ಭಾನುವಾರ, ಏಪ್ರಿಲ್ 11, 2021
32 °C
ಮಾಯವಾಗದ ಕೋವಿಡ್‌ ಎರಡನೇ ಅಲೆಯ ಆತಂಕ

ಚೇತರಿಕೆಯಲ್ಲಿ ಪ್ರವಾಸೋದ್ಯಮ: ದೇವಸ್ಥಾನಗಳಿಗೆ ಪ್ರವಾಸಿಗರ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೋವಿಡ್‌ ಲಾಕ್‌ಡೌನ್‌ ಹೇರಿದ ಮೇಲೆ, ವರ್ಷದಿಂದ ನಷ್ಟಕ್ಕೆ ಒಳಗಾಗಿದ್ದ ರಾಜ್ಯದ ಬಹುತೇಕ ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳು ಈಗ ಕಳೆಗಟ್ಟುತ್ತಿದ್ದು, ಚೇತರಿಕೆಯ ಹಾದಿಗೆ ಮರಳುತ್ತಿವೆ. ಪ್ರಮುಖ ಕ್ಷೇತ್ರಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹವಾಗಿ ಏರಿಕೆಯಾಗುತ್ತಿದೆ.‌

ಆದರೆ, ಹೊಟ್ಟೆಪಾಡಿಗೆ ಪ್ರವಾಸಿಗರನ್ನೇ ನಂಬಿಕೊಂಡಿರುವ ಟ್ಯಾಕ್ಸಿ, ಬೀದಿ ಬದಿ ಅಂಗಡಿಗಳು, ವಸತಿಗೃಹ, ಹೋಟೆಲ್‌ ಉದ್ಯಮಗಳ ವಹಿವಾಟು ಅಷ್ಟಾಗಿ ಪ್ರಗತಿ ಕಂಡಿಲ್ಲ. ಒಂದು ಕಡೆ  ಪ್ರವಾಸಿಗರು ಹಿಂದಿನಂತೆ ವೆಚ್ಚ ಮಾಡಲು ಹಿಂಜರಿಯುತ್ತಿದ್ದಾರೆ. ಇನ್ನೊಂದೆಡೆ, ಕೆಲವು ದಿನಗಳಿಂದ ಕೇಳಿಬರುತ್ತಿರುವ ಎರಡನೇ ಅಲೆಯ ಆತಂಕ ಪ್ರವಾಸೋದ್ಯಮ ಕ್ಷೇತ್ರವನ್ನು ಕಾಡುತ್ತಿದೆ.

ರಾಜ್ಯದಲ್ಲಿ ದೇಗುಲಗಳು ತೆರೆದು ಭಕ್ತರು ಬರುತ್ತಿದ್ದರೂ, ಹಿಂದೆ ಇದ್ದಷ್ಟು ವಹಿವಾಟುಗಳು ಕಾಣುತ್ತಿಲ್ಲ. ಪ್ರವಾಸಿಗರನ್ನು ನಂಬಿಕೊಂಡಿದ್ದ ಸಾವಿರಾರು ಮಂದಿ ವ್ಯಾಪಾರಿಗಳು ನಷ್ಟ ಅನುಭವಿಸಿ, ಜೀವನ ನಿರ್ವಹಣೆಗೆ ಬೇರೆ ಕೆಲಸಗಳ ಮೊರೆ ಹೋಗಿದ್ದಾರೆ. ರಾಜ್ಯದಲ್ಲಿ ಶೇಕಡ 30ರಷ್ಟು ಹೋಟೆಲ್‌ಗಳು ಬಾಗಿಲು ಮುಚ್ಚಿವೆ.

ಲಕ್ಷಾಂತರ ಜನರು ಸೇರುವ ಜಾತ್ರೆಗಳು, ಎರಡನೇ ಅಲೆಯ ಭಯದಿಂದ ರದ್ಡುಗೊಳ್ಳುತ್ತಿವೆ.  ಕೆಲವು ಜಾತ್ರೆಗಳಿಗೆ ಹೊರ ಜಿಲ್ಲೆಯವರಿಗೆ ನಿರ್ಬಂಧ ಹೇರಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಜಾತ್ರೆಗಳನ್ನೇ ನಂಬಿಕೊಂಡು ಬದುಕು ಸಾಗಿಸುವ ಕಲಾವಿದರ ಜೀವನ ದುರ್ಭರವಾಗಿದೆ.

‘ಚಾಮುಂಡಿ ಬೆಟ್ಟದಲ್ಲಿ 15 ವರ್ಷಗಳಿಂದ ಹಣ್ಣು– ಕಾಯಿ, ಹೂವು ಮಾರಾಟ ಮಾಡುತ್ತಿದ್ದೆ. ಕೋವಿಡ್‌ಗೂ ಮುನ್ನ ದಿನಕ್ಕೆ ಕನಿಷ್ಠ ₹ 250 ಲಾಭವಾಗುತ್ತಿತ್ತು. ಎರಡು ತಿಂಗಳಿನಿಂದ ಕೇವಲ₹ 150 ಸಿಗುತ್ತಿದೆ. ಕೆಲವೊಮ್ಮೆ ಮಾರಾಟವಾಗದೆ ವಾಪಸ್‌ ತೆಗೆದುಕೊಂಡು ಹೋಗಿದ್ದಿದೆ’ ಎಂದು ಸಮಸ್ಯೆ ಬಿಡಿಸಿಡುತ್ತಾರೆ ಬನ್ನೂರಿನ ಸಾವಿತ್ರಮ್ಮ.

ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಗಡಿಯಲ್ಲಿ ನಿರ್ಬಂಧಗಳನ್ನು ಹೇರಲಾಗಿದೆ.

ಆ ರಾಜ್ಯಗಳಿಂದ ಬರುವ ಪ್ರವಾಸಿಗರ ಸಂಖ್ಯೆಯೂ ಕಡಿಮೆ ಆಗುತ್ತಿದೆ.

ಬೆಳಗಾವಿ ಜಿಲ್ಲೆ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನವನ್ನು ಫೆ. 1ರಿಂದ ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಲಾಗಿತ್ತು. ಆದರೆ ಈಗ ಕೇವಲ 20 ದಿನಗಳಲ್ಲೇ ಮತ್ತೆ ನಿರ್ಬಂಧ ಹೇರಲಾಗಿದೆ. ಈಗಾಗಲೇ ಈ
ದೇಗುಲಕ್ಕೆ ₹13 ಕೋಟಿ ಆದಾಯ ಕೊರತೆಯಾಗಿದೆ. ವರಮಾನ ದೃಷ್ಟಿಯಿಂದ ಇತರ ಪ್ರಮುಖ ದೇಗುಲಗಳ ಕಥೆ ಭಿನ್ನವಾಗೇನೂ ಇಲ್ಲ. 2019ಕ್ಕೆ ಹೋಲಿಸಿದರೆ, ಕಳೆದ ವರ್ಷದ ಕೊನೆಯ ಮೂರು ತಿಂಗಳಲ್ಲಿ (ಲಾಕ್‌ಡೌನ್‌ ತೆರವಾಗಿದ್ದರೂ) ಸಂಗ್ರಹವಾಗಿರುವ ಕಾಣಿಕೆ ‍ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ!

ಇದರ ಜೊತೆಗೆ ತೈಲ ಬೆಲೆಯಲ್ಲಾದ ಹೆಚ್ಚಳವು ಪ್ರವಾಸಿ ಕ್ಷೇತ್ರದ ಭಾಗವೇ ಆಗಿರುವ ಟ್ಯಾಕ್ಸಿ– ಆಟೊ ಚಾಲಕರನ್ನು ಹೈರಾಣಾಗಿಸಿದೆ.

‘ಲಾಕ್‌ಡೌನ್‌ ಹಾಗೂ ಆ ನಂತರದ ದಿನಗಳಲ್ಲಿ ಬದುಕು ಸಾಗಿಸುವುದೇ ಕಷ್ಟಕರವಾಗಿತ್ತು. ಟ್ಯಾಕ್ಸಿ ಓಡಿಸದಿದ್ದರೂ ವಿಮೆ, ತೆರಿಗೆ ಪಾವತಿಸಲು ಹಾಗೂ ಸಾಲ ತೀರಿಸಲು ತರಕಾರಿ ವ್ಯಾಪಾರ, ಮರಗೆಲಸ, ಗಾರೆ ಕೆಲಸ ಮಾಡಿದೆವು. ಈಗ
ಅಲ್ಪಸ್ವಲ್ಪ ಬಾಡಿಗೆ ಬರುತ್ತಿದೆ. ಆದರೂ ಟ್ರಿಪ್‌ಗಳ ಸಂಖ್ಯೆ ಕಡಿಮೆಯಾಗಿದೆ’ ಎನ್ನುತ್ತಾರೆ ಮಡಿಕೇರಿಯ ಟ್ಯಾಕ್ಸಿ
ಚಾಲಕ ರವಿ.

ಮೈಸೂರಿನಂಥ, ಪ್ರವಾಸಿ ನಗರಿಯಲ್ಲಿ ಶೇ 50ರಷ್ಟು ಹೋಟೆಲ್‌ ಕೊಠಡಿಗಳು ಈಗಲೂ ಭರ್ತಿಯಾಗುತ್ತಿಲ್ಲ. ಪ್ರವಾಸಕ್ಕೆ ಬಂದವರು ಉಳಿಯದೇ ವಾಪಸ್ ಹೋಗುತ್ತಿದ್ದಾರೆ. ಹಲವು ಪ್ರವಾಸಿ ತಾಣಗಳಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ವಾರಾಂತ್ಯದಲ್ಲಿ ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಹೋಂ ಸ್ಟೇ, ರೆಸಾರ್ಟ್‌ಗಳು ಭರ್ತಿಯಾಗುತ್ತಿವೆ. ಕಡಲತೀರಗಳಿಗೆ ಜನ ಹೋಗುತ್ತಿದ್ದಾರೆ.

‘ಎರಡು ತಿಂಗಳಿನಿಂದ ಹೋಟೆಲ್‌ ಉದ್ಯಮದ ವಹಿವಾಟು ಪರವಾಗಿಲ್ಲ. ಮೊದಲಿನಂತೆ ಹಳಿಗೆ ಮರಳಲು ಸಮಯ ಬೇಕು’ ಎಂದು ಹೇಳುತ್ತಾರೆ ದಾವಣಗೆರೆ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಮೋತಿ ಆರ್‌.
ಪರಮೇಶ್ವರರಾವ್‌.

ವಿದೇಶಿಯರು ಕಾಣುತ್ತಿಲ್ಲ!

ವಿದೇಶಿ ಪ್ರವಾಸಿಗರು ಇನ್ನೂ ಕಾಣುತ್ತಿಲ್ಲ. ಮೈಸೂರಿಗೆ ಯೋಗಾಸನ ತರಗತಿ, ಶಿಬಿರಗಳಿಗೆಂದು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಅರಮನೆಗೆ ಭೇಟಿ ನೀಡುತ್ತಿದ್ದರು. ಕೋವಿಡ್‌ ಬಳಿಕ ಮೈಸೂರು ನಗರದಲ್ಲಿ ಅವರ ಓಡಾಟ ಇಲ್ಲವಾಗಿದೆ.

2020ರ ಜೂನ್‌ನಿಂದ ಇದುವರೆಗೆ ಅರಮನೆಗೆ ಕೇವಲ 366 ಮಂದಿ ವಿದೇಶಿಯರು ಭೇಟಿ ನೀಡಿದ್ದಾರೆ. 2019ರ ಏಪ್ರಿಲ್‌ನಿಂದ 2020ರ ಏಪ್ರಿಲ್‌ವರೆಗೆ 51 ಸಾವಿರ ಮಂದಿ ಬಂದಿದ್ದರು. ಇನ್ನು ಬೇಲೂರು, ಹಳೇಬೀಡು, ಹಂಪಿಯಲ್ಲೂ ಹೆಚ್ಚಾಗಿ ಕಾಣಿಸುತ್ತಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು