ಬುಧವಾರ, ಆಗಸ್ಟ್ 17, 2022
25 °C

ಸಂಧಾನ ಸಫಲ: ಸಾರಿಗೆ ನೌಕರರ ಮುಷ್ಕರ ವಾಪಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಐದು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಸೋಮವಾರ ಸಂಜೆ ವಾಪಸ್‌ ಪಡೆದರು. ಇಡೀ ದಿನ ಹಲವು ನಾಟಕೀಯ ಬೆಳವಣಿಗೆಗಳು ನಡೆದು, ಭಾನುವಾರದ ಸಂಧಾನ ಸಭೆಯ ನಡಾವಳಿಗಳಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಸಾರಿಗೆ ನೌಕರರ ಹೋರಾಟಕ್ಕೆ ತೆರೆಬಿದ್ದಿತು.

ಸಾರಿಗೆ ನಿಗಮಗಳ ನೌಕರರ ಹತ್ತು ಬೇಡಿಕೆಗಳ ಪೈಕಿ ಒಂಬತ್ತನ್ನು ಕೆಲವು ಷರತ್ತುಗಳೊಂದಿಗೆ ಒಪ್ಪಿಕೊಳ್ಳಲು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಭಾನುವಾರ ನಡೆದ ಸಂಧಾನ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ತಮ್ಮನ್ನೂ ಸರ್ಕಾರಿ ನೌಕರರು ಎಂದು ಪರಿಗಣಿಸಬೇಕೆಂಬ ಬೇಡಿಕೆಯಿಂದ ಸಾರಿಗೆ ನೌಕರರು ಹಿಂದೆ ಸರಿಯದ್ದರಿಂದ ಮಾತುಕತೆ ವಿಫಲವಾಗಿತ್ತು. ಸರ್ಕಾರದ ಎಡೆಬಿಡದ ಕಸರತ್ತುಗಳ ನಡುವೆಯೂ ಸಾರಿಗೆ ನಿಗಮಗಳ ಶೇಕಡ 10ಕ್ಕಿಂತ ಕಡಿಮೆ ನೌಕರರು ಸೋಮವಾರ ಕೆಲಸಕ್ಕೆ ಹಾಜರಾಗಿದ್ದರು.

ಬೆಳಿಗ್ಗೆ 11 ಗಂಟೆಗೆ ಸಭೆ ನಡೆಸಿ ಹೋರಾಟದ ಮುಂದಿನ ಹೆಜ್ಜೆ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ಮುಷ್ಕರದ ನೇತೃತ್ವ ವಹಿಸಿದ್ದ ಸಾರಿಗೆ ನೌಕರರ ಕೂಟದ ಮುಖಂಡರು ಹೇಳಿದ್ದರು. ಆದರೆ, ಪದಾಧಿಕಾರಿಗಳು ಮಧ್ಯಾಹ್ನ 12 ಗಂಟೆಗೆ ಸಭೆ ಸೇರಿದರು. ‘ಭಾನುವಾರದ ಸಂಧಾನ ಸಭೆಯ ನಡಾವಳಿಗಳನ್ನು ಸಚಿವರೇ ಮುಷ್ಕರದ ಸ್ಥಳಕ್ಕೆ ಬಂದು ಲಿಖಿತವಾಗಿ ನೀಡಬೇಕು’ ಎಂದು ಹೋರಾಟದ ನೇತೃತ್ವ ವಹಿಸಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಬೇಡಿಕೆ ಇಟ್ಟರು.

ನಂದೀಶ್‌ ರೆಡ್ಡಿ ಭೇಟಿ: ಮುಖ್ಯಮಂತ್ರಿಯವರ ಗೃಹ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಲಕ್ಷ್ಮಣ ಸವದಿ, ಸಚಿವರಾದ ಆರ್‌. ಅಶೋಕ, ಬಸವರಾಜ ಬೊಮ್ಮಾಯಿ ಹೋರಾಟಗಾರರ ಬೇಡಿಕೆ ಕುರಿತು ಸಮಾಲೋಚನೆ ನಡೆಸಿದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಧ್ಯಕ್ಷ ಎನ್‌.ಎಸ್‌. ನಂದೀಶ್‌ ರೆಡ್ಡಿ ಬಳಿ ನಡಾವಳಿಯ ಲಿಖಿತ ಪ್ರತಿಯನ್ನು ಕಳುಹಿಸಿಕೊಟ್ಟರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್‌. ವಿಶ್ವನಾಥ್‌ ಮತ್ತು ಶಾಸಕ ರಾಜುಗೌಡ ಕೂಡ ಜತೆಯಾದರು.

‘ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿಕೊಂಡು ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಕ್ರಮ ಜರುಗಿಸುವುದು’ ಎಂಬ ತೀರ್ಮಾನಕ್ಕೆ ನೌಕರರು ಆಕ್ಷೇಪ ಎತ್ತಿದರು. ಸಚಿವರೇ ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದರು. ಬಳಿಕ ಕೋಡಿಹಳ್ಳಿ ಚಂದ್ರಶೇಖರ್‌ ದೂರವಾಣಿ ಮೂಲಕ ನಂದೀಶ್‌ ರೆಡ್ಡಿ ಜತೆ ಚರ್ಚೆ ನಡೆಸಿದರು. ‘ಕಾನ್ಫರೆನ್ಸ್‌ ಕಾಲ್‌’ನಲ್ಲಿ  ಸವದಿ ಅವರೊಂದಿಗೂ ಮಾತುಕತೆ ನಡೆಯಿತು. ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸುವ ಭರವಸೆಯೂ ದೊರೆಯಿತು.

ಸಚಿವರ ಜತೆ ಮಾತುಕತೆ ಮುಗಿಸಿ ಬಂದ ಕೋಡಿಹಳ್ಳಿ ಚಂದ್ರಶೇಖರ್‌, ಮುಷ್ಕರ ವಾಪಸ್‌ ಪಡೆಯುವ ನಿರ್ಧಾರ ಪ್ರಕಟಿಸಲು ಮುಂದಾದರು. ಆದರೆ, ನೌಕರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್‌ ಸೇರಿದಂತೆ ಹೋರಾಟದ ನಾಯಕತ್ವ ವಹಿಸಿದವರ ವಿರುದ್ಧ ಹರಿಹಾಯ್ದರು. ಕೆಲವರು ಕೆಟ್ಟ ಶಬ್ದಗಳನ್ನೂ ಪ್ರಯೋಗಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ನೌಕರರ ಮನವೊಲಿಸಿದ ಕೋಡಿಹಳ್ಳಿ ಚಂದ್ರಶೇಖರ್‌, ಸಂಜೆ 4.10ಕ್ಕೆ ಮುಷ್ಕರ ವಾಪಸ್‌ ಪಡೆಯುವ ನಿರ್ಧಾರ ಪ್ರಕಟಿಸಿದರು.

ಕೋಡಿಹಳ್ಳಿ ವಿರುದ್ಧ ಹರಿಹಾಯ್ದ ಸಚಿವರು
ಮುಷ್ಕರದ ನೇತೃತ್ವ ವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್‌ ವಿರುದ್ಧ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಆರ್‌. ಅಶೋಕ, ಬಸವರಾಜ ಬೊಮ್ಮಾಯಿ ಸೋಮವಾರವೂ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವರು, ‘ಒಬ್ಬ ವ್ಯಕ್ತಿ ಪ್ರತಿಷ್ಠೆಗಾಗಿ ಹೋರಾಟವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

ನಂದೀಶ್‌ ರೆಡ್ಡಿ ಸತತ ಪ್ರಯತ್ನ
ಬಿಎಂಟಿಸಿ ಅಧ್ಯಕ್ಷ ನಂದೀಶ್‌ ರೆಡ್ಡಿ ಅವರು ಮುಷ್ಕರ ನಿರತ ಕಾರ್ಮಿಕರ ಮುಖಂಡರ ಮನವೊಲಿಸಿ ಪ್ರತಿಭಟನೆ ಕೊನೆಗೊಳಿಸುವ ಪ್ರಯತ್ನದಲ್ಲಿ ಸಂಪರ್ಕದ ಕೊಂಡಿಯಂತೆ ಕೆಲಸ ಮಾಡಿದರು. ಭಾನುವಾರದ ಸಂಧಾನ ಸಭೆಗೆ ಕಾರ್ಮಿಕ ಮುಖಂಡರನ್ನು ಕರೆತರುವ ಕೆಲಸದಲ್ಲೂ ಸಕ್ರಿಯರಾಗಿದ್ದರು. ಸೋಮವಾರ ಅಂತಿಮ ಹಂತದಲ್ಲಿ ನೌಕರರ ಮನವೊಲಿಕೆಯಲ್ಲೂ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದರು.

ಅಂದಾಜು ₹ 28 ಕೋಟಿ ನಷ್ಟ
ಬೆಂಗಳೂರು:
ನೌಕರರು ಐದು ದಿನಗಳು ನಡೆಸಿದ ಮುಷ್ಕರದಿಂದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ₹ 28 ಕೋಟಿಯಷ್ಟು ನಷ್ಟ ಉಂಟಾಗಿರಬಹುದು ಎಂದು ಸಾರಿಗೆ ಇಲಾಖೆ ಅಂದಾಜಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ನಿಗಮ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಹುತೇಕ ಬಸ್‌ಗಳು ಐದು ದಿನಗಳು ಕಾಲ ಸಂಚರಿಸಿಲ್ಲ. ಇದರಿಂದ ₹ 70 ಕೋಟಿಯಿಂದ ₹ 75 ಕೋಟಿಯಷ್ಟು ವಹಿವಾಟು ಕುಗ್ಗಿದೆ. ಪರಿಣಾಮವಾಗಿ ಸಾರಿಗೆ ನಿಗಮಗಳ ನಿವ್ವಳ ಲಾಭಾಂಶದಲ್ಲೂ ಇಳಿಕೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು