ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಕಾಲುವೆ ಜಾಗದಲ್ಲಿ ಸಚಿವ ಆನಂದ್‌ ಸಿಂಗ್‌ ಮನೆ

ತುಂಗಭದ್ರಾ ಜಲಾಶಯದ ರಾಯ ಕಾಲುವೆಯ ತೂಬು, ‘ಎಸ್ಕೇಪ್‌ ಗೇಟ್‌’ ಸಂಪೂರ್ಣ ನಿಷ್ಕ್ರಿಯ
Last Updated 21 ಅಕ್ಟೋಬರ್ 2021, 21:35 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯದ ರಾಯ (ಸಣ್ಣ) ಉಪಕಾಲುವೆಯಜಾಗದಲ್ಲಿ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಸಚಿವ ಆನಂದ್‌ ಸಿಂಗ್‌ ಅವರು ಭವ್ಯ ಬಂಗಲೆ ನಿರ್ಮಿಸಿದರೆ, ಒಳಚರಂಡಿ ಮೇಲೆ ಅವರ ಆಪ್ತರು ಲೇಔಟ್‌ ನಿರ್ಮಿಸಿರುವ ವಿಷಯ ಪತ್ತೆಯಾಗಿದೆ.

ಸರ್ವೇ ನಂಬರ್‌ 63ರಲ್ಲಿ ತುಂಗಭದ್ರಾ ನೀರಾವರಿ ನಿಗಮಕ್ಕೆ ಸೇರಿದ 0.30 ಎಕರೆ ಜಾಗ ಇದೆ. ಅದರ ಮೇಲೆ ಸಚಿವರು ಬಂಗ್ಲೆ, ರಸ್ತೆ ನಿರ್ಮಿಸಿದ್ದಾರೆ.ಅಷ್ಟೇ ಅಲ್ಲ,ತಾಲ್ಲೂಕಿನ 88–ಮುದ್ಲಾಪುರ ಗ್ರಾಮದ ಸರ್ವೇ ನಂಬರ್‌ 83ರಲ್ಲಿನ ಮುಖ್ಯ ಒಳಚರಂಡಿ ಮೇಲೆ ಆನಂದ್‌ ಸಿಂಗ್‌ ಆಪ್ತರಿಗೆ ಸೇರಿದ ಸುರಕ್ಷಾ ಎಂಟರ್‌ಪ್ರೈಸೆಸ್‌ನವರು ಲೇಔಟ್‌ ಮಾಡಿ, ನಿವೇಶನಗಳನ್ನು ನಿರ್ಮಿಸಿದ್ದಾರೆ. ಜತೆಗೆ, ಸರ್ವೇ ನಂಬರ್‌ 69ರಲ್ಲಿ ಸರ್ಕಾರಕ್ಕೆ ಸೇರಿದ 0.3 ಎಕರೆ, 0.1 ಎಕರೆ ಖಾಸಗಿ ವ್ಯಕ್ತಿಯ ಆಸ್ತಿ ಅತಿಕ್ರಮಿಸಿ ಅದನ್ನು ಲೇಔಟ್‌ ಒಳಗೆ ಸೇರಿಸಿದ್ದಾರೆ. ಹೀಗೆ ಮಾಡುವಾಗ ಭೂ ಪರಿವರ್ತನೆ, ಕ್ರಯ ಪತ್ರವಾಗಿಲ್ಲ ಎಂಬ ಆರೋಪ ಇದೆ. ಈ ಕುರಿತ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಕಾಲುವೆ ತುಂಬಿ ಹರಿಯುವಾಗ ಭಾರಿ ಮಳೆಯಾಗಿ ಪ್ರವಾಹ ಬಂದರೆ ಹೆಚ್ಚುವರಿ ನೀರು ಹೊರಹಾಕಲು ರಾಯ ಕಾಲುವೆಯ ಮೂರು ಕಡೆ ‘ಎಸ್ಕೇಪ್‌ ಗೇಟ್‌’, ತೂಬುಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಅಲ್ಲಿ ಪೈಪ್‌ಲೈನ್‌ ಮಾಡಿ, ನಿವೇಶನಗಳನ್ನು ನಿರ್ಮಿಸಲಾಗಿದೆ. ಆದರೆ, ದಾಖಲೆಗಳಲ್ಲಿ ಕಾಲುವೆ ಇದೆ ಎಂದು ತೋರಿಸಲಾಗಿದೆ. ತುಂಗಭದ್ರಾ ನೀರಾವರಿ ಇಲಾಖೆಯಿಂದ ಅನುಮತಿ ಪಡೆಯದೇ ನಗರಾಭಿವೃದ್ಧಿ ಪ್ರಾಧಿಕಾರವು ಲೇಔಟ್‌ಗೆ ಅನುಮೋದನೆ ನೀಡಿದೆ.

ಕಾಲುವೆಯ ದಿಕ್ಕು ಬದಲಿಸಿರುವುದರಿಂದ ಸ್ವಲ್ಪ ಮಳೆಯಾದರೂ ಹಂಪಿ ರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಲ್ಲುತ್ತಿದೆ. ಇನ್ನು, ಸರ್ವೇ ನಂಬರ್‌ 83ರಲ್ಲಿ ನಗರದ ಮುಖ್ಯ ಒಳಚರಂಡಿ ಹಾದು ಹೋಗಿದೆ. ಅದರ ಮೇಲೆಯೇ ನಿವೇಶನ ನಿರ್ಮಿಸಿರುವುದರಿಂದ ಅದಕ್ಕೂ ಕುತ್ತು ಬಂದಿದೆ.

2007–08ರಲ್ಲಿ ಸಚಿವರಿಂದ ಖರೀದಿ:

2007–08ರಲ್ಲಿ ಸಚಿವ ಆನಂದ್‌ ಸಿಂಗ್‌, ಅವರ ತಂದೆ, ತಾಯಿ, ಪತ್ನಿ, ಭಾಮೈದನ ಹೆಸರಿನಲ್ಲಿ ಸರ್ವೇ ನಂಬರ್‌ 65, 66, 67, 68, 69, 71, 72, 73, 74, 75, 78ರಲ್ಲಿ ಒಟ್ಟು 25 ಎಕರೆ ಜಾಗ ಖರೀದಿಸಲಾಗಿದೆ. ಬಳಿಕ ಅಲ್ಲಿ ಲೇಔಟ್‌ ನಿರ್ಮಾಣಕ್ಕೆ ಸುರಕ್ಷಾಎಂಟರ್‌ಪ್ರೈಸೆಸ್‌ಗೆ ಭೂಮಿಯನ್ನು ಹಸ್ತಾಂತರಿಸಿದ್ದರು. ಈಗ ಅಲ್ಲಿ ಲೇಔಟ್‌ ಮಾಡಿ, ನಿವೇಶನಗಳನ್ನು ನಿರ್ಮಿಸಲಾಗಿದೆ.

ಮನೆ, ಲೇಔಟ್‌ ನಿರ್ಮಿಸಿದ ಸಂದರ್ಭದಲ್ಲಿ ಅತಿಕ್ರಮಿಸಿರುವ ಸರ್ಕಾರಿ ಜಾಗವನ್ನು ಇದುವರೆಗೆ ನೋಂದಣಿ ಮಾಡಿಕೊಂಡಿಲ್ಲ. ಈಗಲೂ ಪಹಣಿಯಲ್ಲಿ ಸರ್ಕಾರಕ್ಕೆ ಸೇರಿದ ಜಾಗ ಎಂದಿದೆ.

‘ಕಾಲುವೆ, ಒಳಚರಂಡಿಯ ಜಾಗ ಸರ್ಕಾರಕ್ಕೆ ಸೇರಿದೆ. ಒಂದು ವೇಳೆ ಆ ಜಾಗ ಬೇರೊಂದು ಉದ್ದೇಶಕ್ಕೆ ಬಳಸಿಕೊಳ್ಳಬೇಕಾದರೆ ಅದನ್ನು ಡಿನೋಟಿಫಿಕೇಷನ್‌ ಮಾಡಬೇಕಾಗುತ್ತದೆ. ಆದರೆ, ಅದ್ಯಾವುದೂ ಮಾಡದೆ ಕಾನೂನುಬಾಹಿರವಾಗಿ ಸಚಿವರು ಮನೆ ನಿರ್ಮಿಸಿದ್ದಾರೆ. ಲೇಔಟ್‌ ನಿರ್ಮಿಸಲಾಗಿದೆ. ಇವರ ವಿರುದ್ಧ ಕ್ರಮ ಜರುಗಿಸಬೇಕು. ಸರ್ಕಾರಿ ಆಸ್ತಿಯನ್ನು ಅದರ ಮೂಲ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕು’ ಎಂದು ದೂರುದಾರರಾದ ಡಿ. ವೇಣುಗೋಪಾಲ, ಡಿ. ಅಬ್ದುಲ್‌ ಖದೀರ್‌, ಖಾಜಾ ಮೈನುದ್ದೀನ್‌ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT