ಶನಿವಾರ, ಡಿಸೆಂಬರ್ 3, 2022
21 °C

UPSC ಮುಖ್ಯ ಪರೀಕ್ಷೆ ಫಲಿತಾಂಶ: ರಾಜ್ಯದ ಅಕ್ಷಯ್‌ ಸಿಂಹಗೆ 77ನೇ ರ‍್ಯಾಂಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2020ನೇ ಸಾಲಿನ ಕೇಂದ್ರ ನಾಗರಿಕ ಸೇವಾ (ಐಎಎಸ್‌) ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, 77ನೇ ರ‍್ಯಾಂಕ್‌ ಪಡೆದಿರುವ ಬೆಂಗಳೂರಿನ ಕೆ.ಜೆ. ಅಕ್ಷಯ್‌ ಸಿಂಹ ರಾಜ್ಯಕ್ಕೆ ಮೊದಲಿಗರಾಗಿದ್ದಾರೆ.

ಯತೀಶ್–115, ಪ‍್ರಿಯಾಂಕ ಕೆ.ಎಂ.–121, ನಿಶ್ಚಯ್‌ ಪ್ರಸಾದ್ –130, ಸಿರಿವೆನ್ನೆಲ–204, ಅನಿರುದ್ಧ ಜಿ ಗಂಗಾವರಂ – 252, ಡಿ. ಸೂರಜ್‌ – 255, ನೇತ್ರಾ ಮೇಟಿ – 326, ಮೇಘ ಜೈನ್–354, ಪ್ರಜ್ವಲ್–376, ಸಾಗರ್‌ ಎ ವಾಡಿ–385, ಅರ್ಜುನ್ ಜಿ.ಎಸ್‌.–452, ನಾಗರಗೋಜೆ ಶುಭಂ ಬಾಬುಸಾಹೇಬ್‌–453, ಬಿಂದುಮಣಿ– 468, ಮಾಲಾಶ್ರೀ–504,  ರಾಘವೇಂದ್ರ ಎನ್‌–555, ಶಾಕೀರಅಹ್ಮದ್‌– 583, ಪ್ರಮೋದ್‌ ಆರಾಧ್ಯ ಎಚ್‌.ಆರ್. –601, ಧರ್ಮವೀರ್‌ –657, ಕೆ. ಸೌರಭ್‌– 725, ಸಂದೀಪ್ ಪಿ.ಎಸ್–741, ವೈಶಾಖ್ ಭಾಗಿ–744, ಸಂತೋಷ್ ಎಚ್–751, ಅಮೃತ್ ಎಚ್‌.ವಿ–752ನೇ  ರ‍್ಯಾಂಕ್‌ ಪಡೆದಿದ್ದಾರೆ. 

‘ಪ್ರಜಾವಾಣಿ’ ಜೊತೆ ಮಾತನಾಡಿದ ಅಕ್ಷಯ್‌ ಸಿಂಹ, ‘ಮುಖ್ಯ ಪರೀಕ್ಷೆ ಚೆನ್ನಾಗಿ ಬರೆದಿದ್ದೆ. ಸಂದರ್ಶನವೂ ಚೆನ್ನಾಗಿಯೇ ಆಗಿತ್ತು. ಆದರೆ 77ನೇ ರ‍್ಯಾಂಕ್‌ ಗಳಿಸಬಹುದೆಂಬ ನಿರೀಕ್ಷೆ ಇರಲಿಲ್ಲ’ ಎಂದರು.

‘ಭಾರತೀಯ ವಿದೇಶಾಂಗ ಸೇವೆಗೆ (ಐಎಫ್‌ಎಸ್‌) ಸೇರುವ ಗುರಿ ಇದೆ. ಅದಕ್ಕೆ ಮೊದಲ ಆದ್ಯತೆ ನೀಡಿದ್ದೇನೆ. ಎಲ್ಲರೂ ಐಎಎಸ್‌ಗೆ ಪ್ರಾಧಾನ್ಯತೆ ನೀಡುವುದರಿಂದ ನನಗೆ ಐಎಫ್‌ಎಸ್‌ ಸಿಗಬಹುದೆಂಬ ನಿರೀಕ್ಷೆ ಇದೆ. ವಿದೇಶಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳು, ಸಮ್ಮೇಳನಗಳಲ್ಲಿ ಭಾರತವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯ. ಹೀಗಾಗಿ ಐಎಫ್‌ಎಸ್‌ನತ್ತ ಒಲವು ಹೊಂದಿದ್ದೇನೆ’ ಎಂದರು.

‘2018ರಿಂದಲೇ ಸಿದ್ಧತೆ ಆರಂಭಿಸಿದ್ದೆ. ಈ ಸಾಧನೆಯ ಶ್ರೇಯ ದೊಡ್ಡಪ್ಪ ಸತ್ಯನಾರಾಯಣ ಅವರಿಗೆ ಸಲ್ಲಬೇಕು. ಆದಾಯ ತೆರಿಗೆ ಇಲಾಖೆಯಲ್ಲಿ ಪ್ರಧಾನ ಮುಖ್ಯ ಆಯುಕ್ತರಾಗಿ ಕೆಲಸ ಮಾಡಿ ನಿವೃತ್ತರಾಗಿರುವ ಅವರು ಪ್ರತಿ ಹಂತದಲ್ಲೂ ಸಲಹೆ, ಮಾರ್ಗದರ್ಶನ ನೀಡಿದ್ದರು. ಇನ್‌ಸೈಟ್‌ ಅಕಾಡೆಮಿಯ ವಿನಯ್‌ಕುಮಾರ್‌, ವೆಂಕಟೇಶಪ್ಪ ಅವರ ಸಹಕಾರವನ್ನೂ ಮರೆಯುವಂತಿಲ್ಲ’ ಎಂದರು.

‘ಕೋವಿಡ್‌, ಭಯೋತ್ಪಾದಕತೆ ಹೀಗೆ ನಾನಾ ಸಮಸ್ಯೆಗಳು ಈಗ ಕಾಡುತ್ತಿವೆ. ಇವುಗಳ ವಿರುದ್ಧ ಎಲ್ಲಾ ದೇಶಗಳೂ ಒಗ್ಗಟ್ಟಾಗಿ ಹೋರಾಡಬೇಕು. ಮುಂದೆ ಏನು ಮಾಡಬಹುದು ಎಂಬುದರ ಬಗ್ಗೆ ಹೆಚ್ಚು ಆಲೋಚಿಸಿಲ್ಲ. ಬೇರೆ ಬೇರೆ ದೇಶಗಳಿಗೆ ಭೇಟಿ ನೀಡಿ ಅವರಿಂದ ಹೊಸ ವಿಚಾರಗಳನ್ನು ಕಲಿಯಬೇಕಿದೆ’ ಎಂದರು. ಅಕ್ಷಯ್‌ ಸಿಂಹ ಅವರು ಜಯಸಿಂಹ ಹಾಗೂ ಉಷಾ ದಂಪತಿಯ ಮಗ. ನಗರದ ಸಜ್ಜನರಾವ್‌ ವೃತ್ತದ ಬಳಿಯ ವಾಸವಿದ್ದಾರೆ.

‘ಎಲ್ಲೂ ತರಬೇತಿ ಪಡೆದಿಲ್ಲ’
ಮೈಸೂರಿನ ಜೆಸಿಇ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 2019ರಲ್ಲಿ ಎಂಜಿನಿಯರಿಂಗ್‌ ಮುಗಿಸಿದ್ದೆ. ಆ ಬಾರಿ, ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ, ಐಎಎಸ್‌ ಮಾಡಬೇಕು ಎಂದು ಅಂದುಕೊಂಡಿದ್ದೆ. ಹೀಗಾಗಿ ಈ ಬಾರಿ (2020) ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಂಡು ಓದಿದೆ. ಆದರೆ, ಪರೀಕ್ಷೆಗೆಂದು ಎಲ್ಲೂ ತರಬೇತಿ ಪಡೆದುಕೊಂಡಿಲ್ಲ. ತರಬೇತಿ ಕೇಂದ್ರಗಳಲ್ಲಿ ಐಎಎಸ್‌ ಅಣಕು ಪರೀಕ್ಷೆಗಳಿಗೆ ಹಾಜರಾಗಿದ್ದೆ. ತಂದೆ ಪ್ರಸಾದ್‌ ಅವರು ಗುತ್ತಿಗೆದಾರ. ತಾಯಿ ಗಾಯತ್ರಿ ವೈದ್ಯೆ. ಪೋಷಕರ ಸಹಕಾರ, ಮಾರ್ಗದರ್ಶನದಿಂದ ಯಶಸ್ಸು ಸಾಧಿಸಲು ಸಾಧ್ಯವಾಗಿದೆ.
-ನಿಶ್ಚಯ್‌ 130ನೇ ರ‍್ಯಾಂಕ್ ರಾಮಕೃಷ್ಣ ನಗರ, ಮೈಸೂರು

ಇದನ್ನೂ ಓದಿ: 

‘ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ ನೆರವಾಯಿತು’
‘ಆಡಳಿತದಲ್ಲಿ ತಂತ್ರಜ್ಞಾನ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕು ಎಂಬುದು ನನ್ನ ಮೊದಲ ಆದ್ಯತೆ. ಪರಿಸರ ಮತ್ತು ಮಹಿಳಾ ಪರ ಧ್ವನಿಯಾಗಬೇಕು ಎಂಬುದು ನನ್ನ ಹಂಬಲವಾಗಿದೆ. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಸಂಪಾದಯಕೀಯ ಪ್ರಚಲಿತ ವಿದ್ಯಾಮಾನ ವಿಭಾಗಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಹೆಚ್ಚಿನ ನೆರವಾಯಿತು’

‘ಯುಪಿಎಸ್‌ಸಿ ಪರೀಕ್ಷೆಗಾಗಿ ಐದು ವರ್ಷಗಳಿಂದ ಸಿದ್ಧತೆ ನಡೆಸಿದ್ದೆ. ಹೋದ ವರ್ಷ ಸಂದರ್ಶನದವರೆಗೂ ಹೋಗಿ ಬಂದಿರುವೆ. ಬೆಂಗಳೂರಿನ ಎರಡು ಸಂಸ್ಥೆಗಳಲ್ಲಿ ಆನ್‌ಲೈನ್‌ ತರಬೇತಿ ಪಡೆದುಕೊಂಡಿರುವೆ. ಯುಪಿಎಸ್‌ಸಿ ರ‍್ಯಾಂಕಿಂಗ್‌ ಪ್ರಕಾರ ನನಗೆ ಎಎಎಸ್‌ ಅಥವಾ ಎಎಫ್‌ಎಸ್‌(ಭಾರತೀಯ ವಿದೇಶಾಂಗ ಸೇವೆ) ಹುದ್ದೆ ಲಭಿಸುವ ಸಾಧ್ಯತೆ ಇದೆ. ತಂದೆ ಎಸ್‌ಬಿಐ ನಿವೃತ್ತ ಉದ್ಯೋಗಿ ಬಾಲಚಂದ್ರ ಮೇಟಿ. ತಾಯಿ ಅಕ್ಕಮ್ಮ ಮೇಟಿ’
-ನೇತ್ರಾ ಮೇಟಿ 326ನೇ ರ‍್ಯಾಂಕ್‌, ಆಲಮಟ್ಟಿ, ವಿಜಯಪುರ

‘ಹಲವು ಬಾರಿ ಪ್ರಯತ್ನ ನೆರವಾಯಿತು’
‘ಪೋಷಕರ ಪ್ರೋತ್ಸಾಹ ಮತ್ತು ತ್ಯಾಗ ಹಾಗೂ ಗುರುಗಳ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ. ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಆದರೆ, ಸರ್ಕಾರಿ ಸೇವೆಗೆ ಸೇರಬೇಕು ಮತ್ತು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಬಯಕೆ ಇತ್ತು. ಹೀಗಾಗಿ, ಆ ಕೆಲಸ ಬಿಟ್ಟು ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ಪರೀಕ್ಷೆಗಳನ್ನು ಎದುರಿಸಿದೆ’

‘ಯುಪಿಎಸ್‌ಸಿಯಲ್ಲಿ ಹಲವು ಬಾರಿ ಪ್ರಯತ್ನ ಮಾಡಿದ್ದೇನೆ. ಆದರೆ, ಧೃತಿಗೆಡಲಿಲ್ಲ. ಸತತ ಪ್ರಯತ್ನ ಮಾಡಿದ್ದರಿಂದ ಸಾಧನೆ ಮಾಡಲು ಸಾಧ್ಯವಾಯಿತು. ಕೆಎಎಸ್‌ ಅಧಿಕಾರಿಯಾಗಿ ಕೆಲಸದ ನಡುವೆಯೂ ಯುಪಿಎಸ್‌ಸಿ ಪರೀಕ್ಷೆಗೆ ಪ್ರಯತ್ನ ಮುಂದುವರಿಸಿದ್ದೆ. ಹಲವು ಬಾರಿ ಪ್ರಯತ್ನದಿಂದ ನೆರವಾಯಿತು. ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾ ಸುಧಾರಿಸಿಕೊಂಡೆ’

‘ಆರಂಭದಲ್ಲಿ ಮಾತ್ರ ದೆಹಲಿಯಲ್ಲಿ ಕೋಚಿಂಗ್ ಪಡೆದಿದ್ದೆ. ಬಳಿಕ ಅನುಭವಗಳೇ ನನಗೆ ಕಲಿಸಿದವು.
-ಶಾಕೀರಅಹ್ಮದ್‌ 583ನೇ ರ‍್ಯಾಂಕ್, ಸವದತ್ತಿ, ಬೆಳಗಾವಿ

ಇವನ್ನೂ ಓದಿ


ಯುಪಿಎಸ್‌ಸಿ ಫಲಿತಾಂಶ: ಬೆಳಗಾವಿ ಜಿಲ್ಲೆಯ ಶಾಕೀರಅಹ್ಮದಗೆ 583ನೇ ರ‍್ಯಾಂಕ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು