ಬೆಂಗಳೂರು: ಉದ್ಯೋಗ ಸೃಷ್ಟಿಸುವುದರ ಬದಲು ನಿರುದ್ಯೋಗವನ್ನು ಸೃಷ್ಟಿಸಿರುವ ಬಿಜೆಪಿ ಸರ್ಕಾರ, ಸುಳ್ಳು ಜಾಹೀರಾತುಗಳ ಮೂಲಕ ಸುಳ್ಳು ಪ್ರಕಟಣೆಗಳನ್ನು ನಿರುದ್ಯೋಗಿ ಯುವಜನರಿಗೆ ಅವಮಾನ ಮಾಡುತ್ತಿದೆ‘ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
‘ಜಾಹೀರಾತುಗಳನ್ನು ಕೊಡಬೇಡಿ ಎಂದು ನಾನು ಹೇಳುತ್ತಿಲ್ಲ. ಜನರ ತೆರಿಗೆ ಹಣವನ್ನು ಬಳಸಿ ಜಾಹೀರಾತುಗಳ ಮೂಲಕ ಸುಳ್ಳುಗಳನ್ನು ಮಾರಾಟ ಮಾಡುವ ಹೀನಾತಿಹೀನ ರಾಜಕೀಯವನ್ನು ರಾಜ್ಯ– ಕೇಂದ್ರದ ಬಿಜೆಪಿ ಸರ್ಕಾರಗಳು ಮಾಡುತ್ತಿವೆ’ ಎಂದು ಆರೋಪಿಸಿದ್ದಾರೆ.
‘ಯುಗಾದಿಯ ದಿನ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ 68.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಿಕೊಂಡಿದೆ. ಹೀಗೆ ಹೇಳಿಕೆ ನೀಡುವವರು ಯಾವ ಯಾವ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಮಾಡಿದ್ದೇವೆ ಎಂದೂ ಹೇಳಬೇಕಲ್ಲವೇ? ಉದ್ಯೋಗವೇ ಸಿಗುತ್ತಿಲ್ಲವೆಂದು ಉದ್ಯೋಗಕ್ಕಾಗಿ ಹುಡುಕಾಟ ನಿಲ್ಲಿಸಿರುವವರ ಸಂಖ್ಯೆ 23.71 ಲಕ್ಷ. ಉದ್ಯೋಗ ಸಿಗುತ್ತದೆ ಎಂಬ ಭರವಸೆಯನ್ನು ಕಳೆದುಕೊಂಡಿರುವ ಯುವಶಕ್ತಿಗೆ ಬಿಜೆಪಿ ಸರ್ಕಾರಗಳು ಏನು ಮಾಡಿವೆ’ ಎಂದು ಅವರು ಪ್ರಶ್ನಿಸಿದ್ದಾರೆ.
‘ಉದ್ಯೋಗಕ್ಕಾಗಿ ಹುಡುಕಾಟ ಮಾಡುತ್ತಿರುವವರು ಮತ್ತು ಉದ್ಯೋಗವನ್ನು ಹುಡುಕಿ ಹುಡುಕಿ ಬೇಸತ್ತು ಹುಡುಕಾಟ ನಿಲ್ಲಿಸಿರುವವರನ್ನು ಒಟ್ಟಾಗಿ ಸೇರಿಸಿದರೆ ಅದನ್ನು ಗ್ರೇಟರ್ ಅನ್‍ಎಂಪ್ಲಾಯ್‍ಮೆಂಟ್ ರೇಟ್ ಎಂದು ಕರೆಯುತ್ತಾರೆ. 2018ರಲ್ಲಿ ಗ್ರೇಟರ್ ಅನ್‍ಎಂಪ್ಲಾಯಿಂಟ್ ದರವು ಶೇ 4.42ರಷ್ಟಿತ್ತು. ಅದು 2022ರಲ್ಲಿ ಶೇ 11.73 ರಷ್ಟಿದೆ. ನಮ್ಮ ಸರ್ಕಾರದ ಅವಧಿಗೆ ಹೋಲಿಸಿದರೆ ಶೇ 7.3ರಷ್ಟು ನಿರುದ್ಯೋಗ ಹೆಚ್ಚಾಗಿದೆ’ ಎಂದಿದ್ದಾರೆ.
‘ಸರ್ಕಾರ ಸ್ಪಷ್ಟವಾದ ದಾಖಲೆಗಳನ್ನು ಬಿಡುಗಡೆ ಮಾಡಬೇಕು. ಈ ಮಹಾ ಸುಳ್ಳಿನ ಕುರಿತು ರಾಜ್ಯದ ಜನರಲ್ಲಿ ಮುಖ್ಯಮಂತ್ರಿ ಕ್ಷಮೆ ಕೇಳಬೇಕು’ ಎಂದೂ ಸಿದ್ದರಾಮಯ್ಯ ಆಗ್ರಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.