ಭಾನುವಾರ, ಜುಲೈ 3, 2022
26 °C
ಕೇರಳ, ಪಶ್ಚಿಮ ಬಂಗಾಳ, ಹರಿಯಾಣದಲ್ಲಿ ಕಾವು ಜೋರು

ಎರಡು ದಿನಗಳ ಮುಷ್ಕರ: ವಿವಿಧೆಡೆ ಸಾರಿಗೆ ಸೇವೆ ಭಾಗಶಃ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ  ಎರಡು ದಿನಗಳ ದೇಶವ್ಯಾಪಿ ಮುಷ್ಕರ ಸೋಮವಾರ ಆರಂಭವಾಗಿದ್ದು, ಮೊದಲ ದಿನ ದೇಶದ ವಿವಿಧೆಡೆ ಬ್ಯಾಂಕಿಂಗ್‌ ಮತ್ತು ಸಾರಿಗೆ ಸೇವೆಗಳು ಭಾಗಶಃ ಸ್ಥಗಿತಗೊಂಡಿದ್ದವು.

ಮುಷ್ಕರಕ್ಕೆ ಕರೆ ನೀಡಿರುವ ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್‌, ಸಿಐಟಿಯು, ಎಐಯು
ಟಿಯುಸಿ, ಟಿಯುಸಿಸಿ, ಎಸ್‌ಇಡಬ್ಲ್ಯುಎ, ಎಐಸಿಸಿಟಿಯು, ಎಲ್‌ಪಿಎಫ್‌ ಮತ್ತು ಯುಟಿಯುಸಿ ಸಂಘಟನೆಗಳು, ದೇಶದಾದ್ಯಂತ 20 ಕೋಟಿಗೂ ಹೆಚ್ಚು  ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿಕೊಂಡಿವೆ.

ಕೇರಳ, ಪಶ್ಚಿಮ ಬಂಗಾಳ, ಹರಿಯಾಣದಲ್ಲಿ ಮುಷ್ಕರದ ಕಾವು ಜೋರಾಗಿದ್ದು, ಅದರ ಪರಿಣಾಮ ಬ್ಯಾಂಕಿಂಗ್‌ ಮತ್ತು ಸಾರ್ವಜನಿಕ ಸಾರಿಗೆ ಸೇವೆ ಬಹುತೇಕ ಸ್ತಬ್ಧಗೊಂಡಿದ್ದವು. ಇದರಿಂದ ಜನರು ಪರದಾಡುವಂತಾಯಿತು. ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನಕಾರರು ರಸ್ತೆಗಳನ್ನು ತಡೆದು, ರೈಲುಗಳ ಸಂಚಾರ ಸ್ಥಗಿತಗೊಳಿಸಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ದೆಹಲಿ, ತೆಲಂಗಾಣ, ಕರ್ನಾಟಕ, ಗುಜರಾತ್ ಮತ್ತು ಹರಿಯಾಣ ಸೇರಿದಂತೆ ಹಲವಾರು ರಾಜ್ಯಗಳಲ್ಲಿನ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ದೇಶದಾದ್ಯಂತ ವಿದ್ಯುತ್‌ ವಲಯದ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿ ಪ್ರತಿಭಟಿಸಿದರು. ಮಹಾರಾಷ್ಟ್ರದಲ್ಲಿ ಸರ್ಕಾರ ‘ಎಸ್ಮಾ’ ಜಾರಿಗೊಳಿಸಿದ್ದರೂ ವಿದ್ಯುತ್‌ ವಲಯದ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು. ತಮಿಳುನಾಡಿನಲ್ಲಿ ಹೆಚ್ಚಿನ ಸಂಖ್ಯೆಯ ನೌಕರರು ಕೇಂದ್ರ ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು