ ನಿಮಿತ್ಯ ಇಲ್ಲಿಗೆ ಬಂದಿದ್ದಾಗಿ ಹೇಳಿದ್ದಾರೆ.

ಖಾಸಗಿ ಕೆಲಸಗಳ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ದೆಹಲಿ ಸೇರಿದಂತೆ ಉತ್ತರ ಭಾರತ ಪ್ರವಾಸಕ್ಕೆ ಬರುವುದಾಗಿ ಅವರು ತಿಳಿಸಿದ್ದಾರೆ.

ಅಲ್ಲದೆ, ದೆಹಲಿ ಭೇಟಿಯ ಹಿಂದೆ ರಾಜಕೀಯ ಉದ್ದೇಶ ಇಲ್ಲ. ಕೌಟುಂಬಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿದ್ದು, ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು ಬೇಡ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕವೂ ಸ್ಪಷ್ಟಪಡಿಸಿದ್ದಾರೆ.

‘ನಾನು ರಾಷ್ಟ್ರೀಯ ನಾಯಕರ ಭೇಟಿಗಾಗಿಯಾಗಲಿ, ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ದೆಹಲಿಗೆ ಆಗಮಿಸಿಲ್ಲ.ನಾನು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರೂ ಮಾಧ್ಯಮಗಳಲ್ಲಿ ರಾಜಕೀಯ ಬೆಳವಣಿಗೆಗಳ ಚರ್ಚೆಗೆ ದೆಹಲಿಗೆ ಬಂದಿದ್ದಾರೆ ಎನ್ನುವ ರೀತಿ ಸುದ್ದಿ ಹರಡಿಸಲಾಗುತ್ತಿದೆ. ಮಾಧ್ಯಮಗಳಲ್ಲಿ ನನ್ನ ದೆಹಲಿ ಭೇಟಿಯ ಕುರಿತು ಬರುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿದೆ.ಹೀಗಾಗಿ ನನ್ನ ದೆಹಲಿ ಭೇಟಿಯ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದುಮಾಧ್ಯಮ ಮಿತ್ರರಲ್ಲಿ ಮನವಿ ಮಾಡಿಕೊಳ್ಳುತ್ತೇನೆʼ ಎಂದು ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT