ಗುರುವಾರ , ಮೇ 19, 2022
23 °C

ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಜೋರು ಮಳೆ: ಸಿಡಿಲು ಬಡಿದು ಐವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು:  ರಾಜ್ಯದಲ್ಲಿ ಶನಿವಾರ ವಿವಿಧೆಡೆ ಗುಡುಗು ಸಿಡಿಲು ಸಹಿತ ಮಳೆ ಸುರಿದಿದ್ದು,  ಸಿಡಿಲಿಗೆ ಐವರು ಮೃತಪಟ್ಟಿದ್ದಾರೆ.

ಶಿರಹಟ್ಟಿ ತಾಲ್ಲೂಕಿನ ಹರಿಪುರ ಹೊರವಲಯದಲ್ಲಿ ಮಾವಿನ ತೋಟ ಕಾಯುತ್ತಿದ್ದ ಮಾಬುಸಾಬ ದೊಡ್ಡಮನಿ (55) ಹಾಗೂ ದನ ಮೇಯಿಸಲು ಹೋಗಿದ್ದ ಹರಿಪುರದ ನಿವಾಸಿ ಮುರಗೇಶ ಹೊಸಮನಿ (40) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮುಂಡರಗಿ ತಾಲ್ಲೂಕಿನ ಡಂಬಳ ಹೋಬಳಿ ಹಳ್ಳಿಕೇರಿ ಗ್ರಾಮದ ‌ಹನುಮಪ್ಪ ಸಿದ್ದಪ ಮನ್ನಾಪುರ (22)  ವೆಂಕಟಾಪುರದಲ್ಲಿ ಕುರಿ ಮೇಯಿಸುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಖಾನಾಪುರ ತಾಲ್ಲೂಕಿನ ಬೆಟಗೇರಿ ಗ್ರಾಮದ ತಮ್ಮ ಹೊಲದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ  ಮನೀಷಾ ದತ್ತು ಗುರವ (40) ಸಾವನ್ನಪ್ಪಿದ್ದಾರೆ.

ತಾಲ್ಲೂಕಿನ ಮಂತುರ್ಗಾ ಗ್ರಾಮದ ರೈತ ವಿಷ್ಣು ಪೇಡಣೆಕರ ಅವರಿಗೆ ಸೇರಿದ ಎರಡು ಎಮ್ಮೆಗಳು ಗ್ರಾಮದ ಹೊರವಲಯದ ಜಮೀನಿನಲ್ಲಿ ಮೇಯುತ್ತಿದ್ದ ಸಂದರ್ಭದಲ್ಲಿ ಸಿಡಿಲಿಗೆ ಬಲಿಯಾಗಿವೆ. ಎರಡೂ ಘಟನೆಗಳ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ಹೊರಭಾಗದಲ್ಲಿ ಶನಿವಾರ ಸಂಜೆ ಸಿಡಿಲು ಬಡಿದು ಹಾನಗಲ್‌ ತಾಲ್ಲೂಕಿನ ಹಸನಾಬಾದಿ ಗ್ರಾಮದ ವೀರೇಶ ನೀಸಿಮಪ್ಪ ಹೊಸಮನಿ (25) ಸಾವನ್ನಪ್ಪಿದ್ದಾರೆ. ಇದೇ ಗ್ರಾಮದ ಶಶಿ ಮಾದೇವಪ್ಪ ಹೊಸಮನಿ ಮತ್ತು
ಹನುಮಂತಪ್ಪ ಹೊಸಮನಿ ಎಂಬುವರು ಗಾಯಗೊಂಡಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಕ್ಷ್ಮೇಶ್ವರ ತಾಲ್ಲೂಕಿನ ಸುತ್ತಮುತ್ತ ಆಲಿಕಲ್ಲು ಮಳೆ ಸುರಿಯಿತು. ಗದಗ ಬೆಟಗೇರಿ ಅವಳಿ ನಗರದಲ್ಲಿ ಗುಡುಗು ಸಹಿತ ತುಂತುರು ಮಳೆ ಸುರಿಯಿತು. 

ಬೆಳಗಾವಿ ಸೇರಿದಂತೆ ತಾಲ್ಲೂಕಿನಾದ್ಯಂತ ಶನಿವಾರ ತಾಸಿಗೂ ಹೆಚ್ಚು ಸಮಯ ಜೋರು ಗಾಳಿ, ಗುಡುಗು–ಸಿಡಿಲು ಸಹಿತ ಮಳೆಯಾಯಿತು. ಬೈಲಹೊಂಗದಲ್ಲಿ ಆಲಿಕಲ್ಲು ಮಳೆ ಬಿದ್ದಿತು. ಕಿತ್ತೂರು, ಸವದತ್ತಿಯಲ್ಲೂ ಸಾಧಾರಣ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಜೊಯಿಡಾದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಬನವಾಸಿ ಭಾಗದಲ್ಲಿ ಸಾಧಾರಣ ಮಳೆ ಸುರಿದಿದ್ದರೆ, ನಗರ ಮತ್ತು ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ರಭಸದ ಮಳೆ ಬಿದ್ದಿದೆ. ಯಾತ್ರಾ ಸ್ಥಳ ಮಂಜುಗುಣಿಯಲ್ಲಿ ವೆಂಕಟರಮಣ ದೇವರ ರಥೋತ್ಸವಕ್ಕೂ ಮಳೆ ಅಡ್ಡಿಪಡಿಸಿತು. ಹಾವೇರಿ ಜಿಲ್ಲೆಯಾದ್ಯಂತ ಭಾರಿ ಗಾಳಿಯಿಂದ ಕೂಡಿದ ಮಳೆ ಸುರಿಯಿತು.  ಹಾವೇರಿ–ಸವಣೂರು ಮುಖ್ಯ ರಸ್ತೆಯಲ್ಲಿ ಏಳೆಂಟು ಮರಗಳು ಉರುಳಿ ಬಿದ್ದಿವೆ. ಶಿಗ್ಗಾವಿ, ಬ್ಯಾಡಗಿ, ರಾಣೆಬೆನ್ನೂರು, ರಟ್ಟೀಹಳ್ಳಿಯಲ್ಲಿ ವಿವಿಧ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. 

ಶಿವಮೊಗ್ಗದಲ್ಲಿ ಜೋರು ಮಳೆ: ನಗರದಲ್ಲಿ ಶನಿವಾರ ಅರ್ಧ ಗಂಟೆ ಕಾಲ ಜೋರು ಗಾಳಿ, ಸಿಡಿಲು, ಗುಡುಗು ಸಹಿತ ಆಲಿಕಲ್ಲು ಮಳೆ ಸುರಿಯಿತು.

ಹೊಳೆಹೊನ್ನೂರು, ಭದ್ರಾವತಿ, ತೀರ್ಥಹಳ್ಳಿ, ರಿಪ್ಪನ್‌ಪೇಟೆ, ಆನವಟ್ಟಿ ಸುತ್ತ ಗುಡುಗು ಸಹಿತ ಮಳೆಯಾಗಿದೆ. ಗುಡುಗು, ಸಿಡಿಲಿಗೆ ಹಲವೆಡೆ ವಿದ್ಯುತ್‌ ಸ್ಥಗಿತವಾಗಿತ್ತು.

3,000 ಬಾಳೆಗಿಡ ಧರೆಗೆ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಸಮೀಪದ ಅರಸನಘಟ್ಟ ಗ್ರಾಮದಲ್ಲಿ ಶನಿವಾರ ಸುರಿದ ಬಿರುಗಾಳಿ ಸಹಿತ ಮಳೆಗೆ 3,000ಕ್ಕೂ ಹೆಚ್ಚು ಬಾಳೆಗಿಡಗಳು ನೆಲ ಕಚ್ಚಿದ್ದು, ಅಪಾರ ನಷ್ಟ ಉಂಟಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು