ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲದಡಿಯಲ್ಲಿ ವಿದ್ಯುತ್‌ ಪರಿವರ್ತಕ: ಇದೇ ಮೊದಲ ಬಾರಿಗೆ ವಿನೂತನ ಯೋಜನೆ

ಬೆಸ್ಕಾಂ ವತಿಯಿಂದ ಬೆಂಗಳೂರಿನಲ್ಲಿ ಮೊದಲ ಪ್ರಯೋಗ
Last Updated 4 ಜೂನ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ನೆಲದಡಿಯಲ್ಲಿ ವಿದ್ಯುತ್‌ ಪರಿವರ್ತಕ ಅಳವಡಿಸುವ ವಿನೂತನ ಯೋಜನೆಯನ್ನು ಇದೇ ಮೊದಲ ಬಾರಿಗೆ ನಗರದಲ್ಲಿ ಜಾರಿಗೊಳಿಸಲಾಗುತ್ತಿದೆ.

ಪಾದಚಾರಿ ಮಾರ್ಗದಲ್ಲಿ ಕೈಗೊಳ್ಳುತ್ತಿರುವ ಈ ಯೋಜನೆಯು ದೇಶದಲ್ಲಿ ಮೊದಲು ಎಂದು ಬೆಸ್ಕಾಂ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

₹2 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, 500 ಕೆವಿಎ ಸಾಮರ್ಥ್ಯದ ವಿದ್ಯುತ್‌ ಪರಿವರ್ತಕವನ್ನು ನಗರದ ಮಲ್ಲೇಶ್ವರದ 15ನೇ ಅಡ್ಡರಸ್ತೆಯ ಪಾದಚಾರಿ ಮಾರ್ಗದ ಅಡಿಯಲ್ಲಿ ಸ್ಥಾಪಿಸಲಾಗುತ್ತಿದೆ. ಈ ರೀತಿಯ ವ್ಯವಸ್ಥೆಯಿಂದ ವಿದ್ಯುತ್‌ಗೆ ಸಂಬಂಧಿಸಿದ ಅಪಘಾತಗಳನ್ನು ತಡೆಯಬಹುದಾಗಿದೆ ಮತ್ತು ನಿಯಮಿತವಾಗಿ ವಿದ್ಯುತ್‌ ಪೂರೈಕೆಗೆ ಇರುವ ತೊಡಕುಗಳನ್ನು ಸಹ ನಿವಾರಿಸಲು ಸಾಧ್ಯವಾಗಲಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದಲ್ಲಿ ಬೆಸ್ಕಾಂ ಈ ಯೋಜನೆ
ಯನ್ನು ಅನುಷ್ಠಾನಗೊಳಿಸುತ್ತಿದೆ. ಎಲೆಕ್ಟ್ರಿಕಲ್‌ಗೆ ಸಂಬಂಧಿಸಿದ ಕಾರ್ಯಗಳನ್ನು ಬೆಸ್ಕಾಂ ಹಾಗೂ ಸಿವಿಲ್‌ ಕಾಮಗಾರಿಗಳನ್ನು ಬಿಬಿಎಂಪಿ ವಹಿಸಿಕೊಂಡಿದೆ.‌

‘ಸದ್ಯ ಎರಡು ಕಂಬಗಳು ಅಥವಾ ಒಂದು ಕಂಬಕ್ಕೆ ಎತ್ತರದಲ್ಲಿ ವಿದ್ಯುತ್‌ ಪರಿವರ್ತಕಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ, ಪದೇ ಪದೇ ಅವಘಡಗಳು ಸಂಭವಿಸುತ್ತಿರುವುದು ವರದಿಯಾಗುತ್ತಿವೆ. ಸದ್ಯ ಅಪಾಯಕಾರಿ ಎಂದು ಗುರುತಿಸಲಾಗಿರುವ ವಿದ್ಯುತ್‌ ಪರಿವರ್ತಕಗಳನ್ನು ಎತ್ತರಿಸಿದ ಜಾಗದಲ್ಲಿ ಅಥವಾ ಸುರಕ್ಷಿತ ಜಾಗದಲ್ಲಿ ಅಳವಡಿಸುವ ಕಾರ್ಯ ತ್ವರಿತವಾಗಿ ನಡೆಯುತ್ತಿದೆ. ಈಗಿರುವ ಸಮಸ್ಯೆಗಳಿಗೆ ನೆಲದಡಿಯಲ್ಲಿ ಅಳವಡಿಸುವ ಯೋಜನೆ ಶಾಶ್ವತ ಪರಿಹಾರ ಒದಗಿಸಬಹುದು. ಈ ಯೋಜನೆ ಯಶಸ್ವಿಯಾದರೆ ಉಳಿದೆಡೆಯೂ ಹಂತ, ಹಂತವಾಗಿ ಜಾರಿಗೊಳಿಸಲಾಗುವುದು’ ಎಂದು ಬೆಸ್ಕಾಂ ಮಲ್ಲೇಶ್ವರ ವಿಭಾಗದ ಅಧಿಕಾರಿಗಳು ಹೇಳುತ್ತಾರೆ.‌

‘ಪಾದಚಾರಿ ಮಾರ್ಗದಲ್ಲಿ ನಾಲ್ಕು ಮೀಟರ್‌ ಅಡಿ ಆಳದಲ್ಲಿ ವಿದ್ಯುತ್‌ ಪರಿವರ್ತಕ ಅಳವಡಿಸಲಾಗುತ್ತಿದೆ. ಈ ವ್ಯವಸ್ಥೆಗೆ ಹೆಚ್ಚಿನ ಜಾಗದ ಅಗತ್ಯವಿಲ್ಲ. ಕಡಿಮೆ ಜಾಗದಲ್ಲಿ ಸುರಕ್ಷಿತವಾಗಿರುವ ವ್ಯವಸ್ಥೆ ಇದಾಗಿದೆ’ ಎಂದು ಪ್ರತಿಪಾದಿಸುತ್ತಾರೆ.

‘ವಿದ್ಯುತ್‌ ಪರಿವರ್ತಕವು ಸಂಪೂರ್ಣವಾಗಿ ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಇರಲಿದೆ. ಪರಿ ವರ್ತಕ ಇರುವ ಸ್ಥಳದಲ್ಲಿ ತಾಪಮಾನ ಹೆಚ್ಚಾಗದ ರೀತಿಯ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಅಗ್ನಿದುರಂತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಜತೆಗೆ, ಗಾಳಿಯ ವ್ಯವಸ್ಥೆಯೂ ಇರುತ್ತದೆ. ನೀರಿನ ಸಂಪು ಮಾದರಿ ಯಲ್ಲಿ ದಪ್ಪನೆಯ ಕಾಂಕ್ರೀಟ್‌ನ ನಾಲ್ಕು ಗೋಡೆಗಳನ್ನು ನಿರ್ಮಿಸಿ ವಿದ್ಯುತ್‌ ಪರಿವರ್ತಕ ಸ್ಥಾಪಿಸಲಾಗುತ್ತದೆ. ಇಲ್ಲಿ ಸ್ಲ್ಯಾಬ್‌ ಹಾಕುವುದರಿಂದ ನಾಗರಿಕರು ಯಾವುದೇ ರೀತಿಯ ತೊಂದರೆ ಇಲ್ಲದೆಯೇಈ ಸ್ಥಳದ ಮೇಲೆಯೇ ನಡೆದಾಡಬಹುದಾಗಿದೆ’ ಎಂದು ವಿವರಿಸುತ್ತಾರೆ.

‘ಸಾಮಾನ್ಯವಾಗಿ ಅಳವಡಿಸುವ 500 ಕೆವಿಎ ಸಾಮರ್ಥ್ಯದ ವಿದ್ಯುತ್‌ ಪರಿವರ್ತಕ್ಕೆ ಅಂದಾಜು ₹15 ಲಕ್ಷದವರೆಗೆ ವೆಚ್ಚವಾಗುತ್ತದೆ. ಈ ಪರಿವರ್ತಕಗಳಲ್ಲಿ ಆಯಿಲ್‌ ಬಳಸಲಾಗುತ್ತದೆ. ಆದರೆ, ನೆಲದಡಿಯಲ್ಲಿ ಅಳವಡಿಸುವ ವಿದ್ಯುತ್‌ ಪರಿವರ್ತಕಗಳಲ್ಲಿ (ಆರ್‌ಎಂಯು ಟ್ರಾನ್ಸ್‌ಫಾರ್ಮರ್‌) ಆಯಿಲ್‌ (ಡ್ರೈ ಮಾದರಿ) ಇರುವುದಿಲ್ಲ. ಇದರಿಂದ, ಹೆಚ್ಚು ಸುರಕ್ಷಿತವಾಗಿರುತ್ತದೆ’ ಎಂದರು.

ಯೋಜನೆಯ ವಿವರ

* ಒಟ್ಟು ಅಂದಾಜು ವೆಚ್ಚ ₹ 2 ಕೋಟಿ

*ಎಲೆಕ್ಟ್ರಿಕಲ್‌ ಕಾರ್ಯಗಳಿಗೆ ₹1.25 ಕೋಟಿ ವೆಚ್ಚ

*ಉದ್ದ: 14 ಮೀಟರ್‌

* ಅಗಲ: 4 ಮೀಟರ್‌

* ಆಳ: 4 ಮೀಟರ್‌

* ನಾಲ್ಕು ಕಾಂಕ್ರೀಟ್‌ ಗೋಡೆಗಳು

* ಹವಾನಿಯಂತ್ರಿತ ವ್ಯವಸ್ಥೆ ಅಳವಡಿಕೆ

* ಅಗ್ನಿ ನಿಯಂತ್ರಣ ವ್ಯವಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT