ಶನಿವಾರ, ಅಕ್ಟೋಬರ್ 31, 2020
27 °C
ಪ್ರತಿ ಪಕ್ಷಗಳು ರೈತರನ್ನು ದಿಕ್ಕು ತಪ್ಪಿಸುತ್ತಿವೆ- ಆರೋಪ

ಎಪಿಎಂಸಿ ಮುಚ್ಚುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

BS Yediyurappa

ಬೆಂಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು (ಎಪಿಎಂಸಿ) ಮುಚ್ಚುವ ಪ್ರಶ್ನೆಯೇ ಇಲ್ಲ. ನಷ್ಟದಲ್ಲಿರುವ ಎಪಿಎಂಸಿಗಳನ್ನೂ ಮುಚ್ಚುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಲಾಭ ಆಗಲಿದೆ. ರೈತರು ದಲ್ಲಾಳಿಗಳ ಹಿಡಿತದಿಂದ ಬಿಡುಗಡೆ ಅಗಲಿದ್ದಾರೆ. ರೈತರ ಅನುಕೂಲಕ್ಕಾಗಿಯೇ ಈ ತಿದ್ದುಪಡಿ ತರಲಾಗಿದೆ' ಎಂದರು.

ತಾವು ಸ್ವತಃ ಎಪಿಎಂಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದು, ಅಲ್ಲಿ ಏನು ನಡೆಯುತ್ತದೆ ಎಂಬುದು ಗೊತ್ತಿದೆ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ನಾಯಕರಿಗೂ ಗೊತ್ತಿದೆ. ಆದರೆ, ರಾಜಕೀಯ ದುರುದ್ದೇಶದಿಂದ ರೈತರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದರು.

ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರುವ ಹಕ್ಕು ಪಡೆಯುತ್ತಾರೆ. ಹಿಂದೆ ಕಾಂಗ್ರೆಸ್ ಪಕ್ಷವೇ ಈ ತಿದ್ದುಪಡಿ ತರಲು ಹೊರಟಿತ್ತು. ರಿಲಯನ್ಸ್ ನಂತಹ ಕಂಪನಿಗಳಿಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕೊಟ್ಟವರು ಯಾರು ಎಂಬುದನ್ನು ಕಾಂಗ್ರೆಸ್ ನಾಯಕರು ಹೇಳಲಿ ಎಂದು ಮುಖ್ಯಮಂತ್ರಿ ಸವಾಲು ಹಾಕಿದರು.

ಭೂಸುಧಾರಣಾ ಕಾಯ್ದೆಯ ತಿದ್ದುಪಡಿ ಕೂಡ ರೈತರ ಪರವಾಗಿಯೇ ಇದೆ. ರಾಜ್ಯದಲ್ಲಿ 18 ಲಕ್ಷ ಎಕರೆ ಕೃಷಿ ಜಮೀನು ಸಾಗುವಳಿ ಆಗದೇ ಪಾಳು ಬೀಳುತ್ತಿದೆ. ಈಗ ತಂದಿರುವ ತಿದ್ದುಪಡಿ ಯಾರು ಬೇಕಾದರೂ ಕೃಷಿ ಜಮೀನು ಖರೀದಿಸಲು ಅವಕಾಶ ಒದಗಿಸಲಿದೆ.‌ ಇದರಿಂದಾಗಿ ಕೃಷಿ ಹೆಚ್ಚಲಿದೆ ಎಂದು ಹೇಳಿದರು.

ನೀರಾವರಿ ಜಮೀನು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು, ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನು ಉಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ರೈತರಿಗೆ ಮತ್ತು ಕೃಷಿ ಕ್ಷೇತ್ರಕ್ಕೆ ಯಾವ ತೊಂದರೆಯೂ ಆಗದು ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ನಾಯಕರು ಏನು ಹೇಳುತ್ತಿದ್ದಾರೆ‌ ಎಂಬುದು ಜನರಿಗೆ ಗೊತ್ತಿದೆ. ಅವರ ಪಕ್ಷವೇ ಈ ತಿದ್ದುಪಡಿಗಳ ಪ್ರಸ್ತಾವ ಸಿದ್ಧಪಡಿಸಿತ್ತು ಎಂಬುದನ್ನು ಕಂದಾಯ ಸಚಿವ ಆರ್. ಅಶೋಕ ಅವರು ವಿಧಾನಮಂಡಲದಲ್ಲಿ ದಾಖಲೆ ಸಹಿತ ನಿರೂಪಿಸಿದ್ದಾರೆ. ಈಗ ಸುಳ್ಳು ಹೇಳುತ್ತಿದ್ದಾರೆ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಚರ್ಚೆಗೆ ಸಿದ್ಧ: ಎರಡೂ ಕಾಯ್ದೆಗಳ ವಿಷಯದಲ್ಲಿ ರೈತ ಸಂಘಟನೆಗಳ ಜತೆ ಮುಕ್ತ ಚರ್ಚೆಗೆ ಸಿದ್ಧ. ರೈತರ ಅನುಕೂಲದ ದೃಷ್ಟಿಯಿಂದ ತಿದ್ದುಪಡಿ ಅಗತ್ಯವಿದ್ದರೆ ಅದನ್ನೂ ಮಾಡಲಾಗುವುದು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು