ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್‌ಡೌನ್: ಡಿ.ಕೆ. ಶಿವಕುಮಾರ್ ಆಕ್ರೋಶ

ಮೇಕೆದಾಟು ಪಾದಯಾತ್ರೆ ನಿಲ್ಲಲ್ಲ
Last Updated 5 ಜನವರಿ 2022, 6:54 IST
ಅಕ್ಷರ ಗಾತ್ರ

ಬೆಂಗಳೂರು: 'ಕರ್ಫ್ಯೂ ಹೆಸರಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಕಾರ್ಮಿಕರ, ಜನಸಾಮಾನ್ಯರ ಕೊಲೆ ಮಾಡುತ್ತಿದೆ. ಇದು ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್‌ಡೌನ್' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮೇಕೆದಾಟು ಪಾದಯಾತ್ರೆಗೆ ನಿರ್ಬಂಧವಿದೆ ಎಂದು ಹೇಳಲಾಗುತ್ತಿದೆ. ಆದರೆ ನಾವು ಯಾವುದೇ ಧರಣಿ, ಸಮಾವೇಶಗಳನ್ನು ಮಾಡುತ್ತಿಲ್ಲ, ನೀರಿಗಾಗಿ ನಡೆಯುತ್ತಿದ್ದೇವೆ. ಈ ನಮ್ಮ ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ’ ಎಂದು ಹೇಳಿದ್ದಾರೆ.

‘ಪ್ರತಿಭಟನೆ, ರ‍್ಯಾಲಿ ಮಾಡಬೇಡಿ ಅಂದಿದ್ದಾರೆ. ನಾವು ನೀರಿಗಾಗಿ ನಡೆಯುತ್ತೇವೆ. ನಮ್ಮದು ‘ವಾಕ್ ಫಾರ್ ವಾಟರ್’. ನೀರಿಗಾಗಿ ಪ್ರತಿಭಟನೆ ಮಾಡಲ್ಲ ಪ್ರಾರ್ಥನೆ ಮಾಡುತ್ತಿದ್ದೇವೆ’ ಎಂದರು.

‘ಈ ಹಿಂದೆ ಸುಧಾಕರ್, ಯಡಿಯೂರಪ್ಪ ಸೇರಿದಂತೆ ಅನೇಕ ಬಿಜೆಪಿ ನಾಯಕರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದರಲ್ಲಾ? ಅವರ ಮೇಲೆ ಏಕೆ ಕೇಸ್ ಆಗಿಲ್ಲ? ಎಂದು ಪ್ರಶ್ನಿಸಿದ ಅವರು ಬಿಜೆಪಿಯವರಿಗೆ ಜನರ ಪ್ರಾಣ ಮುಖ್ಯವಲ್ಲ, ಅವರಿಗೆ ಪಕ್ಷವೇ ಮುಖ್ಯ’ ಎಂದು ಕಿಡಿಕಾರಿದ್ದಾರೆ.

‘ಮೇಕೆದಾಟುವಿಗಾಗಿ ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ, ಅವರಿಗೆ ರಾಜ್ಯದಲ್ಲಿ ಯಾರೂ ನಡೆಯದಂತೆ ನೋಡಿಕೊಳ್ಳಲು ಆಗುತ್ತದಾ?’ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

‘ನಮ್ಮ ಶಾಸಕಾಂಗ ಪಕ್ಷದ ನಾಯಕರು ಈಗಾಗಲೇ ಪಾದಯಾತ್ರೆಯ ಬಗ್ಗೆ ಹೇಳಿದ್ದಾರೆ. ನಾನು ಶಾಸಕಾಂಗ ಪಕ್ಷದ ನಾಯಕರ ಜೊತೆ ಮಾತನಾಡುತ್ತೇನೆ. ಬೆಂಗಳೂರಿನ ಶಾಸಕರ ಜೊತೆಗೂ ಮಾತನಾಡುತ್ತೇನೆ’ ಎಂದರು.

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗುರುವಾರದಿಂದ ಎರಡು ವಾರಗಳ ಕಾಲ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಅಲ್ಲದೆ, ಪ್ರತಿಭಟನೆಗಳು, ರ‍್ಯಾಲಿಗಳು, ಜಾತ್ರೆ, ಉತ್ಸವಗಳು ಹೀಗೆ ಜನಜಂಗುಳಿಯ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ ಎಂದೂ ಸ್ಪಷ್ಟಪಡಿಸಿದೆ.

ಜನವರಿ 9 ರಿಂದ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT