ಶನಿವಾರ, ಏಪ್ರಿಲ್ 1, 2023
31 °C
ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿಕೆ

ಸೆಪ್ಟೆಂಬರ್‌ನಲ್ಲಿ ಸಾರಿಗೆ ಇಲಾಖೆಗೆ ₹ 2,787 ಕೋಟಿ ತೆರಿಗೆ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ರಾಜ್ಯ ಸಾರಿಗೆ ಇಲಾಖೆಯ ತೆರಿಗೆ ಸಂಗ್ರಹ ಸೆಪ್ಟೆಂಬರ್‌ ಅಂತ್ಯಕ್ಕೆ ₹ 2,787 ಕೋಟಿ ತಲುಪಿದೆ. ಕೋವಿಡ್‌ ಕಾರಣಕ್ಕೆ ತೆರಿಗೆ ಸಂಗ್ರಹದಲ್ಲಿ ಹಿನ್ನಡೆ ಉಂಟಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ 2.75 ಕೋಟಿ ವಾಹನಗಳಿವೆ. ಬೆಂಗಳೂರಿನಲ್ಲೇ ಒಂದು ಕೋಟಿಗೂ ಅಧಿಕ ವಾಹನಗಳಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹ 7,500 ಕೋಟಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿಲ್ಲ’ ಎಂದು ಹೇಳಿದರು.

‘ಸಾರಿಗೆ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯಡೆಗೆ ಕೊಂಡೊಯ್ಯುವ ಕೆಲಸ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತದಲ್ಲಿ ಸುಧಾರಣೆ ತರುವ ಪ್ರಯತ್ನಗಳು ನಡೆಯುತ್ತಿವೆ. ಸಾರಿಗೆ ಇಲಾಖೆ ಕೂಡ ಪರಿವರ್ತನೆ ಆಗುತ್ತಿದೆ. ರಾಜ್ಯದ 30 ಕಾಗದ ರಹಿತ ಕಚೇರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ್ದಾರೆ’ ಎಂದರು.

‘ವಾಹನ ನೋಂದಣಿ, ನವೀಕರಣ, ಚಾಲನಾ ಪರವಾನಗಿಗೆ ಸಾವಿರಾರು ಜನರು ನಿತ್ಯ ಆರ್‌ಟಿಒ ಕಚೇರಿಗೆ ಅಲೆದಾಡುತ್ತಿದ್ದರು. ಇನ್ನು ಮುಂದೆ ಮನೆಯಲ್ಲೇ ಕುಳಿತು ಈ ಸೇವೆಗಳನ್ನು ಪಡೆಯಬಹುದಾಗಿದೆ. ಆರ್‌ಟಿಒ ಕಚೇರಿಗೆ ಅಲೆಯುವ ತಾಪತ್ರಯ ತಪ್ಪಲಿದೆ. ಇ–ಆಡಳಿತ ಅನುಷ್ಠಾನಗೊಂಡಿದ್ದು ಕುಳಿತಲ್ಲೇ ಆನ್‌ಲೈನ್‌ ಮೂಲಕ ಸೇವೆ ಪಡೆಯಬಹುದಾಗಿದೆ’ ಎಂದು ವಿವರಿಸಿದರು.

ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಇದ್ದರು.

‘15,700 ಜನರಿಗೆ ಹಕ್ಕುಪತ್ರ’

ಅರಣ್ಯದಲ್ಲಿ ವಾಸಿಸುತ್ತಿರುವ ರಾಜ್ಯದ 15,700 ಅರ್ಹರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಈ ಸೇವೆಯನ್ನು ಇನ್ನಷ್ಟು ತ್ವರಿತಗೊಳಿಸಲು ಪ್ರಯತ್ನಿಸಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಸಚಿವರೂ ಆಗಿರುವ ಬಿ.ಶ್ರೀರಾಮುಲು ಆಶ್ವಾಸನೆ ನೀಡಿದರು.

‘ದಟ್ಟ ಅರಣ್ಯದ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಕೆಲ ತೊಡಕುಗಳು ಎದುರಾಗಿದ್ದವು. ಹೀಗಾಗಿ, ಈ ಪ್ರಕ್ರಿಯೆ ಕೊಂಚ ವಿಳಂಬ ಆಗುತ್ತಿದೆ. ಈ ಬಗ್ಗೆ ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆ ನಡೆದಿದೆ. ಅರ್ಹರಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ‘ಅರಣ್ಯ ಹಕ್ಕು ಕಾಯ್ದೆಯ ಬಗ್ಗೆ ಜನರಲ್ಲಿ ತಿಳಿವಳಿಕೆ ಇಲ್ಲ. ಮಾಹಿತಿಯ ಕೊರತೆಯಿಂದ ಸಮಸ್ಯೆ ಉಂಟಾಗುತ್ತಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂತಹ ಅರ್ಜಿಗಳ ವಿಲೇವಾರಿಗೆ ಒತ್ತು ನೀಡಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು