ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ವಿಚಾರವಾಗಿ ವಾಕ್‌ಸಮರ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ

Last Updated 16 ಫೆಬ್ರುವರಿ 2023, 4:10 IST
ಅಕ್ಷರ ಗಾತ್ರ

ಬಿಜೆಪಿ, ಕಾಂಗ್ರೆಸ್‌ ನಾಯಕರ ನಡುವೆ ವಾಕ್‌ಸಮರ ಜೋರಾಗಿದೆ. ‘ಟಿಪ್ಪುವನ್ನು ಪ್ರೀತಿಸುವವರು ಉಳಿಯಬಾರದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಹೇಳಿದ್ದರೆ, ‘ಟಿಪ್ಪುವನ್ನು ಮೇಲಕ್ಕೆ ಕಳುಹಿಸಿದಂತೆ ಸಿದ್ದರಾಮಯ್ಯ ಅವರನ್ನೂ ಕಳುಹಿಸಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ. ‘ನನ್ನನ್ನು ಟಿಪ್ಪುವಿನಂತೆ ಹೊಡೆಯಲು ಬಿಡುತ್ತೀರಾ’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಜನರನ್ನು ಪ್ರಶ್ನಿಸಿದ್ದಾರೆ.

ಟಿಪ್ಪುವನ್ನು ಪ್ರೀತಿಸುವವರು ಉಳಿಯಬಾರದು: ಕಟೀಲ್‌
ಕೊಪ್ಪಳ:
’ಆಂಜನೇಯನ ಪೂಣ್ಯಭೂಮಿಯಲ್ಲಿ ನಿಂತು ಹೇಳುವೆ. ಟಿಪ್ಪುವನ್ನು ಪ್ರೀತಿಸುವವರು ಈ ನೆಲದಲ್ಲಿ ಉಳಿಯಬಾರದು. ಹನುಮನ ಭಜನೆ ಮಾಡುವವರು ಇರಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೀಡಿದ ಹೇಳಿಕೆ ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ.

ಜಿಲ್ಲೆಯ ಕುಕನೂರಿನಲ್ಲಿ ಮಂಗಳವಾರ ನಡೆದ ಪೇಜ್‌ ಪ್ರಮುಖರ ವಿಜಯ ಸಂಕಲ್ಪ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಅವರು ‘ನಾವು ಆಂಜನೇಯನ ಭಕ್ತರು. ಆತನ ಅಭಿವೃದ್ಧಿ ಮಾಡುವವರು. ನಾವು ಟಿಪ್ಪು ಸಂತಾನದವರಲ್ಲ. ನೀವೆಲ್ಲ ಆಂಜನೇಯನ ಪೂಜೆ ಮಾಡುತ್ತೀರಾ? ಟಿಪ್ಪುವಿನ ಭಜನೆ ಮಾಡುತ್ತೀರಾ?’ ಎಂದು ಪ್ರಶ್ನಿಸಿದ್ದರು.

’ನೀವೆಲ್ಲರೂ ಆಂಜನೇಯನ ಭಜನೆ ಮಾಡುವವರು. ಹಾಗಿದ್ದರೆ ಟಿಪ್ಪುವಿನ ಭಜನೆ ಮಾಡುವವರನ್ನು ಕಾಡಿಗೆ ಓಡಿಸುತ್ತಿರೊ ಇಲ್ಲವೊ? ರಾಜ್ಯಕ್ಕೆ ಹನುಮನ ಭಕ್ತರು ಬೇಕಾ? ಟಿಪ್ಪು ಸಂತಾನ ಬೇಕಾ? ರಾಮನ ಭಕ್ತರು ಬೇಕಾ? ಎನ್ನುವುದನ್ನು ನೀವೇ ನಿರ್ಧಾರಮಾಡಿ. ಟಿಪ್ಪುವಿನ ಪ್ರೀತಿ ಮಾಡುವವರು ಈ ನೆಲದಲ್ಲಿ ಉಳಿಯಬಾರದು’ ಎಂದಿದ್ದರು.

ಟಿಪ್ಪು ಎಂದೊಡನೆ ಸಿದ್ದರಾಮಯ್ಯ ಬಂದುಬಿಡುತ್ತಾರೆ: ಅಶ್ವತ್ಥನಾರಾಯಣ
ಮಂಡ್ಯ:
‘ಟಿಪ್ಪು ಎಂದೊಡನೆ ಸಿದ್ದರಾಮಯ್ಯ ಬಂದುಬಿಡುತ್ತಾರೆ. ಉರೀಗೌಡ, ನಂಜೇಗೌಡ ಟಿಪ್ಪುವನ್ನು ಮೇಲಕ್ಕೆ ಕಳುಹಿಸಿದಂತೆ ಇವರನ್ನೂ ಕಳುಹಿಸಬೇಕು, ಹೊಡೆದು ಹಾಕಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತಾಲ್ಲೂಕಿನ ಸಾತನೂರು ಹೊರವಲಯದ ಕಂಬದ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ನಡೆದ ಬಿಜೆಪಿ ಮಹಾಶಕ್ತಿ ಕೇಂದ್ರದ ಸಭೆಯಲ್ಲಿ ಸಚಿವರು ಮಾತನಾಡಿದ್ದಾರೆ.

ಸಿದ್ದರಾಮಯ್ಯ ಅವರನ್ನು ಟಿಪ್ಪುವಿಗೆ ಹೋಲಿಸಿದ ಸಚಿವರು, ‘ಉರೀಗೌಡ, ನಂಜೇಗೌಡ ಟಿಪ್ಪುವನ್ನು ಏನು ಮಾಡಿದರು’ ಎಂದು ಪ್ರಶ್ನಿಸುವುದು, ಅದಕ್ಕೆ ಕಾರ್ಯಕರ್ತರು, ‘ಮೇಲಕ್ಕೆ ಕಳುಹಿಸಿದರು, ಹೊಡೆದು ಹಾಕಿದರು’ ಎಂದು ಉತ್ತರಿಸುವುದು ವಿಡಿಯೊದಲ್ಲಿದೆ. ‘ಅದೇ ರೀತಿ ಇವರನ್ನೂ ಹೊಡೆದು ಹಾಕಬೇಕು, ಮೇಲಕ್ಕೆ ಕಳುಹಿಸಬೇಕು’ ಎಂದು ಸಚಿವರು ಹೇಳಿದ್ದಾರೆ.

‘ಟಿಪ್ಪು ಬೇಕಾ, ಸಾವರ್ಕರ್‌ ಬೇಕಾ?’ ಎಂದೂ ಕೇಳಿದ್ದಾರೆ.

ನನ್ನನ್ನು ಹೊಡೆಯಲು ಬಿಡುತ್ತೀರಾ? –ಸಿದ್ದರಾಮಯ್ಯ
ಬಾಗಲಕೋಟೆ: ‘ನಾನು ಮನುಷ್ಯತ್ವ ಇರುವವನು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬುದ್ಧ ಸೇರಿದಂತೆ ಎಲ್ಲ ಧರ್ಮದವರನ್ನೂ ಪ್ರೀತಿಸುತ್ತೇನೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಜಿಲ್ಲೆಯ ಕಲಾದಗಿಯಲ್ಲಿ ಗುರುವಾರ ನಡೆದ ‘ಪ್ರಜಾಧ್ವನಿ’ ಯಾತ್ರೆಯ ಸಮಾವೇಶದ ಅಂತ್ಯದಲ್ಲಿ ಭಾವುಕರಾಗಿ ಮಾತನಾಡಿದ ಅವರು, ‘ಮಂಡ್ಯದಲ್ಲಿ ಸಚಿವ ಅಶ್ವತ್ಥ ನಾರಾಯಣ, ಸಿದ್ದರಾಮಯ್ಯನನ್ನು ಟಿಪ್ಪು ರೀತಿ ಹೊಡೆದು ಹಾಕಬೇಕು ಎಂದಿದ್ದಾರೆ. ನನ್ನನ್ನು ಹೊಡೆಯಲು ಬಿಡುತ್ತೀರಾ?’ ಎಂದು ಜನರನ್ನು ಪ್ರಶ್ನಿಸಿದರು.

‘ಇಲ್ಲ’ ಎಂಬ ಕೂಗು ಜನರಿಂದ ಮಾರ್ದನಿಸಿತು.

‘ಟಿಪ್ಪು ಸುಲ್ತಾನ್, ಸೇವಾಲಾಲ್‌, ಸಂಗೊಳ್ಳಿ ರಾಯಣ್ಣ, ಚನ್ನಮ್ಮ, ಬಸವಣ್ಣ ಸೇರಿದಂತೆ ಎಲ್ಲರನ್ನೂ ನಾನು ಗೌರವಿಸುತ್ತೇನೆ. ಬಸವಣ್ಣನವರ ಭಾವಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಿ ಹಾಕಬೇಕು ಎಂದು ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಆದೇಶ ಮಾಡಿದ್ದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT