ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ವರ್ಗಾವಣೆ: ಹೊಸ ಅಧಿಸೂಚನೆ ಶೀಘ್ರ

Last Updated 26 ಜೂನ್ 2021, 20:41 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಾಲಯದಲ್ಲಿ ತಕರಾರು ಇದ್ದ ಕಾರಣಕ್ಕೆ ಅಧಿಸೂಚನೆ ಹಂತದಲ್ಲಿಯೇ ಸ್ಥಗಿತಗೊಂಡಿದ್ದ 2020–21ನೇ ಸಾಲಿನ ವರ್ಗಾವಣೆಯನ್ನು ‘ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ಕಾಯ್ದೆ’ಗೆ ಅನುಗುಣವಾಗಿ ಮತ್ತೆ ಆರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. 2–3 ದಿನಗಳಲ್ಲಿ ಹೊಸ ಅಧಿಸೂಚನೆ ಪ್ರಕಟವಾಗಲಿದೆ.

ಅಧಿಸೂಚನೆಯ ಕರಡು ಸಿದ್ಧವಾಗಿದ್ದು, ಶಿಕ್ಷಣ ಸಚಿವರ ಅನುಮೋದನೆ ಬಾಕಿ ಇದೆ. ಅಧಿಸೂಚನೆ ಪ್ರಕಟಗೊಂಡ ದಿನದಿಂದ ವರ್ಗಾವಣೆಯ ಪ್ರಕ್ರಿಯೆಗಳು ಆರಂಭವಾಗಲಿದೆ. ಹೊಸ ಅಧಿಸೂಚನೆಯಲ್ಲಿ ವರ್ಗಾವಣೆ ಕೋರಿ ಹೊಸತಾಗಿ ಅರ್ಜಿ ಸಲ್ಲಿಸಲು ಮತ್ತು ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ವರ್ಗಾವಣೆ ಬಯಸಿದ ಸ್ಥಳವನ್ನು ಬದಲಿಸಲು ಅವಕಾಶ ಸಿಗಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಕಾಯ್ದೆ ತಿದ್ದುಪಡಿ ಮೂಲಕ, 2019–20ನೇ ಸಾಲಿನಲ್ಲಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆಗೆ ಒಳಗಾಗಿ ತೊಂದರೆ ಅನುಭವಿಸುತ್ತಿರುವ ಶಿಕ್ಷಕರಿಗೆ ವಿಶೇಷ ಕೌನ್ಸೆಲಿಂಗ್‌ ಮೂಲಕ ಒಂದು ಬಾರಿ ವರ್ಗಾವಣೆಗೆ ಅಧಿಸೂಚನೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ವರ್ಗಾವಣೆ ಕಾಯ್ದೆಯಲ್ಲಿ ಈ ಅಂಶ ಇಲ್ಲದಿದ್ದರೂ ಹಳೆ ಅಧಿಸೂಚನೆಯಲ್ಲಿ (2020 ನ. 11) ಅವಕಾಶ ಮಾಡಿಕೊಟ್ಟ ಕಾರಣಕ್ಕೆ ಅದನ್ನು ಪ್ರಶ್ನಿಸಿ ಕೆಲವರು ಕೆಎಟಿ ಮೆಟ್ಟಿಲೇರಿದ್ದರು.

ಅರ್ಜಿದಾರರ ವಾದವನ್ನು ಕೆಎಟಿ ಎತ್ತಿಹಿಡಿದಿತ್ತು. ಅದನ್ನು ಪ್ರಶ್ನಿಸಿ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಜಾ ಮಾಡಿತ್ತು. ಹೀಗಾಗಿ, ಸುಗ್ರೀವಾಜ್ಞೆ ಮೂಲಕ ಕಾಯ್ದೆಗೇ ತಿದ್ದುಪಡಿ ತರಲಾಗಿತ್ತು.

ಹಳೆ ಅಧಿಸೂಚನೆಯಲ್ಲಿರುವ ಅಂಶಗಳ ಜೊತೆಗೆ ಹೊಸ ಅಧಿಸೂಚನೆಯಲ್ಲಿರುವ ನಿಯಮಗಳಿಗೆ ಅನುಗುಣವಾಗಿ ಶಿಕ್ಷಕರು ವರ್ಗಾವಣೆಗೆ ಅರ್ಹತೆ ಪಡೆಯಲಿದ್ದಾರೆ. ಹಳೆ ಅಧಿಸೂಚನೆಯ ಬಳಿಕ ಕೆಲವರು ನಿವೃತ್ತರಾಗಿದ್ದು, ಇನ್ನೂ ಕೆಲವರು ಅನರ್ಹರಾಗುವ ಸಾಧ್ಯತೆಗಳಿವೆ. ಒಂದು ವರ್ಷದ ಮಗು ಇದೆ ಎಂಬ ಕಾರಣಕ್ಕೆ ಹಿಂದೆ ವರ್ಗಾವಣೆಗೆ ಅರ್ಜಿ ಸಲ್ಲಿಸಿದವರು ಈಗ ಅನರ್ಹರಾಗಬಹುದು.ವಿಶೇಷ ಕೌನ್ಸೆಲಿಂಗ್‌ಗೆ ಲಭ್ಯವಿರುವ ಖಾಲಿ ಹುದ್ದೆಗಳ ಪಟ್ಟಿ ಪ್ರಕಟಿಸಿದ ಬಳಿಕ, ಅದಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ. ಬಳಿಕ 2019–20ರಲ್ಲಿನ ಕೌನ್ಸೆಲಿಂಗ್‌ ಕ್ರಮಾಂಕ ಪರಿಗಣಿಸಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ, ಆಕ್ಷೇಪಣೆ ಆಹ್ವಾನಿಸಿ ವರ್ಗಾವಣೆ ಅಂತಿಮಗೊಳಿಸಲಾಗುವುದು ಎಂದೂ ಇಲಾಖೆಯ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT